Uttar Pradesh Election: ಉತ್ತರ ಪ್ರದೇಶದಲ್ಲಿ ಇಂದು ಅಂತಿಮ ಹಂತದ ಮತದಾನ: ನೀವು ತಿಳಿಯಬೇಕಾದ 10 ಅಂಶಗಳಿವು

| Updated By: Lakshmi Hegde

Updated on: Mar 07, 2022 | 8:02 AM

ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿರುವ ದೇಶದ ಬೃಹತ್ ರಾಜ್ಯದ ಅಂತಿಮ ಹಂತದ ಮತದಾನದ ಬಗ್ಗೆ ದೇಶವ್ಯಾಪಿ ಕುತೂಹಲ ವ್ಯಕ್ತವಾಗಿದೆ

Uttar Pradesh Election: ಉತ್ತರ ಪ್ರದೇಶದಲ್ಲಿ ಇಂದು ಅಂತಿಮ ಹಂತದ ಮತದಾನ: ನೀವು ತಿಳಿಯಬೇಕಾದ 10 ಅಂಶಗಳಿವು
ಉತ್ತರ ಪ್ರದೇಶ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ
Follow us on

ಲಖನೌ: ಇಡೀ ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ಚುನಾವಣೆಯ (Uttar Pradesh Election) ಅಂತಿಮ ಹಾಗೂ 7ನೇ ಹಂತದ ಮತದಾನ ಇಂದು (ಮಾರ್ಚ್ 7) ನಡೆಯಲಿದೆ. 54 ವಿಧಾನಸಭಾ ಕ್ಷೇತ್ರಗಳಲ್ಲಿ ಉಮೇದುವಾರರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗಿರುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂದೇ ಮತದಾನ ನಡೆಯಲಿದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿರುವ ದೇಶದ ಬೃಹತ್ ರಾಜ್ಯದ ಅಂತಿಮ ಹಂತದ ಮತದಾನದ ಬಗ್ಗೆ ದೇಶವ್ಯಾಪಿ ಕುತೂಹಲ ವ್ಯಕ್ತವಾಗಿದೆ. ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಮೇಲುಗೈ ಸಾಧಿಸಿದರೆ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ಈ ರಾಜ್ಯದಲ್ಲಿ ಬಿಜೆಪಿ ಪ್ರಭಾವ ವಿಸ್ತರಿಸಿ, ಮತ್ತೊಂದು ಅವಧಿಗೆ ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಸ್ಥಾಪನೆಯಾಗಬಹುದು ಎಂದು ಹೇಳಲಾಗುತ್ತಿದೆ.

