Yogi Adityanath: ಯೋಗಿಯಿಂದ ನೊಯ್ಡಾದ ಶಾಪ ವಿಮೋಚನೆ​; ಅಪಶಕುನವಾಗಿದ್ದ ಸ್ಥಳಕ್ಕೆ ಹೋದರೂ ಗೆದ್ದ ಸಿಎಂ ಆದಿತ್ಯನಾಥ್!

| Updated By: ಸುಷ್ಮಾ ಚಕ್ರೆ

Updated on: Mar 10, 2022 | 2:46 PM

Uttar Pradesh Election Results: ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ರಾಜಕೀಯದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಎರಡು ಮೂಢನಂಬಿಕೆಗಳಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ.

Yogi Adityanath: ಯೋಗಿಯಿಂದ ನೊಯ್ಡಾದ ಶಾಪ ವಿಮೋಚನೆ​; ಅಪಶಕುನವಾಗಿದ್ದ ಸ್ಥಳಕ್ಕೆ ಹೋದರೂ ಗೆದ್ದ ಸಿಎಂ ಆದಿತ್ಯನಾಥ್!
ಯೋಗಿ ಆದಿತ್ಯನಾಥ್
Follow us on

ನವದೆಹಲಿ: ‘ಒಳ್ಳೆ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಆ ಕೆಲಸ ಆಗುವುದಿಲ್ಲ’ ಎಂಬುದು ಬಹುತೇಕ ಕಡೆಗಳಲ್ಲಿ ಮೊದಲಿನಿಂದಲೂ ಇರುವ ನಂಬಿಕೆ. ಹೀಗಾಗಿಯೇ ಬೆಕ್ಕು ಅಡ್ಡ ಹೋದರೆ ವಾಪಾಸ್ ಮನೆಗೆ ಹೋಗಿ ಸ್ವಲ್ಪ ಸಮಯದ ನಂತರ ಆ ಕೆಲಸಕ್ಕೆ ಹೊರಡುವವರೂ ಇದ್ದಾರೆ. ಹಾಗೇ, ದೈನಂದಿನ ಜೀವನ ಮಾತ್ರವಲ್ಲದೆ ರಾಜಕೀಯ, ಚಿತ್ರರಂಗ, ಉದ್ಯಮ ಹೀಗೆ ಎಲ್ಲ ವಲಯದಲ್ಲೂ ಕೆಲವೊಂದು ಮೂಢನಂಬಿಕೆಗಳಿರುತ್ತವೆ. ರಾಜಕಾರಣದಲ್ಲಿ ಕೆಲವೊಂದು ‘ಶಾಪಗ್ರಸ್ಥ’ ಊರುಗಳಿವೆ. ಆ ಊರಿಗೆ ಹೋದವರು ಅಧಿಕಾರದಿಂದ ಕೆಳಗೆ ಇಳಿಯುತ್ತಾರೆ ಎಂಬ ನಂಬಿಕೆಯಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾದವರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ನಂಬಿಕೆಯಿದೆ. ಅದೇ ಕಾರಣದಿಂದ ಹಲವು ರಾಜಕಾರಣಿಗಳು ಚಾಮರಾಜನಗರಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ. ಅದೇ ರೀತಿ ಉತ್ತರ ಪ್ರದೇಶದ ನೊಯ್ಡಾ ಕೂಡ ‘ಶಾಪಗ್ರಸ್ಥ’ ಎಂದು ಕರೆಯಲ್ಪಡುವ ಊರಾಗಿತ್ತು. ನೊಯ್ಡಾಗೆ (Noida) ಹೋದವರು ಅಧಿಕಾರದಿಂದ ವಂಚಿತರಾಗುತ್ತಾರೆ ಎಂಬ ನಂಬಿಕೆಯಿತ್ತು. ಆದರೆ, ನೊಯ್ಡಾಗೆ ಭೇಟಿ ನೀಡಿದ್ದರೂ ಮತ್ತೆ ಚುನಾವಣೆಯಲ್ಲಿ ವಿಜಯದ ನಗು ಬೀರುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಈ ಮೂಢನಂಬಿಕೆಯನ್ನು ಕಿತ್ತೆಸೆದಿದ್ದಾರೆ.

ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಸಂಭ್ರಮದಲ್ಲಿದೆ. ಉತ್ತರ ಪ್ರದೇಶದ ಬಿಜೆಪಿಯ ಸಿಎಂ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟಕ್ಕೇರುವ ಸಿದ್ಧತೆಯಲ್ಲಿದ್ದಾರೆ. ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಈ ಗೆಲುವಿನೊಂದಿಗೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಹಲವು ವರ್ಷಗಳ ಕಾಲ ಉತ್ತರ ಪ್ರದೇಶದ ರಾಜಕಾರಣದ ಭಾಗವಾಗಿದ್ದ ಮೂಢನಂಬಿಕೆ (ಶಾಪ)ವೊಂದನ್ನು ಕೊನೆಗೊಳಿಸಿದೆ.

