ಉತ್ತರ ಪ್ರದೇಶದ ನಾಲ್ಕನೇ ಹಂತದ ಚುನಾವಣೆಯ ಅಭ್ಯರ್ಥಿಗಳಲ್ಲಿ ಶೇ 21 ಮಂದಿ ವಿರುದ್ಧವಿದೆ ಕ್ರಿಮಿನಲ್ ಆರೋಪ: ಎಡಿಆರ್ ವರದಿ
ವರದಿಯ ಪ್ರಕಾರ, ಇಬ್ಬರು ಅಭ್ಯರ್ಥಿಗಳು ಅತ್ಯಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ, ಐವರು ಕೊಲೆ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು 11 ಮಂದಿ 'ಕೊಲೆ ಯತ್ನ' ಆರೋಪಗಳನ್ನು ಎದುರಿಸುತ್ತಿದ್ದಾರೆ.
ದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ADR) ಬಿಡುಗಡೆ ಮಾಡಿದ ವರದಿಯ ಪ್ರಕಾರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (Uttar Pradesh Assembly Elections) ನಾಲ್ಕನೇ ಹಂತದಲ್ಲಿ ಸ್ಪರ್ಧಿಸಿರುವ 621 ಅಭ್ಯರ್ಥಿಗಳಲ್ಲಿ 129 ಅಥವಾ ಶೇ 21 ಅಭ್ಯರ್ಥಿಗಳು ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಎಡಿಆರ್ ವರದಿ, ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆಯನ್ನು ಆಧರಿಸಿ 167 (ಶೇ 27) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಫೆಬ್ರವರಿ 23 ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿರುವ 59 ಕ್ಷೇತ್ರಗಳಲ್ಲಿ ಇಪ್ಪತ್ತೊಂಬತ್ತು (ಶೇ 49%) “ರೆಡ್ ಅಲರ್ಟ್” (Red Alert) ಕ್ಷೇತ್ರಗಳಾಗಿವೆ. ರೆಡ್ ಅಲರ್ಟ್ ಕ್ಷೇತ್ರಗಳೆಂದರೆ ಮೂರು ಅಥವಾ ಅದಕ್ಕಿಂತ ಹೆಚ್ಚು ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿರುವವರು. ವರದಿಯ ಪ್ರಕಾರ, ಇಬ್ಬರು ಅಭ್ಯರ್ಥಿಗಳು ಅತ್ಯಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ, ಐವರು ಕೊಲೆ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು 11 ಮಂದಿ ‘ಕೊಲೆ ಯತ್ನ’ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖ ಪಕ್ಷಗಳಲ್ಲಿ ಕಾಂಗ್ರೆಸ್‌ನ 58 ಅಭ್ಯರ್ಥಿಗಳಲ್ಲಿ 22 (38%), ಸಮಾಜವಾದಿ ಪಕ್ಷದ 55 ನಾಮನಿರ್ದೇಶಿತರಲ್ಲಿ 22 (39%), ಬಹುಜನ ಸಮಾಜ ಪಕ್ಷದಲ್ಲಿ 59 ಅಭ್ಯರ್ಥಿಗಳ ಪೈಕಿ 22 (37%), 57 ಭಾರತೀಯ ಜನತಾ ಪಕ್ಷ (ಬಿಜೆಪಿ)ದ 57 ಅಭ್ಯರ್ಥಿಗಳ ಪೈಕಿ 17(ಶೇ 30) ಮತ್ತು 45 ಆಮ್ ಆದ್ಮಿ ಪಕ್ಷದ (ಎಎಪಿ) ಸ್ಪರ್ಧಿಗಳಲ್ಲಿ ಒಂಬತ್ತು (20%) ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಫೆಬ್ರವರಿ 2020 ರಲ್ಲಿ ಸುಪ್ರೀಂಕೋರ್ಟ್ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದನ್ನು ಸಮರ್ಥಿಸುವಂತೆ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿತು ಮತ್ತು ಕ್ರಿಮಿನಲ್ ದಾಖಲೆಯಿಲ್ಲದ ಇತರರನ್ನು ಏಕೆ ಆಯ್ಕೆ ಮಾಡಲಾಗುವುದಿಲ್ಲ ಎಂದು ಕೇಳಿತ್ತು.
ಎಡಿಆರ್ ವರದಿಯು ತಾನು ಸಂಗ್ರಹಿಸಿದ ದತ್ತಾಂಶವು ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಲು ರಾಜಕೀಯ ಪಕ್ಷಗಳಿಗೆ ಯಾವುದೇ ಆಸಕ್ತಿಯನ್ನು ಹೊಂದಿಲ್ಲ ಎಂದು ತೋರಿಸುತ್ತದೆ ಎಂದು ಗಮನಿಸಿರುವುದಾಗಿ ಹೇಳಿದೆ. ನಮ್ಮ ಪ್ರಜಾಪ್ರಭುತ್ವವು ಕಾನೂನು ಉಲ್ಲಂಘಿಸುವವರು ಶಾಸಕರಾಗುವುದರಿಂದ ಸಂಕಷ್ಟಕ್ಕೀಡಗುತ್ತದೆ ಎಂದು ಎಡಿಆರ್ ವರದಿ ಹೇಳಿದೆ.
621 ಅಭ್ಯರ್ಥಿಗಳಲ್ಲಿ 231 (37%) ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿರುವ ಅಭ್ಯರ್ಥಿಗಳು ಎಂದು ವರದಿ ತೋರಿಸಿದೆ. ಪ್ರಮುಖ ಪಕ್ಷಗಳಲ್ಲಿ, ಬಿಜೆಪಿಯ 57 ಅಭ್ಯರ್ಥಿಗಳಲ್ಲಿ 50 (88%), ಎಸ್‌ಪಿಯ 57 ಅಭ್ಯರ್ಥಿಗಳಲ್ಲಿ 48 (84%), 59 ಬಿಎಸ್‌ಪಿ ಅಭ್ಯರ್ಥಿಗಳಲ್ಲಿ 44 (75%), ಕಾಂಗ್ರೆಸ್‌ನ 58 ಅಭ್ಯರ್ಥಿಗಳಲ್ಲಿ 28 (48%), ಮತ್ತು 45 ಎಎಪಿ ಅಭ್ಯರ್ಥಿಗಳಲ್ಲಿ 16 (36%) ₹ 1 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಲಕ್ನೋದಿಂದ ಸ್ಪರ್ಧಿಸಿರುವ ಎಎಪಿ ಅಭ್ಯರ್ಥಿ ರಾಜೀವ್ ಬಕ್ಷಿ ಅವರು ₹56.6 ಕೋಟಿ ಮೌಲ್ಯದ ಅತ್ಯಧಿಕ ಆಸ್ತಿ ಘೋಷಿಸಿದ್ದರೆ, ಖಗಾ ಕ್ಷೇತ್ರದ ಆಪ್ ಅಭ್ಯರ್ಥಿ ವಿಜಯ್ ಕುಮಾರ್ ಅವರು ತಮ್ಮ ಸ್ವಯಂ ಪ್ರಮಾಣ ಪತ್ರದಲ್ಲಿ ಶೂನ್ಯ ಆಸ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ: Hijab row: ಉತ್ತರ ಪ್ರದೇಶದ ಅಲಿಗಢ ಧರ್ಮ ಸಮಾಜ ಕಾಲೇಜು ಸಹ ಸಮವಸ್ತ್ರ ಶಿಷ್ಟಾಚಾರ ವಿಧಿಸಿತು