Uttar Pradesh: ಉತ್ತರ ಪ್ರದೇಶದಲ್ಲಿ ಇವಿಎಂ ಪ್ರೋಟೋಕಾಲ್​ನಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡ ವಿಡಿಯೋ ವೈರಲ್; ಶೀಘ್ರ ತನಿಖೆಗೆ ಎಸ್​ಪಿ ಒತ್ತಾಯ

Uttar Pradesh: ಉತ್ತರ ಪ್ರದೇಶದಲ್ಲಿ ಇವಿಎಂ ಪ್ರೋಟೋಕಾಲ್​ನಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡ ವಿಡಿಯೋ ವೈರಲ್; ಶೀಘ್ರ ತನಿಖೆಗೆ ಎಸ್​ಪಿ ಒತ್ತಾಯ
ಇವಿಎಂ

UP Assembly Polls 2022: ಉತ್ತರ ಪ್ರದೇಶದ ಹಲವು ಜಿಲ್ಲೆಗಳಿಂದ ಇವಿಎಂ ಟ್ಯಾಂಪರಿಂಗ್ ಬಗ್ಗೆ ಮಾಹಿತಿ ಬರುತ್ತಿವೆ ಎಂದು ಸಮಾಜವಾದಿ ಪಕ್ಷ ತನ್ನ ಟ್ವೀಟ್‌ನಲ್ಲಿ ಹೇಳಿಕೊಂಡಿದೆ.