ಪಶ್ಚಿಮ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿರುವ ದೆಹಲಿಯ ಪಕ್ಕದಲ್ಲಿರುವ ನೋಯ್ಡಾಗೆ ಭೇಟಿ ನೀಡುವುದು ಶಾಪ ಎಂಬ ನಂಬಿಕೆ ಈ ಹಿಂದೆ ರಾಜಕೀಯ ಪಕ್ಷಗಳ ನಾಯಕರಲ್ಲಿತ್ತು. ಈ ಪ್ರದೇಶಕ್ಕೆ ಭೇಟಿ ನೀಡುವುದು ಮುಖ್ಯಮಂತ್ರಿಗೆ ಕೆಟ್ಟ ಶಕುನ ಎಂದು ನಂಬಲಾಗುತ್ತಿತ್ತು. ನೋಯ್ಡಾಗೆ ಭೇಟಿ ನೀಡುವುದು ಹಾಲಿ ಮುಖ್ಯಮಂತ್ರಿಗಳಿಗೆ ಅಶುಭವೆಂದು ಹಲವು ಬಾರಿ ಸಾಬೀತಾಗಿತ್ತು. ಆದರೆ, ಯೋಗಿ ಆದಿತ್ಯನಾಥ್ ನೊಯ್ಡಾಗೆ ಭೇಟಿ ನೀಡಿದ್ದರೂ ಎರಡನೇ ಬಾರಿಗೆ ಚುನಾವಣೆಯಲ್ಲಿ ಗೆಲುವು ಕಾಣುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸನ್ನಾಹದಲ್ಲಿದ್ದಾರೆ.

ನೊಯ್ಡಾಗೂ ಶಾಪ ವಿಮೋಚನೆ!:
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರ್ ಬಹದ್ದೂರ್ ಸಿಂಗ್ ಅವರು ನೋಯ್ಡಾದಿಂದ ಹಿಂದಿರುಗಿದ ಕೆಲವೇ ದಿನಗಳ ನಂತರ 1988ರ ಜೂನ್​ನಲ್ಲಿ ರಾಜೀನಾಮೆ ನೀಡಬೇಕಾಯಿತು. ಮಾಯಾವತಿ ಅವರು ಗೌತಮ್ ಬುದ್ಧ ನಗರಕ್ಕೆ ಭೇಟಿ ನೀಡಿದ ಬೆನ್ನಲ್ಲೇ 2012ರ ಚುನಾವಣೆಯಲ್ಲಿ ಅವರ ಪಕ್ಷವು ಹೀನಾಯವಾಗಿ ಸೋತಿತ್ತು. ಇದೇ ಭಯದಿಂದ 2013ರಲ್ಲಿ ನೋಯ್ಡಾದಲ್ಲಿ ಆಯೋಜಿಸಿದ್ದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಶೃಂಗಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಖ್ಯ ಅತಿಥಿಯಾಗಿದ್ದರೂ ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭಾಗವಹಿಸಿರಲಿಲ್ಲ. ಅಖಿಲೇಶ್ ಯಾದವ್ ಅವರು 2012ರಿಂದ 2017ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಮ್ಮೆಯೂ ನೊಯ್ಡಾಗೆ ಭೇಟಿ ನೀಡಿರಲಿಲ್ಲ. ಆದರೂ ಅವರು ಕಳೆದ ಬಾರಿಯ ಚುನಾವಣೆಯ ಬಳಿಕ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

2017ರಲ್ಲಿ ಪ್ರಬಲ ಜನಾದೇಶದೊಂದಿಗೆ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್, ಆಗಾಗ ನೋಯ್ಡಾಗೆ ಭೇಟಿ ನೀಡುತ್ತಿದ್ದರು. ಈ ಮೂಲಕ ನೊಯ್ಡಾ ಬಗೆಗಿನ ಮೂಢನಂಬಿಕೆಯನ್ನು ಹೊಡೆದೋಡಿಸಲು ಅವರೂ ಒಂದು ರೀತಿಯ ಕಾರಣರಾದರು. ಇದೀಗ ಎರಡನೇ ಬಾರಿಗೆ ಗೆದ್ದಿರುವ ಯೋಗಿ ಆದಿತ್ಯನಾಥ್ ನೊಯ್ಡಾಗಿದ್ದ ಶಾಪ ವಿಮೋಚನೆಯನ್ನೂ ಮಾಡಿದ್ದಾರೆ!

