‘ಮೋದಿ ಸರ್ಕಾರದ ಚುನಾವಣಾ ಆಫರ್ ಶೀಘ್ರ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ’: ರಾಹುಲ್ ಗಾಂಧಿ

'ಮೋದಿ ಸರ್ಕಾರದ ಚುನಾವಣಾ ಆಫರ್ ಶೀಘ್ರ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ': ರಾಹುಲ್ ಗಾಂಧಿ
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

Rahul Gandhi | Petrol Price: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮೋದಿ ಸರ್ಕಾರದ ಚುನಾವಣಾ ಆಫರ್ ಮುಗಿಯಲಿದೆ. ಎಲ್ಲರೂ ಶೀಘ್ರವಾಗಿ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ.

TV9kannada Web Team

| Edited By: shivaprasad.hs

Mar 06, 2022 | 7:52 AM

ದೇಶದ ಜನರು ಆದಷ್ಟು ಶೀಘ್ರವಾಗಿ ಪೆಟ್ರೋಲ್ ಅನ್ನು ತುಂಬಿಸಿಟ್ಟುಕೊಳ್ಳಬೇಕು. ಕಾರಣ, ನರೇಂದ್ರ ಮೋದಿ (PM Narendra Modi) ಸರ್ಕಾರವು ಪಂಚ ರಾಜ್ಯಗಳ‌ಚುನಾವಣೆ ಮುಗಿಯಲಿರುವುದರಿಂದ ಬೆಲೆ ಏರಿಸಲಿದೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿರುವ ರಾಹುಲ್, “ನರೇಂದ್ರ ಮೋದಿ‌ ಸರ್ಕಾರ ನೀಡಿದ್ದ ಎಲೆಕ್ಷನ್ ಆಫರ್ ಸದ್ಯದಲ್ಲೇ ಕೊನೆಯಾಗಲಿದೆ. ಆದಷ್ಟು ಶೀಘ್ರವಾಗಿ ಪೆಟ್ರೋಲ್ ಟ್ಯಾಂಕ್ ಗಳನ್ನು ಭರ್ತಿ ಮಾಡಿಸಿಕೊಳ್ಳಿ” ಎಂದು ಬರೆದಿದ್ದಾರೆ. ಇದರೊಂದಿಗೆ ‘ಹೈಕ್- ಕೆಲವೇ ದಿನಗಳಲ್ಲಿ ನಿಮ್ಮ ಸಮೀಪದ ಪೆಟ್ರೋಲ್ ಬಂಕ್ ಗಳಲ್ಲಿ’ ಎಂದು ಬರೆದಿರುವ ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಈ ಹಿಂದೆ ಕೂಡ ಪೆಟ್ರೋಲ್ ಬೆಲೆ ಇಳಿಸಿದ್ದು ಚುನಾವಣಾ ತಂತ್ರ ಎಂದು ಆರೋಪಿಸಿತ್ತು. ಅಲ್ಲದೇ ಮತದಾರರನ್ನು ಒಲಿಸಲು ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಟೀಕಿಸಲಾಗಿತ್ತು.

ಇದೀಗ ರಾಹುಲ್‌ ಚುನಾವಣೆ ಮುಗಿಯುತ್ತಾ ಬಂದಿರುವ ನಡುವೆ ಮತ್ತೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಕೆಲವು‌ ದಿನಗಳ‌ ಮೊದಲು ರಾಹುಲ್ ಗಾಂಧಿ, ಉತ್ತರ ಪ್ರದೇಶದಲ್ಲಿ ಬಿಜೆಪಿಯು ಸುಳ್ಳುಗಳನ್ನು ಹೇಳಿಯೇ ಮತ ಸೆಳೆಯುತ್ತಿದೆ ಎಂದು ಆರೋಪಿಸಿದ್ದರು. ಉತ್ತರ ಪ್ರದೇಶದಲ್ಲಿ ಸೋಮವಾರ ಕೊನೆಯ ಹಂತದ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಪಂಚ ರಾಜ್ಯಗಳ ಮತ ಎಣಿಕೆ‌ ನಡೆಯಲಿದೆ.

