Nida Khan: ಬಿಜೆಪಿ ಸೇರಿದ ತ್ರಿವಳಿ ತಲಾಖ್ ಸಂತ್ರಸ್ತೆ ಮೌಲಾನಾ ತೌಖೀರ್ ರಾಜಾ ಸೊಸೆ ನಿದಾ ಖಾನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 30, 2022 | 10:35 PM

Tripple Talaq: ‘ತ್ರಿವಳಿ ತಲಾಖ್ ವಿರುದ್ಧ ಬಿಜೆಪಿ ತಳೆದಿರುವ ನಿಲುವು ನಾನು ಪಕ್ಷವನ್ನು ಬೆಂಬಲಿಸಲು ಮುಖ್ಯ ಕಾರಣ’ ಎಂದು ಹೇಳಿದರು.

Nida Khan: ಬಿಜೆಪಿ ಸೇರಿದ ತ್ರಿವಳಿ ತಲಾಖ್ ಸಂತ್ರಸ್ತೆ ಮೌಲಾನಾ ತೌಖೀರ್ ರಾಜಾ ಸೊಸೆ ನಿದಾ ಖಾನ್
ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ದಿನಗಳಿರುವಾಗ ನಿದಾ ಖಾನ್ ಬಿಜೆಪಿಗೆ ಸೇರಿದರು
Follow us on

ಲಖನೌ: ಇತ್ತಿಹಾದ್-ಎ-ಮಿತಾತ್ ಮಂಡಳಿಯ ಮುಖ್ಯಸ್ಥ ಮೌಲಾನಾ ತೌಖೀರ್ ರಾಜಾ ಖಾನ್​ರ ಸೊಸೆ ನಿದಾ ಖಾನ್ (Nida Khan) ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) (BJP) ಸೇರ್ಪಡೆಯಾಗಿದ್​ದಾರೆ. ಉತ್ತರ ಪ್ರದೇಶ  (Uttar Pradesh) ಚುನಾವಣೆ ಹತ್ತಿರದಲ್ಲಿರುವಾಗ ನಡೆದಿರುವ ಈ ಮಹತ್ವದ ಬೆಳವಣಿಗೆಯು ಚುನಾವಣೆಯ ಫಲಿತಾಂಶದ ಮೇಲೆ ಮಹತ್ವದ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಅಕ್ಕ ಎಂದು ಕರೆಯುತ್ತಿದ್ದ ನಿದಾ ಖಾನ್ ಇದೀಗ ವರಸೆ ಬದಲಿಸಿದ್ದಾರೆ. ‘ಉತ್ತರ ಪ್ರದೇಶದ ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಮಹಿಳೆಯರಿಗೆ ಹೆಚ್ಚು ಸುರಕ್ಷೆಯಿದೆ’ ಎಂದು ಹೇಳುತ್ತಿದ್ದಾರೆ. ‘ತ್ರಿವಳಿ ತಲಾಖ್ ವಿರುದ್ಧ ಬಿಜೆಪಿ ತಳೆದಿರುವ ನಿಲುವು ನಾನು ಪಕ್ಷವನ್ನು ಬೆಂಬಲಿಸಲು ಮುಖ್ಯ ಕಾರಣ. ತ್ರಿವಳಿ ತಲಾಖ್ ವಿರುದ್ಧ ಬಿಜೆಪಿ ಸರ್ಕಾರ ತಳೆದಿರುವ ನಿಲುವವನ್ನೂ ಚುನಾವಣೆಯಲ್ಲಿ ಚರ್ಚಿಸಲಾಗುವುದು’ ಎಂದು ಸ್ವತಃ ತ್ರಿವಳಿ ತಲಾಖ್ ಸಂತ್ರಸ್ತೆಯಾಗಿರುವ ನಿದಾ ಖಾನ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಚುನಾವಣಾ ಘೋಷಣೆಯನ್ನು ಆಕ್ಷೇಪಿಸಿರುವ ಅವರು, ‘ಕಾಂಗ್ರೆಸ್ ಪಕ್ಷವು ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ (ನಾವು ಹುಡುಗಿಯರು, ಹೋರಾಡಬಲ್ಲೆವು) ಎಂಬ ಘೋಷಣೆ ಮೊಳಗಿಸಿದೆ. ಆದರೆ ಮಹಿಳೆಯರ ರಕ್ಷಣೆಗಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದರು. ಮಹಿಳಾ ಸ್ವಾವಲಂಬನೆ ಮತ್ತು ಸುರಕ್ಷೆ ಬಗ್ಗೆ ಬಿಜೆಪಿಯು ಸಾಕಷ್ಟು ಕೆಲಸ ಮಾಡಿದೆ ಎಂದು ಅವರು ನುಡಿದರು. ‘ನನ್ನ ಮಾವ 15 ದಿನಗಳ ಹಿಂದೆ ಕಾಂಗ್ರೆಸ್​ಗೆ ಬಂದಿರಬಹುದು. ಆದರೆ ನಾನು ಮೊದಲಿನಿಂದಲೂ ಬಿಜೆಪಿಯನ್ನೇ ಬೆಂಬಲಿಸುತ್ತಿದ್ದೇವೆ. ಏಕೆಂದರೆ ಬಿಜೆಪಿಯು ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ಸಮಾಜ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್​ರ ಸೊಸೆ ಅಪರ್ಣಾ ಯಾದವ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ನಿದಾ ಖಾನ್ ಸಹ ಬಿಜೆಪಿಗೆ ಸೇರಿದ್ದಾರೆ. 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ. ಫೆಬ್ರವರಿ 10ರಂದು ಮೊದಲ ಹಂತದ ಮತದಾನ ಫೆಬ್ರವರಿ 14ರಂದು 2ನೇ ಹಂತದ ಮತದಾನ ಫೆಬ್ರವರಿ 20ರಂದು 3ನೇ ಹಂತದ ಮತದಾನ ಫೆಬ್ರವರಿ 23ರಂದು 4ನೇ ಹಂತದ ಮತದಾನ ಫೆಬ್ರವರಿ 27ರಂದು 5ನೇ ಹಂತದ ಮತದಾನ ಮಾರ್ಚ್ 3ರಂದು 6ನೇ ಹಂತದ ಮತದಾನ ಮಾರ್ಚ್ 7ರಂದು 7ನೇ ಹಂತದ ಮತದಾನ ನಡೆಯಲಿದೆ.

ಇದನ್ನೂ ಓದಿ: UP Diwas 2022: ಉತ್ತರ ಪ್ರದೇಶ ಜನರಿಗೆ ರಾಷ್ಟ್ರಪತಿ, ಗೃಹ ಸಚಿವರಿಂದ ಶುಭಾಶಯ; ಸಿಎಂ ಯೋಗಿ ವಿಡಿಯೋ ಶೇರ್​ ಮಾಡಿದ ಪ್ರಧಾನಿ ಮೋದಿ
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಮೊದಲ ಟಿಕೆಟ್ ನೀಡಿದ ಬಿಜೆಪಿಯ ಮಿತ್ರ ಪಕ್ಷ ಅಪ್ನಾದಳ್

Published On - 10:34 pm, Sun, 30 January 22