ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು (BJP and Samajwadi Party) ಅಭ್ಯರ್ಥಿಗಳ ಆಯ್ಕೆಯಲ್ಲಿ ಕೆಲವು ಅಚ್ಚರಿಯ ನಡೆ ತೋರಿಸುತ್ತಿವೆ. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯರಿಗೆ ಸಮಾಜವಾದಿ ಪಕ್ಷ, ಕುಶಿನಗರ ಜಿಲ್ಲೆಯ ಫಜಿಲ್ನಗರ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಹಿಂದುಳಿದ ವರ್ಗದ ಪ್ರಬಲ ನಾಯಕರಾದ ಅವರು ಈ ಹಿಂದೆ ಪದ್ರೌನಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದಾರೆ. ಆದರೆ ಎಸ್ಪಿ ಅವರನ್ನು ಈ ಸಲ ಪದ್ರೌನದಿಂದ ಫಜಿಲ್ನಗರಕ್ಕೆ ಶಿಫ್ಟ್ ಮಾಡಿದೆ. ಹಾಗೇ, ಸಿರಥು ಕ್ಷೇತ್ರದಲ್ಲಿ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯರಿಗೆ ಮುಖಾಮುಖಿಯಾಗಿ ಎಸ್ಪಿಯಿಂದ ಪಲ್ಲವಿ ಪಟೇಲ್ ಎಂಬುವರು ಕಣಕ್ಕಿಳಿದಿದ್ದಾರೆ.
ಇನ್ನೊಂದೆಡೆ ಬಿಜೆಪಿಯಿಂದ ಸರೋಜಿನಿ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಜೇಶ್ವರ್ ಸಿಂಗ್ ವಿರುದ್ಧ ಎಸ್ಪಿ ಅಭಿಷೇಕ್ ಮಿಶ್ರಾರನ್ನು ಕಣಕ್ಕಿಳಿಸಿದೆ. ರಾಜೇಶ್ವರ್ ಸಿಂಗ್ ಅವರು ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದು, ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಅಭಿಷೇಕ್ ಮಿಶ್ರಾ ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕರು. ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಖನೌ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಇಷ್ಟು ದಿನ ಅಲ್ಲಿಯೇ ಚುನಾವಣಾ ಪ್ರಚಾರವನ್ನೂ ನಡೆಸಿದ್ದರು. ಆದರೆ ಈಗ ಅವರಿಗೆ ಸರೋಜಿನಿ ನಗರದಿಂದ ಎಸ್ಪಿ ಟಿಕೆಟ್ ಸಿಕ್ಕಿದೆ.
ಉತ್ತರ ಪ್ರದೇಶ ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಇಲಾಖೆ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಜನವರಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಹಿಂದುಳಿದ ವರ್ಗದ ನಾಯಕರಾಗಿದ್ದ ಇವರು ಎಸ್ಪಿ ಸೇರ್ಪಡೆ ಬೆನ್ನಲ್ಲೇ, ಇನ್ನೂ ಇಬ್ಬರು ಸಚಿವರು, ಶಾಸಕರು ಕೂಡ ಅವರನ್ನು ಹಿಂಬಾಲಿಸಿದ್ದರು. 2017ರಲ್ಲಿ ಸರ್ಕಾರ ರಚಿಸಿರುವ ಬಿಜೆಪಿ ಸರ್ಕಾರ ಅಂದಿನಿಂದಲೂ ಹಿಂದುಳಿದ ವರ್ಗದವರ ಏಳ್ಗೆಗೆ ಏನೂ ಮಾಡಿಲ್ಲ. ಅವರನ್ನು ನಿರ್ಲಕ್ಷಿಸುತ್ತಿದೆ ಎಂಬುದು ಅವರ ಆರೋಪವಾಗಿತ್ತು. 2017ರ ಚುನಾವಣೆ ಸಂದರ್ಭದಲ್ಲಿ ಕೇಶವ್ ಪ್ರಸಾದ್ ಮೌರ್ಯರನ್ನು ಬಿಜೆಪಿ ಅಭ್ಯರ್ಥಿಯಂತೆ ಬಿಂಬಿಸಿದ್ದ ಬಿಜೆಪಿ ಗೆದ್ದ ಬಳಿಕ ಗೋರಖಪುರದಿಂದ ಒಬ್ಬರನ್ನು (ಯೋಗಿ ಆದಿತ್ಯನಾಥ್) ಕರೆದುಕೊಂಡು ಬಂತು ಎಂದೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವುದು ಸಮಾಜವಾದಿ ಪಕ್ಷವೇ ಆಗಿದೆ.
ಇದನ್ನೂ ಓದಿ: ಸದನದಲ್ಲಿ ಅಡ್ಡಿಪಡಿಸುವುದು ಸರಿಯಲ್ಲ, ಜನರ ವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಿ: ಸಂಸದರಿಗೆ ವೆಂಕಯ್ಯ ನಾಯ್ಡು ಕಿವಿ ಮಾತು
Published On - 2:46 pm, Wed, 2 February 22