  1. ಉತ್ತರ ಪ್ರದೇಶದ ಅಜಂಗಡ, ಮೌ, ಜೌನ್​ಪುರ್, ಘಾಜಿಪುರ, ಚಾಂಡೌಲಿ, ವಾರಾಣಸಿ, ಮಿರ್ಝಾಪುರ, ಭಡೋಹಿ ಮತ್ತು ಸೊನ್​ಭದ್ರಾ ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
  2. ವಾರಾಣಸಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಬನಾರಸ್ ಸಿಟಿ ದಕ್ಷಿಣ, ಬನಾರಸ್ ಸಿಟಿ ಉತ್ತರ, ಶಿವಪುರ, ಸೇವಾಪುರಿ, ಕಂಟೋನ್​ಮೆಂಟ್, ಅಜ್​ಗರಾ, ಪಿಂಡ್ರಾ ಮತ್ತು ರೊಹಣಿಯಾ ಕ್ಷೇತ್ರಗಳಲ್ಲಿ ಹಲವು ಪ್ರತಿಷ್ಠಿತ ಉಮೇದುವಾರರು ಸ್ಪರ್ಧಿಸಿದ್ದು, ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
  3. ಕಳೆದ ಬಾರಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಈ ವಲಯದಲ್ಲಿ ನಿಚ್ಚಳ ಮೇಲುಗೈ ಸಾಧಿಸಿದ್ದವು. ಈ ಪೈಕಿ 6 ಕ್ಷೇತ್ರಗಳಲಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಮಿತ್ರ ಪಕ್ಷಗಳಾದ ಅನುಪ್ರಿಯಾ ಪಟೇಲರ ಅಪ್ನಾ ದಳ್ (ಎಸ್) ಮತ್ತು ಓಂ ಪ್ರಕಾಶ್​ ರಾಜ್​ಭರ್​ರ ಸುಹೆಲ್​ದೇವ್ ಭಾರತೀಯ ಸಮಾಜ ಪಾರ್ಟಿ (ಎಸ್​ಬಿಎಸ್​ಪಿ) ತಲಾ ಒಂದು ಸ್ಥಾನ ಪಡೆದಿದ್ದವು. ಎಸ್​ಬಿಎಸ್​ಪಿ ಪಕ್ಷವು ಇದೀಗ ಬಿಜೆಪಿ ವಿರೋಧಿ ಎಸ್​ಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ.
  4. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಕ್ಷೇತ್ರ ವಾರಾಣಸಿ ವ್ಯಾಪ್ತಿಯಲ್ಲಿರುವ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜಿದ್ದಾಜಿದ್ದಿ ಪೈಪೋಟಿ ಕಾಣಿಸಿದೆ. ಅಕ್ಕಪಕ್ಕದ ಮಿರ್ಖಾಪುರ ಮತ್ತು ಜೌನ್​ಪುರಗಳಲ್ಲಿಯೂ ಬಿಜೆಪಿಗೆ ಗೆಲುವು ಸುಲಭ ಎನಿಸುತ್ತಿಲ್ಲ.
  5. ವಾರಾಣಸಿ ಕ್ಷೇತ್ರದಲ್ಲಿ 3 ಲಕ್ಷ ಮುಸ್ಲಿಮರು, 3.25 ಲಕ್ಷ ವೈಶ್ಯರು, ಪಟೇಲರು ಮತ್ತು ಕುರ್ಮಿಗಳು (2 ಲಕ್ಷ), ಯಾದವರು (1.5 ಲಕ್ಷ), ಠಾಕೂರರು (1 ಲಕ್ಷ), ದಲಿತರು (80,000) ಮತ್ತು ಇತರ ಒಬಿಸಿ ಜಾತಿಗಳಿಗೆ ಸೇರಿದ 70,000 ಮತದಾರರು ವಾರಾಣಸಿಯಲ್ಲಿದ್ದಾರೆ.
  6. ಅಖಿಲೇಶ್​ ಯಾದವ್​ರ ಎಸ್​ಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಅಪ್ನಾ ದಳ್ (ಕೆ), ಎಸ್​ಬಿಎಸ್​ಪಿ ಮತ್ತು ಬಿಜೆಪಿ ಮಿತ್ರಪಕ್ಷಗಳಾಗಿರುವ ಅಪ್ನಾದಳ್ ಹಾಗೂ ನಿಶಾದ್ ಪಕ್ಷಗಳು ಈ ಪ್ರದೇಶದಲ್ಲಿ ಮುನ್ನಡೆ ದಾಖಲಿಸಬಹುದು ಎಂದು ವಿಶ್ಲೇಷಿಸಲಾಗಿದೆ.
  7. ವಾರಾಣಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ನಾಲ್ವರು ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದಾರೆ. ಉಳಿದ ನಾಲ್ಕನ್ನು ತಮ್ಮ ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದಾರೆ. ಬಿಜೆಪಿ ಈ ಪ್ರದೇಶದಲ್ಲಿ 7 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಆದರೆ ರೊಹಣಿಯಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಅನುಪ್ರಿಯಾ ಪಟೇಲ್​ರ ಅಪ್ನಾದಳ್​ಗೆ (ಎಸ್​) ಬಿಟ್ಟುಕೊಟ್ಟಿದೆ.
  8. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಂಸದರಾಗಿರುವ ಅಜಂಗಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಇಂದು ಚುನಾವಣೆಯಲಿದೆ. ಹೀಗಾಗಿ ಸಮಾಜವಾದಿ ಪಕ್ಷಕ್ಕೂ ಇದು ಪ್ರತಿಷ್ಠೆಯ ವಿಚಾರ ಎನಿಸಿಕೊಂಡಿದೆ. 2017ರಲ್ಲಿ ಬಿಜೆಪಿ ರಾಜ್ಯದೆಲ್ಲೆಡೆ ಜಯಗಳಿಸಿದರೂ ಈ ಪ್ರದೇಶದಲ್ಲಿ ಎಸ್​ಪಿ ಅಭ್ಯರ್ಥಿಗಳೇ ಗೆದ್ದಿದ್ದರು. ಜಿಲ್ಲೆಯ 10 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಎಸ್​ಪಿ ಜಯಗಳಿಸಿದ್ದರು.
  9. ಉತ್ತರ ಪ್ರದೇಶ ಮತ್ತು ಇತರ ನಾಲ್ಕು ರಾಜ್ಯಗಳ ಚುನಾವಣೆಯ ಮತಎಣಿಕೆ ಕಾರ್ಯ ಮಾರ್ಚ್ 10ರಂದು ನಡೆಯಲಿದೆ.
  10. ಕೊರೊನಾ ಪಿಡುಗಿನ ನಿರ್ವಹಣೆ, ಆರ್ಥಿಕ ಹಿಂಜರಿತ, ಕೇಂದ್ರ ಬೊಕ್ಕಸದ ಮೇಲಿನ ಹೊರೆಯ ಹೆಚ್ಚಳ, ಗೋರಕ್ಷಣೆ, ಹಿಂದುತ್ವ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ರೌಡಿ ಪಿಡುಗು ಸೇರಿದಂತೆ ಹಲವು ವಿಚಾರಗಳು ಉತ್ತರ ಪ್ರದೇಶ ಚುನಾವಣೆಯಲ್ಲಿ ಚರ್ಚೆಯಾಗಿದ್ದವು.

ಇದನ್ನೂ ಓದಿ: UP Election 2022 ಈ ಬಾರಿ ಪಾಶ್ಚಾತ್ಯ ಉಡುಗೆ ಧರಿಸಿ ಗಮನ ಸೆಳೆದ ಉತ್ತರ ಪ್ರದೇಶದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ

ಇದನ್ನೂ ಓದಿ: ಉತ್ತರ ಪ್ರದೇಶದ ನಾಲ್ಕನೇ ಹಂತದ ಚುನಾವಣೆಯ ಅಭ್ಯರ್ಥಿಗಳಲ್ಲಿ ಶೇ 21 ಮಂದಿ ವಿರುದ್ಧವಿದೆ ಕ್ರಿಮಿನಲ್ ಆರೋಪ: ಎಡಿಆರ್ ವರದಿ

Published On - 7:58 am, Mon, 7 March 22