ಎರಡು ಮೂಢನಂಬಿಕೆಗಳಿಗೆ ತಿಲಾಂಜಲಿ:

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯೊಬ್ಬರು ನೋಯ್ಡಾಗೆ ಭೇಟಿ ನೀಡಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬರುವುದು ಅಸಾಧ್ಯ ಎಂಬ ಮೂಢನಂಬಿಕೆ ಇತ್ತು. ಈ ಮೂಢನಂಬಿಕೆಯಿಂದಾಗಿ ನೋಯ್ಡಾ ಸಂಕಷ್ಟಕ್ಕೆ ಸಿಲುಕಿದ್ದು, ಕಚೇರಿಯಲ್ಲಿದ್ದಾಗ ಯಾವುದೇ ಸಿಎಂ ಈ ಕ್ಷೇತ್ರಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಸಿಎಂ ಯೋಗಿ ಆದಿತ್ಯನಾಥ್ ಮೂಢನಂಬಿಕೆ ಬಗ್ಗೆ ತಲೆಕೆಡಿಸಿಕೊಳ್ಳದೆ ನೋಯ್ಡಾ ಮತ್ತು ಬಿಜ್ನೂರ್‌ಗೆ ಹಲವು ಬಾರಿ ಭೇಟಿ ನೀಡಿದ್ದರು. ಈ ಎರಡು ನಗರಗಳು ದೀರ್ಘಕಾಲದವರೆಗೆ ಮೂಢನಂಬಿಕೆಯ ಭಾರವನ್ನು ಹೊತ್ತಿದ್ದವು. ಆಗಸ್ಟ್ 2021ರಲ್ಲಿ, ಸಿಎಂ ಯೋಗಿ ಆದಿತ್ಯನಾಥ್ ನೋಯ್ಡಾಗೆ ಭೇಟಿ ನೀಡಿದ್ದಾಗ, “ನೋಯ್ಡಾ ಮತ್ತು ಬಿಜ್ನೋರ್ ಅನ್ನು ಶಾಪ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಈ ನಂಬಿಕೆ ಇಲ್ಲಿನ ಅಭಿವೃದ್ಧಿಗೆ ಶಾಪವಾಗಬಾರದು. ನೋಯ್ಡಾಗೆ ಭೇಟಿ ನೀಡಿದ ನಂತರ ಲೋಕಸಭೆ ಚುನಾವಣೆ ಮತ್ತು ಇತರ ಹಲವು ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ನಾನು ದೇವರನ್ನು ನಂಬುವ ಮನುಷ್ಯ. ಮೂಢನಂಬಿಕೆಯಲ್ಲಿ ನನಗೆ ನಂಬಿಕೆಯಿಲ್ಲ. ನಾನು ಪ್ರಾರ್ಥಿಸುತ್ತೇನೆ, ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ, ನನ್ನ ಸಂಪ್ರದಾಯಗಳನ್ನು ಅನುಸರಿಸುತ್ತೇನೆ. ಆದರೆ ಮೂಢನಂಬಿಕೆಗಳನ್ನು ಅನುಸರಿಸುವುದರಿಂದ ಉಂಟಾಗುವ ಯಾವುದೇ ರೀತಿಯ ತಪ್ಪುಗಳನ್ನು ನಾನು ಒಪ್ಪುವುದಿಲ್ಲ’ ಎಂದು ಹೇಳಿದ್ದರು.

ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಮತ್ತೊಂದು ಮೂಢನಂಬಿಕೆ ಎಂದರೆ ಯಾವುದೇ ರಾಜಕೀಯ ಪಕ್ಷವು ಸತತ ಎರಡು ಅವಧಿಗೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು. ಆದರೆ, ಆ ಮೂಢನಂಬಿಕೆಯನ್ನು ಮುರಿದು 36 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆಡಳಿತ ಪಕ್ಷದ ಮುಖ್ಯಮಂತ್ರಿ ಸತತ ಎರಡನೇ ಅವಧಿಗೆ ಮರು ಆಯ್ಕೆಯಾಗುತ್ತಿದ್ದಾರೆ.

ಇದನ್ನೂ ಓದಿ: Yogi Adityanath Profile: ಅಜಯ್ ಸಿಂಗ್ ಬಿಷ್ತ್​​ನಿಂದ ಯೋಗಿ ಆದಿತ್ಯನಾಥ್ ವರೆಗೆ; ಪ್ರಭಾವಿ ನಾಯಕನ ಜೀವನ ಚಿತ್ರಣ ಇಲ್ಲಿದೆ

Punjab Election Results: ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು; ನವಜೋತ್ ಸಿಂಗ್ ಸಿಧು ರಾಜೀನಾಮೆ ಸಾಧ್ಯತೆ

Published On - 2:41 pm, Thu, 10 March 22