TV9kannada Web Team

| Edited By: Sushma Chakre

Mar 09, 2022 | 2:54 PM

ವಾರಾಣಸಿ: ವಾರಣಾಸಿಯ (Varanasi) ಮತ ಎಣಿಕೆ ಕೇಂದ್ರಗಳಿಂದ ವಿದ್ಯುನ್ಮಾನ ಮತಯಂತ್ರ(EVM)ಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಸಮಾಜವಾದಿ ಪಕ್ಷ (Samajwadi Party) ಮಂಗಳವಾರ ಆರೋಪಿಸಿತ್ತು. ಟ್ರಕ್‌ನಲ್ಲಿ ಇರಿಸಲಾಗಿದ್ದ ಯಂತ್ರಗಳನ್ನು ಮತ ಎಣಿಕೆಗೆ ಎರಡು ದಿನಗಳ ಮೊದಲು ಹೊರತೆಗೆಯಲಾಗಿದೆ ಎಂದು ಆರೋಪಿಸಲಾಗಿದ್ದು, ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಬೆಂಬಲಿಗರು ಇವಿಎಂಗಳನ್ನು ಕಳ್ಳತನ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ವಾರಾಣಸಿಯಲ್ಲಿ ಇವಿಎಂ ತೆಗೆದುಕೊಂಡು ಹೋಗುತ್ತಿರುವ ಸುದ್ದಿ ಉತ್ತರ ಪ್ರದೇಶದ ಪ್ರತಿ ವಿಧಾನಸಭೆ ವ್ಯಾಪ್ತಿಯಲ್ಲೂ ಎಚ್ಚರಿಕೆಯಿಂದ ಇರುವಂತೆ ಸಂದೇಶ ನೀಡುತ್ತಿದೆ. ಮತ ಎಣಿಕೆಯಲ್ಲಿ ಅಕ್ರಮವೆಸಗುವ ಪ್ರಯತ್ನವನ್ನು ವಿಫಲಗೊಳಿಸಲು ಎಸ್‌ಪಿ-ಮೈತ್ರಿಕೂಟದ ಎಲ್ಲಾ ಅಭ್ಯರ್ಥಿಗಳು ಮತ್ತು ಬೆಂಬಲಿಗರು ತಮ್ಮ ಕ್ಯಾಮೆರಾಗಳೊಂದಿಗೆ ಸಿದ್ಧರಾಗಿರಬೇಕು. ಯುವ ಪ್ರಜಾಪ್ರಭುತ್ವ ಮತ್ತು ಭವಿಷ್ಯವನ್ನು ರಕ್ಷಿಸಲು, ಮತ ಎಣಿಕೆಯಲ್ಲಿ ಸೈನಿಕರಂತೆ ಕೆಲಸ ನಿರ್ವಹಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ, ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ, ಕೆಲವು ರಾಜಕೀಯ ಪಕ್ಷಗಳು ವದಂತಿಗಳನ್ನು ಹರಡುತ್ತಿವೆ. ಚುನಾವಣೆಯಲ್ಲಿ ಬಳಸಿದ ಇವಿಎಂಗಳನ್ನು ಸಿಆರ್‌ಪಿಎಫ್ ವಶದಲ್ಲಿರುವ ಸ್ಟ್ರಾಂಗ್ ರೂಮ್‌ನಲ್ಲಿ ಸೀಲ್ ಮಾಡಲಾಗಿದೆ. ಅಲ್ಲಿ ಸಿಸಿಟಿವಿ ಕಣ್ಗಾವಲಿದೆ ಎಂದು ಹೇಳಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿರುವ ಇವಿಎಂಗಳು ಮಂಡಿಯಲ್ಲಿನ ಕಾಲೇಜಿನಲ್ಲಿದ್ದವುಗಳಾಗಿವೆ. ನಾಳೆ ಎಣಿಕೆ ಕರ್ತವ್ಯದಲ್ಲಿ ತೊಡಗಿರುವ ನೌಕರರಿಗೆ ಎರಡನೇ ಹಂತದ ತರಬೇತಿ ನೀಡಲಾಗುತ್ತಿದೆ. ಈ ಯಂತ್ರಗಳನ್ನು ಯಾವಾಗಲೂ ಪ್ರಾಯೋಗಿಕ ತರಬೇತಿಗಾಗಿ ಬಳಸಲಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಉತ್ತರಪ್ರದೇಶದ ವಾರಣಾಸಿಯಲ್ಲಿ ಅಕ್ರಮವಾಗಿ ಇವಿಎಂ ಸಾಗಿಸಲಾಗಿದೆ ಎಂಬ ಅಖಿಲೇಶ್ ಯಾದವ್ ಅವರ ಆರೋಪದ ಬೆನ್ನಲ್ಲೇ ಅಧಿಕಾರಿಯೊಬ್ಬರು ಇವಿಎಂನಲ್ಲಿ ಲೋಪ ಮಾಡಿರುವುದಾಗಿ ಒಪ್ಪಿಕೊಂಡಿರುವ ವೀಡಿಯೋವೊಂದನ್ನು ಸಮಾಜವಾದಿ ಪಕ್ಷದ ನಾಯಕರು ಟ್ವೀಟ್ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ವಾರಾಣಸಿಯ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಮತಗಟ್ಟೆಗಳಿಂದ ಇವಿಎಂ ಸಾಗಿಸುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾರ್ಚ್ 10 ರಂದು ನಡೆಯಲಿರುವ ಮತ ಎಣಿಕೆಗೂ ಮುನ್ನ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಅಕ್ರಮವಾಗಿ ಸಾಗಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಆರೋಪಿಸಿದ್ದರು. ಇದಕ್ಕೆ ಪೂರಕವೆಂಬಂತೆ ಸಮಾಜವಾದಿ ಪಕ್ಷ ಇಂದು ಬೆಳಿಗ್ಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿದೆ. ಇದರಲ್ಲಿ ವಾರಾಣಸಿಯ ಆಯುಕ್ತ ದೀಪಕ್ ಅಗರ್ವಾಲ್ ಅವರು ಇವಿಎಂಗಳ ಚಲನೆಯಲ್ಲಿ ಪ್ರೋಟೋಕಾಲ್‌ನಲ್ಲಿ ಲೋಪವಾಗಿದೆ ಎಂದು ಸುದ್ದಿಗಾರರಿಗೆ ಹೇಳುತ್ತಿರುವುದನ್ನು ನೋಡಬಹುದು. ತಕ್ಷಣ ತಿದ್ದಿಕೊಂಡ ಅವರು ಆ ಇವಿಎಂಗಳನ್ನು ತರಬೇತಿಗಾಗಿ ಮಾತ್ರ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಇವಿಎಂಗಳ ಸಂಚಾರಕ್ಕೆ ಪ್ರೋಟೋಕಾಲ್ ಬಗ್ಗೆ ಮಾತನಾಡುವುದಾದರೆ ಪ್ರೋಟೋಕಾಲ್‌ನಲ್ಲಿ ಲೋಪವಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಚುನಾವಣೆಯಲ್ಲಿ ಬಳಸುವ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ಅಸಾಧ್ಯ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ರಾಜಕೀಯ ಪಕ್ಷದ ಕಾರ್ಯಕರ್ತರು ಮತ ಕೇಂದ್ರಗಳ ಹೊರಗೆ ಕುಳಿತುಕೊಂಡು ಗಮನಿಸಬಹುದು ಎಂದಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಿಂದ ಇವಿಎಂ ಟ್ಯಾಂಪರಿಂಗ್ ಬಗ್ಗೆ ಮಾಹಿತಿ ಬರುತ್ತಿವೆ ಎಂದು ಸಮಾಜವಾದಿ ಪಕ್ಷ ತನ್ನ ಟ್ವೀಟ್‌ನಲ್ಲಿ ಹೇಳಿಕೊಂಡಿದೆ. ಯಾರ ಇಚ್ಛೆಯ ಮೇರೆಗೆ ಇದು ನಡೆಯುತ್ತಿದೆ? ಮುಖ್ಯಮಂತ್ರಿ ಕಚೇರಿಯಿಂದ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆಯೇ? ಎಂಬುದನ್ನು ಚುನಾವಣಾ ಆಯೋಗ ದಯವಿಟ್ಟು ಸ್ಪಷ್ಟಪಡಿಸಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.

ಸಮಾಜವಾದಿ ಪಕ್ಷದ ಎಲ್ಲಾ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ. ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಏಳು ಹಂತದಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆದಿತ್ತು. ಮಾರ್ಚ್ 10ರಂದು ಮತಗಳ ಎಣಿಕೆ ನಡೆಯಲಿದೆ. ಚುನಾವಣೋತ್ತರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

ಇದನ್ನೂ ಓದಿ: ವಾರಣಾಸಿ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆ ಇವಿಎಂ ಸಾಗಿಸುತ್ತಿದ್ದಾರೆ: ಅಖಿಲೇಶ್ ಯಾದವ್ ಆರೋಪ

ಇವಿಎಂನಲ್ಲಿ ಸಮಾಜವಾದಿ ಪಕ್ಷದ ಬಟನ್ ಒತ್ತಿದರೆ ಬಿಜೆಪಿ ಸ್ಲಿಪ್ ಬರುತ್ತಿದೆ: ಸಮಾಜವಾದಿ ಪಕ್ಷ ಆರೋಪ

Follow us on

Related Stories

Most Read Stories

Click on your DTH Provider to Add TV9 Kannada