ತರಬೇತಿ ಇವಿಎಂಗಳ ಸಾಗಣೆಯ ಆರೋಪ; ವಾರಾಣಸಿ ಎಡಿಎಂ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗ ಆದೇಶ
ತರಬೇತಿ ಇವಿಎಂಗಳ ಸಾಗಾಟದ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಾರಾಣಸಿ ಎಡಿಎಂ ಎನ್‌ಕೆ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.
ನವದೆಹಲಿ: ಉತ್ತರ ಪ್ರದೇಶ (UttarPradesh Assembly Election) ವಿಧಾನಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ (Akhilesh Yadav) ವಿದ್ಯುತ್ ಮತಯಂತ್ರಗಳನ್ನು (ಇವಿಎಂ) ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಕುರಿತ ವಿಡಿಯೋವೊಂದನ್ನು ಸಮಾಜವಾದಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ವಾರಾಣಸಿ ಎಡಿಎಂ ವಿರುದ್ಧ ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ಕ್ರಮಕ್ಕೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. .
ತರಬೇತಿ ಇವಿಎಂಗಳ ಸಾಗಾಟದ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಾರಾಣಸಿ ಎಡಿಎಂ ಎನ್‌ಕೆ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರಿಗೆ ಚುನಾವಣಾ ಆಯೋಗ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಅಖಿಲೇಶ್ ಯಾದವ್ ಅವರು ವಾರಾಣಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಸ್ಥಳೀಯ ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ನೀಡದೆ ಇವಿಎಂಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಈ ಕುರಿತು ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಇವಿಎಂಗಳನ್ನು ಟ್ರಕ್‌ಗಳಲ್ಲಿ ಸಾಗಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ವಾರಾಣಸಿಯ ಆಯುಕ್ತ ದೀಪಕ್ ಅಗರ್ವಾಲ್ ಅವರು ಇವಿಎಂಗಳ ಚಲನೆಯಲ್ಲಿ ಪ್ರೋಟೋಕಾಲ್‌ನಲ್ಲಿ ಲೋಪವಾಗಿದೆ ಎಂದು ಸುದ್ದಿಗಾರರಿಗೆ ಹೇಳುತ್ತಿರುವುದನ್ನು ನೋಡಬಹುದು. ತಕ್ಷಣ ತಿದ್ದಿಕೊಂಡ ಅವರು ಆ ಇವಿಎಂಗಳನ್ನು ತರಬೇತಿಗಾಗಿ ಮಾತ್ರ ಬಳಸಲಾಗುತ್ತದೆ ಎಂದು ಹೇಳಿದ್ದರು.
ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಉತ್ತರ ಪ್ರದೇಶದಲ್ಲಿ ಎಸ್‌ಪಿ ಸೋಲನ್ನು ಅನುಭವಿಸಲಿದೆ ಎಂದು ಸೂಚಿಸಿದೆ. ಹೀಗಾಗಿ, ಆ ಕೋಪದಿಂದ ಅಖಿಲೇಶ್ ಯಾದವ್ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಎಲ್ಲಾ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ.
ರಾಜ್ಯದ ಹಲವು ಜಿಲ್ಲೆಗಳಿಂದ ಇವಿಎಂ ಟ್ಯಾಂಪರಿಂಗ್ ವರದಿಗಳು ಬರುತ್ತಿವೆ ಎಂದು ಸಮಾಜವಾದಿ ಪಕ್ಷ ತನ್ನ ಟ್ವೀಟ್‌ನಲ್ಲಿ ಹೇಳಿಕೊಂಡಿತ್ತು. ಯಾರ ಇಚ್ಛೆಯ ಮೇರೆಗೆ ಇದು ನಡೆಯುತ್ತಿದೆ? ಮುಖ್ಯಮಂತ್ರಿ ಕಚೇರಿಯಿಂದ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆಯೇ? ಎಂಬುದನ್ನು ಚುನಾವಣಾ ಆಯೋಗ ದಯವಿಟ್ಟು ಸ್ಪಷ್ಟಪಡಿಸಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದರು.
ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಏಳು ಹಂತದಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆದಿತ್ತು. ಮಾರ್ಚ್ 10ರಂದು ಮತಗಳ ಎಣಿಕೆ ನಡೆಯಲಿದೆ. ಚುನಾವಣೋತ್ತರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.