ರಾಹುಲ್ ಗಾಂಧಿ ಹಂಚಿಕೊಂಡ ಟ್ವೀಟ್:

ರಷ್ಯಾ ಉಕ್ರೇನ್ ಕದನದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಇಂಧನ ದರ ಏರಿಕೆಯಾಗುತ್ತಿದೆ. ಶುಕ್ರವಾರದಂದು ಪ್ರತಿ ಬ್ಯಾರೆಲ್ ಗೆ ೧೧೧ ಡಾಲರ್ ದಾಖಲಾಗಿತ್ತು. ಇಂಧನ ಕಂಪನಿಗಳು ಬೆಲೆ ಏರಿಕೆಯಿಂದ ನಷ್ಟ ಹೊಂದುತ್ತಿವೆ ಎನ್ನಲಾಗಿದ್ದು, ಪರಿಣಾಮವಾಗಿ ಅಂತಿಮ ಖರೀದಿದಾರರಾಗಿರುವ ಗ್ರಾಹಕರು ಸದ್ಯದಲ್ಲೇ ಬೆಲೆ ತೆರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ವಾರಣಾಸಿಯ ಪಿಂದ್ರಾದಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾ, ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು. ‘‘ನಾನು ಸತ್ತರೂ ನಿಮ್ಮ ಬ್ಯಾಂಕ್ ಅಕೌಂಟ್​ಗಳಿಗೆ 15 ಲಕ್ಷ ರೂ ಬರುತ್ತದೆ ಎಂಬ ಸುಳ್ಳು ಭರವಸೆಯನ್ನು ಕೊಡುವುದಿಲ್ಲ. ಇದು ನಿಮಗೆ ಒಳ್ಳೆಯದಾಗುತ್ತದೋ ಅಥವಾ ಕೆಟ್ಟದಾಗುತ್ತದೋ ಎಂದು ಯೋಚಿಸುವುದಿಲ್ಲ. ನಿಮ್ಮನ್ನೆಲ್ಲರನ್ನೂ ನಾನು ಗೌರವಿಸುತ್ತೇನೆ. ನಿಮ್ಮ ಮುಂದೆ ನಾನು ಸುಳ್ಳು ಹೇಳುವುದಿಲ್ಲ’’ ಎಂದು ರಾಹುಲ್ ಹೇಳಿದ್ದರು.

ಮೋದಿ ಸರ್ಕಾರವನ್ನು ಟೀಕಿಸುತ್ತಾ ರಾಹುಲ್, ‘‘ಮೋದಿ ಸರ್ಕಾರವು ಹಿಂದುತ್ವವನ್ನು ರಕ್ಷಿಸುತ್ತಿದ್ದೇವೆ ಎನ್ನುತ್ತಿದ್ದಾರೆ. ಅವರು ರಕ್ಷಿಸುತ್ತಿರುವುದು ಸುಳ್ಳುಗಳನ್ನು. ದೇಶಾದ್ಯಂತ ಅವರು ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಯಾವುದು ಹಿಂದೂ ಧರ್ಮ? ಸತ್ಯವಲ್ಲದೆ ಮತ್ತೇನೂ ಅಲ್ಲ. ಅವರು ಹಿಂದೂ ಧರ್ಮವನ್ನು ಆಧರಿಸಿ ಮತ ಕೇಳುತ್ತಿಲ್ಲ. ಸುಳ್ಳನ್ನಾಧರಿಸಿ ಕೇಳುತ್ತಿದ್ದಾರೆ’’ ಎಂದಿದ್ದರು.

ಇದನ್ನೂ ಓದಿ:

Russia-Ukraine War Live: ಸುಮ್ಮನಿರಿ, ಇಲ್ಲದಿದ್ದರೆ ಉಕ್ರೇನ್ ಗಡಿಯಾಚೆಗೂ ಯುದ್ಧ ವಿಸ್ತರಿಸುತ್ತೇವೆ: ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ

PM Modi: ವಾರಣಾಸಿಯಲ್ಲಿ ಮೋದಿ ‘ಚಾಯ್ ಪೇ ಚರ್ಚಾ’, ವಿಶ್ವನಾಥ ದೇವಾಲಯದಲ್ಲಿ ಡಮರು ವಾದನ; ವಿಡಿಯೋ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada