Russia-Ukraine War Live: ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ ಭಾರತದ ಮೇಲೆ; ಭಾರತದಲ್ಲಿ ಮುಂದಿನ ವಾರದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ
ಪಾಶ್ಚಿಮಾತ್ಯ ದೇಶಗಳು ಉಕ್ರೇನ್-ರಷ್ಯಾ ವಿವಾದದಲ್ಲಿ ಮಧ್ಯಪ್ರವೇಶಿಸುವುದು ನಿಲ್ಲಿಸದಿದ್ದರೆ ಉಕ್ರೇನ್ ಗಡಿಯಾಚೆಗೂ ಯುದ್ಧ ವಿಸ್ತರಿಸಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇರ ಎಚ್ಚರಿಕೆ ನೀಡಿದ್ದಾರೆ.
Russia Ukraine Conflict Live: ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ಮುತ್ತಿಗೆ ಹಾಕಿರುವ ರಷ್ಯಾ ಈಗಾಗಲೇ ಬಂದರು ನಗರಿ ಮರಿಪೋಲ್ ಮತ್ತು ಪ್ರಮುಖ ನಗರ ಖಾರ್ಕಿವ್ ವಶಪಡಿಸಿಕೊಂಡಿದೆ. ಸೈನಿಕರ ಸಂಖ್ಯೆ ಮತ್ತು ಶಸ್ತ್ರಾಸ್ತ್ರಗಳಲ್ಲಿ ರಷ್ಯಾವನ್ನು ಸರಿಗಟ್ಟಲಾಗದ ಉಕ್ರೇನ್ ಹಿಮ್ಮೆಟ್ಟುತ್ತಿದೆ. ಆದರೆ ರಾಜತಾಂತ್ರಿಕ ಕ್ರಮಗಳ ಮೂಲಕ ರಷ್ಯಾವನ್ನು ಮಣಿಸಲು ಉಕ್ರೇನ್ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಅಮೆರಿಕ, ಜರ್ಮನಿ ಸೇರಿದಂತೆ ಹಲವು ಆರ್ಥಿಕ ಬಲಾಢ್ಯ ದೇಶಗಳು ಈಗಾಗಲೇ ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವ ಜೊತೆಗೆ ಉಕ್ರೇನ್‌ಗೆ ಸುಧಾರಿತ ಶಸ್ತ್ರಾಸ್ತ್ರಗಳ ಪೂರೈಕೆ ಹೆಚ್ಚಿಸಿವೆ. ಈ ಬೆಳವಣಿಗೆಯಿಂದ ಸಿಟ್ಟಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಶ್ಚಿಮಾತ್ಯ ದೇಶಗಳು ಉಕ್ರೇನ್-ರಷ್ಯಾ ವಿವಾದದಲ್ಲಿ ಮಧ್ಯಪ್ರವೇಶಿಸುವುದು ನಿಲ್ಲಿಸದಿದ್ದರೆ ಉಕ್ರೇನ್ ಗಡಿಯಾಚೆಗೂ ಯುದ್ಧ ವಿಸ್ತರಿಸಬಹುದು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
LIVE NEWS & UPDATES
-
ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡಲು ಯತ್ನಿಸುತ್ತಿಲ್ಲ: ವ್ಲಾಡಿಮಿರ್ ಪುಟಿನ್
ಪರಮಾಣು ಸ್ಥಾವರಗಳ ಮೇಲೆ ದಾಳಿಗೆ ರಷ್ಯಾ ಪ್ರಯತ್ನಿಸುತ್ತಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ಮಾಡಿ ಹೇಳಿದ್ದಾರೆ.
-
ನಮ್ಮ ಸೇನೆ ಜೊತೆ ಫೈಟ್ ಮಾಡೋದನ್ನ ನಿಲ್ಲಿಸಿ: ರಷ್ಯಾ ಅಧ್ಯಕ್ಷ ಪುಟಿನ್
ನೀವು ಹೋರಾಟ ನಿಲ್ಲಿಸೋವರೆಗೂ ನಾವು ಹಿಂದೆ ಸರಿಯಲ್ಲ. ನಮ್ಮ ಕಾರ್ಯಾಚರಣೆ ಪ್ಲ್ಯಾನ್ನಂತೆಯೇ ಮುಂದುವರಿಯಲಿದೆ. ನಮ್ಮ ಸೇನೆ ಜೊತೆ ಫೈಟ್ ಮಾಡೋದನ್ನ ನಿಲ್ಲಿಸಿ. ಉಕ್ರೇನ್ ನಿಯೋಗದ ಮಂದಿ ಮಾತುಕತೆಗೆ ಸರಿಯಾಗಿ ಸಹಕರಿಸಬೇಕು. ಗ್ರೌಂಡ್ ರಿಯಾಲಿಟಿ ನೀಡಿ ನಿರ್ಧರಿಸಬೇಕು ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ.
-
ಯುದ್ಧಪೀಡಿತ ಉಕ್ರೇನ್‌ಗೆ 5000 ಕ್ಷಿಪಣಿ ಪೂರೈಸಿದ ಸ್ವೀಡಿಶ್
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಹೀಗಾಗಿ ಯುದ್ಧಪೀಡಿತ ಉಕ್ರೇನ್‌ಗೆ ಸ್ವೀಡಿಶ್ 5000 ಕ್ಷಿಪಣಿ ಪೂರೈಸಿದೆ.
ಪರಮಾಣು ಸಂಶೋಧನಾ ಕೇಂದ್ರದ ಮೇಲೆ ರಾಕೆಟ್ಗಳನ್ನು ಹಾರಿಸಿದ ರಷ್ಯಾ ಸೇನೆ
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಪರಮಾಣು ಸಂಶೋಧನಾ ಕೇಂದ್ರದ ಮೇಲೆ ರಾಕೆಟ್ಗಳನ್ನು ರಷ್ಯಾ ಸೇನೆ ಹಾರಿಸಿದೆ.
21 ಸಾವಿರ ಭಾರತೀಯರು ಉಕ್ರೇನ್ ತೊರೆದಿದ್ದಾರೆ
21 ಸಾವಿರ ಭಾರತೀಯರು ಉಕ್ರೇನ್ ತೊರೆದಿದ್ದಾರೆ. ಉಕ್ರೇನ್‌ನಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡ ಹರ್ಜೋತ್ ಸಿಂಗ್ ನಾಳೆ ಭಾರತಕ್ಕೆ ಬರಲಿದ್ದಾರೆ. ಕೇಂದ್ರದ ವಿದೇಶಾಂಗ ಇಲಾಖೆ ವಿಮಾನದಲ್ಲಿ ಭಾರತಕ್ಕೆ ಕರೆ ತರುತ್ತಾರೆ.
ಭಾರತದ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ
ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ ಭಾರತದ ಮೇಲೆ ಬಿರಲಿದೆ. ಭಾರತದಲ್ಲಿ ಮುಂದಿನ ವಾರದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 113 ಡಾಲರ್ಗೆ ಏರಿಕೆಯಾಗಿದೆ. ಕಳೆದ 8-10 ವರ್ಷಗಳಲ್ಲಿ ಗರಿಷ್ಠ ಬೆಲೆ ಏರಿಕೆಯಾಗಲಿದೆ. ಇದರಿಂದಾಗಿ ಭಾರತದಲ್ಲಿ ಮಾರ್ಚ್ 8 ರ ಬಳಿಕ ತೈಲ ಕಂಪನಿಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಲಿದೆ.
ಉಕ್ರೇನ್‌ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಮನೆಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ
ಉಕ್ರೇನ್‌ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ನವೀನ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 1 ಲಕ್ಷ ರೂ. ನೆರವು ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಎಂಬಿಬಿಎಸ್ ಓದಲು ಉಕ್ರೇನ್‌ಗೆ ತೆರಳಿದ್ದ ನವೀನ್ ಮನೆಯವರು, ಸ್ಥಳೀಯ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದರು, ಕೊನೆ ಬಾರಿ ಮಗನ ಮುಖ ನೋಡಬೇಕೆಂಬುದು ಮನೆಯವರ ಆಸೆಯಾಗಿದೆ. ತವರಿಗೆ ಮೃತದೇಹ ತರುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.
ರಷ್ಯಾ ಮಿಲಿಟರಿ ಕಾರ್ಯಾಚರಣೆ ವಿರುದ್ಧ ರಷ್ಯನ್ನರ ಧರಣಿ
ಉಕ್ರೇನ್ ವಿರುದ್ಧ ಸಾರಿರುವ ಯುದ್ಧ ಖಂಡಿಸಿ ರಷ್ಯನ್ನರು ಪ್ರತಿಭಟನೆ ನಡೆಸಿದ್ದಾರೆ. ರಷ್ಯಾ ಮಿಲಿಟರಿ ಕಾರ್ಯಾಚರಣೆ ವಿರುದ್ಧ ರಷ್ಯನ್ನರು ಧರಣಿ ನಡೆಸಿದ್ದಾರೆ. 1,100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ಉಕ್ರೇನ್‌ನ ವಿನ್ನಿಟ್ಸಿಯಾ ಏರ್ಪೋರ್ಟ್ ಮೇಲೆ ರಷ್ಯಾ ದಾಳಿ
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, ಉಕ್ರೇನ್‌ನ ವಿನ್ನಿಟ್ಸಿಯಾ ಏರ್ಪೋರ್ಟ್ ಮೇಲೆ ರಷ್ಯಾ ದಾಳಿ ನಡೆಸಿದೆ. ರಷ್ಯಾದ ಕ್ಷಿಪಣಿ ದಾಳಿಗೆ ವಿನ್ನಿಟ್ಸಿಯಾ ಏರ್ಪೋರ್ಟ್ ಧ್ವಂಸವಾಗಿದೆ.
ಸೇಫ್ ಆಗಿ ತಾಯ್ನಾಡಿಗೆ ವಾಪಾಸ್ ಆದ ಎಂಬಿಬಿಎಸ್ ವಿದ್ಯಾರ್ಥಿನಿ
ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಆಯಿಷಾ ಎಂಬ ವಿದ್ಯಾರ್ಥಿನಿ ಮರಳಿ ತಾಯ್ನಾಡಿಗೆ ವಾಪಾಸ್ಸ್ ಆಗಿದ್ದಾಳೆ.ರಾಮನಗರದ ಐಜೂರು ನಿವಾಸಿ ಆಯಿಷಾ, ಲಿವೀವ್ನ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ತಾಯ್ನಾಡಿಗೆ ವಾಪಾಸ್ ಆದ ಬಳಿಕ ಮಾತನಾಡಿದ ಅವರು, ಉಕ್ರೇನ್ ಪರಿಸ್ಥಿತಿ ಅಂತು ತುಂಬಾ ಕೆಟ್ಟದಾಗಿ ಇತ್ತು. ಬಾಂಬ್ ಸೌಂಡ್ ನಮಗೆ ಕೇಳಿ ಬರುತ್ತಿತ್ತು. ಬಾಂಬ್ ಸೌಂಡ್, ಫೈರಿಂಗ್, ಹೊಗೆ ಬರುತ್ತಿತ್ತು. ಇಂಡಿಯನ್ ಎಂಬೆಸಿ ಅವರು ಬಂದು ನೀವು ಸೇಫ್ ಆಗಿದ್ದೀರಿ ಎಂದು ಹೇಳುತ್ತಿದ್ದರು. ಬಂಕರ್‌ನಲ್ಲಿ ನಾವು ಇದ್ದೇವೂ. ಏನು ಮಾಡಬೇಕು, ಮುಂದೇ ಏನು ಎಂಬುದು ಗೊತ್ತಿರಲಿಲ್ಲ. ನೆಟ್ವರ್ಕ್ ಸಮಸ್ಯೆ ಕೂಡ ಎದುರಾಗಿತ್ತು. ಭಾರತ ಮತ್ತು ಕರ್ನಾಟಕ ಸರ್ಕಾರ ಒಳ್ಳೇಯ ಕೆಲಸ ಮಾಡಿದೆ. ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಉಕ್ರೇನ್‌ನಿಂದ ಈವರೆಗೆ 16,000 ಭಾರತೀಯರ ಸ್ಥಳಾಂತರ
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಈ ಹಿನ್ನೆಲೆ ಆಪರೇಷನ್ ಗಂಗಾ ಅಡಿಯಲ್ಲಿ ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತಿದ್ದು ಉಕ್ರೇನ್‌ನಿಂದ ಈವರೆಗೆ 16,000 ಭಾರತೀಯರ ಸ್ಥಳಾಂತರ ಮಾಡಲಾಗಿದೆ.
ನವೀನ್ ನಿವಾಸಕ್ಕೆ ಭೇಟಿ ನೀಡಿ ವೈಯಕ್ತಿಕವಾಗಿ ₹1 ಲಕ್ಷ ಪರಿಹಾರ ನೀಡಿದ ಸಲೀಂ ಅಹ್ಮದ್
ಉಕ್ರೇನ್‌ನಲ್ಲಿ ಹಾವೇರಿ ಜಿಲ್ಲೆಯ ನವೀನ್ ಸಾವು ಹಿನ್ನೆಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದ್ದಾರೆ. ವೈಯಕ್ತಿಕವಾಗಿ ₹1 ಲಕ್ಷ ಪರಿಹಾರ ನೀಡಿದ ಸಲೀಂ ಅಹ್ಮದ್
ಉಕ್ರೇನ್‌ನ ಖಾರ್ಕಿವ್‌ನಿಂದ ರೊಮೇನಿಯಾಗೆ ಹೊರಟ ಲಾಸ್ಟ್ ಬಸ್
ಖಾರ್ಕಿವ್ ಸಿಟಿಯಿಂದ ಟಿವಿ9 ಗ್ರೌಂಡ್ ರಿಪೋರ್ಟ್ ನಡೆಸಿದ್ದು ಗ್ರೌಂಡ್ ರಿಪೋರ್ಟ್ ಪ್ರಕಾರ ಉಕ್ರೇನ್‌ನ ಖಾರ್ಕಿವ್‌ನಿಂದ ರೊಮೇನಿಯಾಗೆ ಲಾಸ್ಟ್ ಬಸ್ ಹೊರಟಿದೆ. ಲಾಸ್ಟ್ ಬಸ್‌ನಲ್ಲಿ ಭಾರತದ 59 ವಿದ್ಯಾರ್ಥಿಗಳು ತೆರಳಿದ್ದಾರೆ. ಕೊನೆಯ ಬಸ್‌ನಲ್ಲಿ ತೆರಳಿದ ಭಾರತದ ವಿದ್ಯಾರ್ಥಿಗಳಲ್ಲಿ ಸಂತಸ ಮನೆ ಮಾಡಿದೆ.
ಉಕ್ರೇನ್‌ನಿಂದ ಬಳ್ಳಾರಿಗೆ ಬಂದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಸಚಿವ ಶ್ರೀ ರಾಮುಲು
ರಷ್ಯಾ – ಉಕ್ರೇನ್ ಮಧ್ಯೆ ಯುದ್ಧ ಹಿನ್ನಲೆ ಸ್ವದೇಶಕ್ಕೆ ಮರಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸಚಿವ ಶ್ರೀ ರಾಮುಲು ಮಾತನಾಡಿಸಿದ್ದಾರೆ. ಬಳ್ಳಾರಿಯ ಸಬಾ ಕೌಸರ್, ತೈಯಬ್ ಕೌಸರ್, ಮೊಹಮ್ಮದ್ ಶಕೀಬುದ್ದೀನ್ರ ನಿವಾಸಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಚಿವ ಶ್ರೀ ರಾಮುಲು ಸಮಾಲೋಚನೆ ನಡೆಸಿದ್ದಾರೆ.
ಒಡೆಸ್ಸಾ ನಗರದ ಮೇಲೆ ಬಾಂಬ್ ದಾಳಿ ನಡೆಸಲು ತಯಾರಿ: ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಜೆಲೆನ್ಸ್ಕಿ ಆರೋಪ
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಈ ನಡುವೆ ಒಡೆಸ್ಸಾ ನಗರದ ಮೇಲೆ ಬಾಂಬ್ ದಾಳಿ ನಡೆಸಲು ರಷ್ಯಾ ತಯಾರಿ ನಡೆಸುತ್ತಿದೆ. ಬಾಂಬ್ ದಾಳಿ ನಡೆಸಲು ರಷ್ಯಾ ಸೇನಾ ಪಡೆಗಳು ತಯಾರಿ ಮಾಡಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಜೆಲೆನ್ಸ್ಕಿ ಆರೋಪ ಮಾಡಿದ್ದಾರೆ.
ರಷ್ಯಾದಲ್ಲಿ ಮಾಸ್ಟರ್‌ಕಾರ್ಡ್, ವೀಸಾ ಕಾರ್ಯಾಚರಣೆ ಸ್ಥಗಿತ
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, ರಷ್ಯಾದಲ್ಲಿ ಮಾಸ್ಟರ್‌ಕಾರ್ಡ್, ವೀಸಾ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ.
ಜೀವ ಭಯದಿಂದ ಉಕ್ರೇನ್ ತೊರೆದಿರುವ ಲಕ್ಷಾಂತರ ಜನ
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, ಜೀವ ಭಯದಿಂದ ಲಕ್ಷಾಂತರ ಜನರು ಉಕ್ರೇನ್ ತೊರೆದಿದ್ದಾರೆ. 10 ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ.
ಉಕ್ರೇನ್‌ನ ಖಾರ್ಕೀವ್ನಿಂದ ತಾಯ್ನಾಡಿಗೆ ಮರಳಿದ ಮೋನಿಕಾ
ಆನೇಕಲ್ ಪಟ್ಟಣದ ನಿವಾಸಿ ಮೋನಿಕಾ ಉಕ್ರೇನ್‌ನ ಖಾರ್ಕೀವ್ನಿಂದ ತಾಯ್ನಾಡಿಗೆ ಮರಳಿದ್ದಾರೆ. ಉಕ್ರೇನ್‌ನ ಯುದ್ಧ ನೆಲದಲ್ಲಿ ಸಿಲುಕಿದ್ದ ಯುವತಿ ಸದ್ಯ ಹುಟ್ಟೂರಿಗೆ ಮರಳಿದ್ದಾಳೆ. ಆರತಿಯೆತ್ತಿ ಮಗಳನ್ನು ಪೋಷಕರು ಬರಮಾಡಿಕೊಂಡಿದ್ದಾರೆ. ಮೋನಿಕಾ ಯೋಗಕ್ಷೇಮ ವಿಚಾರಿಸಲು ಪ್ರಾಥಮಿಕ ಶಾಲಾ ಶಿಕ್ಷಕರು ಕೂಡ ಬಂದಿದ್ದಾರೆ. ಸಿಹಿ ತಿನ್ನಿಸಿ ಮಗಳನ್ನು ಆತ್ಮೀಯವಾಗಿ ತಾಯಿ ಬರಮಾಡಿಕೊಂಡಿದ್ದಾರೆ. ಒಟ್ಟಾರೆ ಮೋನಿಕಾ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ.
ಯುಕ್ರೇನ್‌ದಿಂದ ವಾಪಾಸ್ ಆದ ವಿದ್ಯಾರ್ಥಿನಿಗೆ ಸ್ವಾಗತಿಸಿದ ಸಚಿವ ಉಮೇಶ್ ಕತ್ತಿ
ಯುಕ್ರೇನ್‌ದಿಂದ ವಾಪಾಸ್ ಆದ ವಿದ್ಯಾರ್ಥಿನಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವ ಉಮೇಶ್ ಕತ್ತಿ ಸ್ವಾಗತಿಸಿದ್ದಾರೆ. ಬಳಿಕ ಮಾತನಾಡಿದ ಅವರು ಮೆಡಿಕಲ್ ಕಲಿಯಲು ವಿದ್ಯಾರ್ಥಿನಿ ಉಕ್ರೇನ್‌ಗೆ ಹೋಗಿದ್ದಳು. ಉಕ್ರೇನ್ ರಷ್ಯಾ ಗಲಾಟೆ ನಡುವೆ ಅವಳು ಮರಳಿ ಭಾರತಕ್ಕೆ ಬಂದಿರುವುದು ಸಂತೋಷವಾಗಿದೆ. ಸುಮಾರು ಹದಿನೈದು ಸಾವಿರ ಜನ ವಾಪಾಸ್ ಬಂದಿದ್ದಾರೆ. ಇನ್ನೂ ಹದಿನೈದು ಸಾವಿರ ಜನ ವಾಪಾಸ್ ಬರುವವರಿದ್ದಾರೆ. ಅವರನ್ನ ವಾಪಾಸ್ ಕರೆದುಕೊಂಡು ಬರಲು ಪ್ರಧಾನಿ ಮೋದಿಯವರು ನಾಲ್ಕು ಜನ ಮಂತ್ರಿಗಳನ್ನ ನಿಯೋಜನೆ ಮಾಡಿದ್ದಾರೆ. ಎರಡ್ಮೂರು ದಿನಗಳಲ್ಲಿ ಎಲ್ಲರನ್ನೂ ವಾಪಾಸ್ ತರುವ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ 20 ಜನ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ: ಬೆಳಗಾವಿಯಲ್ಲಿ ಡಿಸಿ ಎಂ ಜಿ ಹಿರೇಮಠ
ಈಗಾಗಲೇ 9 ಜನ ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ. ಇನ್ನೂ ಬೆಳಗಾವಿ ಜಿಲ್ಲೆಯ 20 ಜನ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಇನ್ನೂ ಓರ್ವ ವಿದ್ಯಾರ್ಥಿ ಬೆಂಗಳೂರಿನಲ್ಲಿ ಇದ್ದಾರೆ. 7 ಜನ ದೆಹಲಿ ತಲುಪಿದ್ದು, ಬೆಳಗಾವಿಗೆ ವಾಪಸ್ ಬರಲಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆ ತರಲು ಸಿಎಂ ಸೂಚನೆ ಇದೆ. ಇನ್ನೂ ಮೂರು ಜನರನ್ನು ಕರೆತರಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬೆಳಗಾವಿಯಲ್ಲಿ ಡಿಸಿ ಎಂ ಜಿ ಹಿರೇಮಠ ತಿಳಿಸಿದ್ದಾರೆ.
ಖಾರ್ಕಿವ್, ಕೀವ್ ಸೇರಿ ವಿವಿಧೆಡೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ : ಉಕ್ರೇನ್‌ನಿಂದ ಬೆಳಗಾವಿಗೆ ವಾಪಸ್ ಆದ ವಿದ್ಯಾರ್ಥಿನಿ
ಕೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದೇವು. ಫೆಬ್ರವರಿ 24ರಂದು ನಮ್ಮ ಫ್ಲೈಟ್ ಇತ್ತು ಆದre ಬಾಂಬ್ ಸ್ಫೋಟ ಹಿನ್ನೆಲೆ ರದ್ದಾಯಿತು. ಅಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟವಿತ್ತು. ಕೀವ್‌ನಿಂದ ರೈಲಿನ ಮೂಲಕ ಗಡಿ ತಲುಪಿದ್ವಿ. ಖಾರ್ಕಿವ್, ಕೀವ್ ಸೇರಿ ವಿವಿಧೆಡೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ. ತುಂಬಾ ಕೆಟ್ಟ ಪರಿಸ್ಥಿತಿ ಇದೆ. ಬೇಗ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿ. ನಮ್ಮ ಯೂನಿವರ್ಸಿಟಿಯ ಎಲ್ಲಾ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ರೊಮೇನಿಯಾ ಸರ್ಕಾರದವರೂ ತುಂಬಾ ಸಹಾಯ ಮಾಡಿದ್ರು. ಉಕ್ರೇನ್‌ನಲ್ಲಿ ಪರಿಸ್ಥಿತಿ ತುಂಬಾ ಕೆಟ್ಟಿದೆ. ಪ್ರತಿ ಹತ್ತು ನಿಮಿಷಕ್ಕೊಂದು ಸಾರಿ ಬಾಂಬ್ ಸ್ಫೋಟವಾಗ್ತಿದೆ ಎಂದು ಉಕ್ರೇನ್‌ನಿಂದ ಬೆಳಗಾವಿಗೆ ಆಗಮಿಸಿದ ವಿದ್ಯಾರ್ಥಿನಿ ಬ್ರಾಹ್ಮಿ ಪಾಟೀಲ್ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಚರ್ಚಿಸಿದ ಟರ್ಕಿ ಅಧ್ಯಕ್ಷ
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಜತೆ ರಷ್ಯಾ ಅಧ್ಯಕ್ಷ ಪುಟಿನ್ ಚರ್ಚೆ ನಡೆಸಿದ್ದಾರೆ. ಉಕ್ರೇನ್-ರಷ್ಯಾ ನಡುವಿನ ಯುದ್ಧದ ಬಗ್ಗೆ ಮಾತುಕತೆ ನಡೆಸಲಾಗಿದೆ.
ಗುಂಡಿನ ದಾಳಿಯಲ್ಲಿ ಮೂವರ ಸಾವು
ಉಕ್ರೇನ್‌ನ ಇರ್ಪಿನ್‌ನಲ್ಲಿ ರಷ್ಯಾ ಸೇನೆ ಫೈರಿಂಗ್ ಮಾಡಿದ್ದು, ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ಖಾರ್ಕಿವ್‌ನ ಕೊನೆಯ ಬಸ್ ರೊಮೇನಿಯಾ ಗಡಿಗೆ
ಕೊನೆಯ ಬಸ್‌ನಲ್ಲಿ ಖಾರ್ಕಿವ್‌ನಿಂದ 54 ಭಾರತೀಯ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಉಕ್ರೇನ್‌ನ ಪೋಲ್ಟವಾದಲ್ಲಿ ರಾತ್ರಿಯಿಡೀ ಈ ಬಸ್ ನಿಂತಿತು. ಆ ಮೂಲಕ ಖಾರ್ಕಿವ್‌ನ ಕೊನೆಯ ಬಸ್ ರೊಮೇನಿಯಾ ಗಡಿಗೆ ಹೊರಟಿದೆ. ಸದ್ಯ ಮಕ್ಕಳ ಮುಖದಲ್ಲಿ ನಗು ಮೂಡಿದೆ. ಖಾರ್ಕಿವ್‌ನ ಮಕ್ಕಳನ್ನು ರಕ್ಷಿಸಲು ಹರ್ದೀಪ್ ಸಿಂಗ್ ಸಹ ಸಹಾಯ ಮಾಡಿದ್ದಾರೆ.
ಉಕ್ರೇನ್‌ನಿಂದ ಈವರೆಗೆ ರಾಜ್ಯದ 408 ವಿದ್ಯಾರ್ಥಿಗಳು ವಾಪಸ್
ರಾಜ್ಯದ ಇನ್ನೂ 236 ಜನರು ಉಕ್ರೇನ್‌ನಿಂದ ವಾಪಸಾಗಬೇಕಿದೆ. ಈಗಾಗಲೇ ಉಕ್ರೇನ್‌ನಿಂದ ಈರಾಜ್ಯದ 408 ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ. ಸುಮಿ ನಗರದಲ್ಲಿ ಕರ್ನಾಟಕದ 7 ಜನರು ಇರುವ ಬಗ್ಗೆ ಮಾಹಿತಿ ಇದೆ. ವಿದ್ಯಾರ್ಥಿ ನವೀನ್ ಮೃತದೇಹ ತರಲು ಪ್ರಯತ್ನ ನಡೆಯುತ್ತಿದೆ ಎಂದು ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿದ್ದಾರೆ.
ನವೀನ ನಿವಾಸಕ್ಕೆ ಸಿರಿಗೆರೆ ತರಳಬಾಳು ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರು ಭೇಟಿ
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟ ಹಿನ್ನೆಲೆ, ನವೀನ ನಿವಾಸಕ್ಕೆ ಸಿರಿಗೆರೆ ತರಳಬಾಳು ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರು ಭೇಟಿ ನೀಡಿದ್ದಾರೆ. ನವೀನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸ್ವಾಮೀಜಿ ಹೂವು ಹಾಕಿದ್ದಾರೆ. ಮೃತ ನವೀನ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಹಾಗೂ ಅಣ್ಣ ಹರ್ಷ ಸೇರಿದಂತೆ ನವೀನ ಕುಟುಂಬಸ್ಥರಿಗೆ ಸ್ವಾಮೀಜಿ ಸಾಂತ್ವನ ಹೇಳಿದ್ದಾರೆ. ಬಳಿಕ ಉಕ್ರೇನ್‌ನಲ್ಲಿ ಸಿಲುಕಿ ಊರಿನತ್ತ ಮರಳುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳನ್ನ ಸಂಪರ್ಕಿಸಿ ಸ್ವಾಮೀಜಿ ಧೈರ್ಯ ತುಂಬಿದ್ದಾರೆ.
1 ಲಕ್ಷ ಹಣ ಪಡೆದು ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಕರೆತಂದಿದ್ದಾರೆ ಎಂಬುದು ಸುಳ್ಳು: ಸಚಿವ ಬಿ.ಶ್ರೀರಾಮುಲು
ಉಕ್ರೇನ್‌ನಿಂದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. 1 ಲಕ್ಷ ಹಣ ಪಡೆದು ಕರೆತಂದಿದ್ದಾರೆ ಎಂಬುದು ಸುಳ್ಳು. ಭಾರತ ಸರ್ಕಾರ ಹರಸಾಹಸಮಾಡಿ ಮಕ್ಕಳನ್ನು ಕರೆತಂದಿದೆ. ವಿದ್ಯಾರ್ಥಿಗಳನ್ನು ಕರೆತರಲು ನಾಲ್ವರು ಸಚಿವರನ್ನು ನಿಯೋಜನೆ ಮಾಡಲಾಗಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಹಾಸನದ ವಿದ್ಯಾರ್ಥಿ ಗಗನ್ ಗೌಡ ತವರಿನತ್ತ ಪ್ರಯಾಣ
ಸತತ 9 ದಿನಗಳ ಸಂಕಷ್ಟದ ಬಳಿಕ ಖಾರ್ಕೀವ್ನಿಂದ ಪೋಲಾಂಡ್ ಗಡಿಯತ್ತ ಪ್ರಯಾಣ ಬೆಳೆಸಿದ್ದ. ರಷ್ಯಾ ಕದನ ವಿರಾಮ ಘೋಷಣೆ ಹಿನ್ನೆಲೆ ಕರ್ನಾಟಕದ ಇತರೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೊತೆ ತವರಿನತ್ತ ಬಂದಿದ್ದಾರೆ. ಖಾರ್ಕೀವ್ನಿಂದ ಕಾಲ್ನಡಿಗೆ ಮೂಲಕ ಪಿಸೋಚಿನ್ ತಲುಪಿ ಅಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿಗಳು, ಇದೀಗ ಭಾರತ ರಾಯಭಾರಿ ಕಛೇರಿಯಿಂದಲೇ ಬಸ್ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ತವರಿನತ್ತ ಮಗ ಹೊರಟಿರೋ ಬಗ್ಗೆ ತಾಯಿ ಸುಜಾತ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನ 2,119 ಸೇನಾನೆಲೆಗಳನ್ನು ಧ್ವಂಸಗೊಳಿಸಿದ್ದೇವೆ: ರಷ್ಯಾದಿಂದ ಮಾಹಿತಿ
ರಷ್ಯಾ ದಾಳಿಯಲ್ಲಿ 74 ಸಶಸ್ತ್ರ ಪಡೆಗಳ ಸಂವಹನ ಕೇಂದ್ರ, 68 ರಾಡಾರ್ ಕೇಂದ್ರಗಳು ಧ್ವಂಸವಾಗಿವೆ. ಉಕ್ರೇನ್‌ನ 2,119 ಸೇನಾನೆಲೆಗಳನ್ನು ಧ್ವಂಸಗೊಳಿಸಿದ್ದೇವೆ. 748 ಯುದ್ಧ ಟ್ಯಾಂಕರ್‌ಗಳು, 90 ಯುದ್ಧ ವಿಮಾನಗಳು, 532 ಸೇನಾ ವಾಹನ, 108 ಏರ್ ಡಿಫೆನ್ಸ್ ಮಷೀನ್ ನಾಶ ಮಾಡಿದ್ದೇವೆ ಎಂದು ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮಾಹಿತಿ ನೀಡಿದೆ.
ರಷ್ಯಾದ 11,000 ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಮಾಹಿತಿ
ಉಕ್ರೇನ್, ರಷ್ಯಾ ನಡುವೆ ಯುದ್ಧ ಮುಂದುವರಿದಿದ್ದು, ರಷ್ಯಾದ 11,000 ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಮಾಹಿತಿ ನೀಡಿದೆ. ರಷ್ಯಾದ 44 ಸೇನಾ ವಿಮಾನ, 48 ಸೇನಾ ಹೆಲಿಕಾಪ್ಟರ್, ರಷ್ಯಾದ 285 ಯುದ್ಧ ಟ್ಯಾಂಕರ್, 50 ರಾಕೆಟ್ ಸಿಸ್ಟಮ್, ಜೊತೆಗೆ ರಷ್ಯಾದ 985 ಸೇನಾ ವಾಹನ ಧ್ವಂಸಮಾಡಲಾಗಿದೆ ಎಂದು 11 ದಿನಗಳಲ್ಲಿ ನಡೆದ ಯುದ್ಧದ ಹಾನಿ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ.
ಹಂಗೇರಿಯಿಂದ ರಕ್ಷಣೆ ಇಂದು ಅಂತ್ಯ
ಹಂಗೇರಿಯಿಂದ ರಕ್ಷಣಾ ಕಾರ್ಯಾಚರಣೆ ಇಂದು ಅಂತ್ಯಗೊಳ್ಳಲಿದೆ. ಹೀಗಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ತಕ್ಷಣ ಹಂಗೇರಿಯ ಬುಡಾಪೆಸ್ಟ್ ಏರ್ಪೋರ್ಟ್ಗೆ ಬರಬೇಕು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಭಾರತೀಯರು ಗೂಗಲ್ ಫಾರ್ಮ್ ತುಂಬಲು ಸೂಚನೆ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಚುರುಕುಗೊಂಡಿದೆ. ಅಲ್ಲಿನ ಭಾರತೀಯರು ತಕ್ಷಣ ಗೂಗಲ್ ಫಾರ್ಮ್ ತುಂಬಬೇಕು ಎಂದು ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.
ಖಾರ್ಕಿವ್ ಮಾರುಕಟ್ಟೆ ಭಸ್ಮ
ಉಕ್ರೇನ್-ರಷ್ಯಾ ನಡುವಣ ಯುದ್ಧ ಮುಂದುವರಿದಿದೆ. ರಷ್ಯಾದ ಬಾಂಬ್ ದಾಳಿಯಿಂದಾಗಿ ಉಕ್ರೇನ್‌ನ ಖಾರ್ಕಿವ್ ನಗರದ ಮಾರ್ಕೆಟ್ ಸುಟ್ಟು ಭಸ್ಮವಾಗಿದೆ.
ರಷ್ಯಾದ 11 ಸಾವಿರ ಸೈನಿಕರ ಸಾವು
ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧ ಮುಂದುವರಿದಿದೆ. ರಷ್ಯಾದ 11,000 ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಮಾಹಿತಿ ನೀಡಿದೆ. ರಷ್ಯಾದ 44 ಸೇನಾ ವಿಮಾನ, 48 ಸೇನಾ ಹೆಲಿಕಾಪ್ಟರ್, 285 ಯುದ್ಧ ಟ್ಯಾಂಕರ್, 50 ರಾಕೆಟ್ ಸಿಸ್ಟಮ್, 985 ಸೇನಾ ವಾಹನ ಧ್ವಂಸಮಾಡಿರುವುದಾಗಿ ಉಕ್ರೇನ್ ಮಾಹಿತಿ ನೀಡಿದೆ.
ಉಕ್ರೇನ್ ಅಣು ವಿದ್ಯುತ್ ಸ್ಥಾವರಗಳ ಮೇಲೆ ಪುಟಿನ್ ಕೆಂಗಣ್ಣು
ಉಕ್ರೇನ್ನಲ್ಲಿರುವ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೆಂಗಣ್ಣು ಬೀರಿದ್ದಾರೆ. ಉಕ್ರೇನ್‌ನ ಅಣು ವಿದ್ಯುತ್ ಸ್ಥಾವರ ವಶಕ್ಕೆ ಪಡೆಯಲು ರಷ್ಯಾ ಸೇನೆ ದಾಪುಗಾಲಿಡುತ್ತಿದ್ದೆ. ಉಕ್ರೇನ್‌ನ ಪವರ್ ಗ್ರಿಡ್ಗೆ ಹಾನಿ ಮಾಡಿ, ಆಡಳಿತವನ್ನು ತನ್ನೆದುರು ಮಂಡಿಯೂರುವಂತೆ ಮಾಡುವುದು ರಷ್ಯಾದ ಉದ್ದೇಶ. ಉಕ್ರೇನ್ನಲ್ಲಿರುವ ಒಟ್ಟು 15 ಅಣು ವಿದ್ಯುತ್ ಸ್ಥಾವರಗಳ ಪೈಕಿ ಈಗಾಗಲೇ ಎರಡು ಸ್ಥಾವರಗಳು ರಷ್ಯಾದ ಕೈವಶವಾಗಿವೆ. ಚೆರ್ನೋಬಿಲ್, ಝಫೋರಿಝೀಯಾ ಸ್ಥಾವರಗಳನ್ನು ವಶಪಡಿಸಿಕೊಂಡ ನಂತರ ಮೂರನೇ ವಿದ್ಯುತ್ ಸ್ಥಾವರ ತೆಕ್ಕೆಗೆ ಪಡೆಯಲು ರಷ್ಯಾ ಪ್ರಯತ್ನ ಮುಂದುವರಿಸಿದೆ.
ಉಕ್ರೇನ್‌ನಲ್ಲಿ ಭಾರಿ ಸ್ಫೋಟ: ಅನಿಲ ಬಿಕ್ಕಟ್ಟು ಸೃಷ್ಟಿ
ಉಕ್ರೇನ್ ಮೇಲೆ ರಷ್ಯಾ ಯುದ್ಧದಿಂದ ವಿಶ್ವದೆಲ್ಲೆಡೆ ಅಡುಗೆ ಅನಿಲ ಪೂರೈಕೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದೆ. ರಷ್ಯಾ ನಡೆಸಿದ ದಾಳಿಯಲ್ಲಿ 6 ಭಾರಿ ಸ್ಫೋಟಗಳಿಂದ ಉಕ್ರೇನ್‌ನಲ್ಲಿ 16 ಗ್ಯಾಸ್ ಪೂರೈಕೆ ಕೇಂದ್ರಗಳು ಸ್ಥಗಿತಗೊಂಡಿವೆ.
ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳಿಗೆ ಅವಕಾಶ ಕೊಡಿ: ವಿಶ್ರಾಂತ ಕುಲಪತಿ ಸಚ್ಚಿದಾನಂದ ಸಲಹೆ
ಉಕ್ರೇನ್‌ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಅವಕಾಶ ನೀಡಬೇಕು. ಅವರಿಗಾಗಿ ಪ್ರತಿ ಮೆಡಿಕಲ್ ಕಾಲೇಜಿನಲ್ಲಿ 10ರಿಂದ 20 ಸೀಟ್‌ಗಳನ್ನು ಹೆಚ್ಚಿಸಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಸಚ್ಚಿದಾನಂದ ಸಲಹೆ ಮಾಡಿದ್ದಾರೆ. ಸರ್ಕಾರಿ, ಖಾಸಗಿ ಕೋಟಾದಡಿ ಸೀಟುಗಳನ್ನು ನೀಡಬಹುದು. ಉಕ್ರೇನ್ ವೈದ್ಯಕೀಯ ವಿದ್ಯಾರ್ಥಿಗಳ ಪ್ರಮಾಣಪತ್ರ ಮತ್ತು ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸೀಟ್ ಹಂಚಿಕೆ ಮಾಡಬಹುದು ಎಂದು ಹೇಳಿದ್ದಾರೆ.
ಕದನ ವಿರಾಮ ಮುಂದುವರಿಕೆಗೆ ರಷ್ಯಾ ನಿರ್ಧಾರ
ಉಕ್ರೇನ್‌ನ ಮರಿಯುಪೋಲ್ ಮತ್ತು ವೋಲ್ನೋವೋಕಾದಲ್ಲಿ ಕದನ ವಿರಾಮ ಮುಂದುವರಿಸಲು ರಷ್ಯಾ ನಿರ್ಧರಿಸಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ದೃಷ್ಟಿಯಿಂದ ಅವಕಾಶ ಕಲ್ಪಿಸಲು ರಷ್ಯಾ ಕದನ ವಿರಾಮ ಮುಂದುವರಿಸುವುದಾಗಿ ಹೇಳಿದೆ.
ಕತ್ತಲಲ್ಲಿ ಮುಳುಗಲಿದೆ ಉಕ್ರೇನ್
ರಷ್ಯಾದ 8 ಯುದ್ಧ ವಿಮಾನಗಳು ಉಕ್ರೇನ್ ಮೇಲೆ ನಿರಂತರ ದಾಳಿ ಮುಂದುವರಿಸುತ್ತಿವೆ. ದೇಶದಲ್ಲಿ ಕುಡಿಯುವ ನೀರು ಪೂರೈಕೆ, ವಿದ್ಯುತ್ ವಿತರಣಾ ಜಾಲಗಳು ಸಂಪೂರ್ಣ ಹಾಳಾಗಿವೆ. ರೈಲ್ವೆ ಮಾರ್ಗಗಳ ಮೇಲೆಯೂ ಬಾಂಬ್‌ಗಳನ್ನು ಎಸೆಯಲಾಗಿತ್ತು, ಹಲವು ನಿಲ್ದಾಣಗಳನ್ನು ಸ್ಫೋಟಿಸಲಾಗಿದೆ. ಅಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳ ತೆರವು ಕಾರ್ಯಾಚರಣೆ ಕಷ್ಟವಾಗುತ್ತಿದೆ.
ಉಕ್ರೇನ್ ಸೇನೆಯ 2100 ನೆಲೆಗಳು ಧ್ವಂಸ
ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 2,100 ಸೇನಾನೆಲೆಗಳನ್ನು ಧ್ವಂಸಗೊಂಡಿವೆ. ಈ ಪೈಕಿ 74 ಸಶಸ್ತ್ರ ಪಡೆಗಳ ಸಂವಹನ ಕೇಂದ್ರ, 68 ರಾಡಾರ್ ಕೇಂದ್ರಗಳು, 748 ಯುದ್ಧ ಟ್ಯಾಂಕರ್‌ಗಳು, 90 ಯುದ್ಧ ವಿಮಾನಗಳು, 532 ಸೇನಾ ವಾಹನಗಳು, 108 ಏರ್ ಡಿಫೆನ್ಸ್ ಮಷೀನ್ಗಳು ನಾಶಗೊಂಡಿವೆ ಎಂದು ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮಾಹಿತಿ ನೀಡಿದೆ.
ರಷ್ಯಾ-ಉಕ್ರೇನ್ ನಡುವೆ ಮತ್ತೊಮ್ಮೆ ಮಾತುಕತೆ
ಉಕ್ರೇನ್ ಮತ್ತು ರಷ್ಯಾ ನಡುವೆ ನಾಳೆ 3ನೇ ಸುತ್ತಿನ ಮಾತುಕತೆ ನಡೆಯಲಿದೆ. ಉಭಯ ರಾಷ್ಟ್ರಗಳ ನಡುವೆ ಈ ಮೊದಲು 2 ಬಾರಿ ಮಾತುಕತೆ ನಡೆದಿತ್ತು. 2 ಶಾಂತಿಸಭೆಗಳಲ್ಲಿ ನಡೆದ ಚರ್ಚೆ ಫಲಪ್ರದವಾಗಿರಲಿಲ್ಲ.
ಕೀವ್ ನಗರದ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ ಸೇನೆ
ಉಕ್ರೇನ್ ಮೇಲೆ ರಷ್ಯಾ ಸೇನೆಯು ಯುದ್ಧ ಮುಂದುವರಿಸಿದೆ. ರಾಜಧಾನಿ ಕೀವ್ ಆಸುಪಾಸಿನ ನಗರಗಳ ಮೇಲೆ ದಾಳಿ ತೀವ್ರಗೊಂಡಿದೆ. ಖಾರ್ಕಿವ್, ಚೆರ್ನಿಹಿವ್ ಸೇರಿದಂತೆ ಹಲವೆಡೆ ಸೈನಿಕ ಕಾರ್ಯಾಚರಣೆ ಚುರುಕಾಗಿದೆ.
ಉಕ್ರೇನ್ ಯುದ್ಧಕ್ಕೆ ಅಮೆರಿಕ ಸ್ವಯಂಸೇವಕರು
ರಷ್ಯಾ ವಿರುದ್ಧದ ಯುದ್ಧಕ್ಕೆ ಅಮೆರಿಕದ ಸ್ವಯಂಸೇವಕರು ಮುಂದಾಗಿದ್ದಾರೆ. ಅಂತಾರಾಷ್ಟ್ರೀಯ ಬೆಟಾಲಿಯನ್‌ಗೆ ಸೇರಲು ಸ್ವಯಂಸೇವಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಉಕ್ರೇನ್ ರಾಯಭಾರ ಕಚೇರಿಗೆ ಅಮೆರಿಕ ಸ್ವಯಂಸೇವಕರು ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ದೇಶದ ನಾಗರಿಕರು ಯುದ್ಧ ಮಾಡುವುದಕ್ಕೆ ಅರ್ಜಿ ಸಲ್ಲಿಸಲು ಉಕ್ರೇನ್ ಅವಕಾಶ ನೀಡಿತ್ತು.
ಸೈನಿಕರು ತಲೆ ಮೇಲೆ ಗನ್ ಇಟ್ಟಿದ್ದರು: ಕನ್ನಡತಿಯ ನೋವಿನ ಮಾತು
ಉಕ್ರೇನ್‌ನಲ್ಲಿ ಭಾರತೀಯರು ಅನುಭವಿಸಿದ್ದ ನರಕಯಾತನೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಉಕ್ರೇನ್‌ನಲ್ಲಿ ನಾವು ತೀರಾ ಕಷ್ಟಪಟ್ಟಿದ್ದೇವೆ. ಬಂಕರ್‌ನಲ್ಲಿ ಕೊರೆಯುವ ಚಳಿಯಲ್ಲಿ ಕಾಲ ಕಳೆದಿದ್ದೆವು. ಬಾಂಬ್‌ಗಳ ಶಬ್ದಕ್ಕೆ ಬೆಚ್ಚಿಬೀಳುತ್ತಿದ್ದೆವು. ಕುಡಿಯುವ ನೀರು ಸಹ ಕೆಟ್ಟ ವಾಸನೆ ಬರುತ್ತಿತ್ತು. ನಮ್ಮ ಕಾರು ಮುಂದೆಯೇ ಎರಡು ಬಾಂಬ್‌ಗಳನ್ನು ಹಾಕಿದ್ದರು. ನಮ್ಮ ತಲೆ ಮೇಲೆ ಗನ್ ಇಟ್ಟು ನಿಮ್ಮ ಬಳಿ ಏನಿದೆ ತೋರಿಸಿ ಎಂದು ಕೇಳುತ್ತಿದ್ದರು. ಕೀವ್ ರೈಲ್ವೆ ನಿಲ್ದಾಣದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ ಎಂದು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಉಕ್ರೇನ್‌ನಿಂದ ಹಿಂದಿರುಗಿದ ಆಯೀಷಾ ಹೇಳಿದರು.
ಮುದ್ದಿನ ಮಗಳನ್ನು ನೋಡಿದ ತಕ್ಷಣ ಬಿಕ್ಕಿಬಿಕ್ಕಿ ಅತ್ತ ಅಪ್ಪ
ಯುದ್ಧಭೂಮಿ ಉಕ್ರೇನ್‌ನಿಂದ ಕನ್ನಡಿಗರು ತಾಯ್ನಾಡಿಗೆ ವಾಪಸ್ ಬರುತ್ತಿದ್ದಾರೆ. ಮಕ್ಕಳನ್ನು ನೋಡುತ್ತಿದ್ದಂತೆಯೇ ಪೋಷಕರು ಭಾವುಕರಾಗಿ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣವು ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಉಕ್ರೇನ್ ನೆರೆಯ ದೇಶಗಳಿಂದ ಭಾರತೀಯರ ಏರ್‌ಲಿಫ್ಟ್: ಸಿಎಂ ಬೊಮ್ಮಾಯಿ
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಪರಿಣಾಮ 200ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ರಾಯಭಾರ ಕಚೇರಿ ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಾನಿಟರ್ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಏರ್‌ಲಿಫ್ಟ್ ಕಾರ್ಯ ನಡೆಯುತ್ತಿದೆ. ಉಕ್ರೇನ್ ನೆರೆ ದೇಶಗಳ ಜತೆ ಮೋದಿಗೆ ಉತ್ತಮ ಸಂಬಂಧವಿದೆ. ಹೀಗಾಗಿ ಉಕ್ರೇನ್ ನೆರೆಯ ದೇಶಗಳಿಂದ ಏರ್‌ಲಿಫ್ಟ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಭಾನುವಾರ ತಿಳಿಸಿದ್ದಾರೆ.
ಉಕ್ರೇನ್ ನೆರೆಯ ದೇಶಗಳಿಂದ ಭಾರತೀಯರ ಏರ್‌ಲಿಫ್ಟ್; ಎಲ್ಲಾ ಭಾರತೀಯರು ಖಾರ್ಕಿವ್ ನಗರ ತೊರೆದಿದ್ದಾರೆ ಎಂದ ಭಾರತೀಯ ವಿದೇಶಾಂಗ ಸಚಿವಾಲಯ#UkraineRussianWar #Ukraine #RussianUkrainianWar https://t.co/znXsSuU1AF
— TV9 Kannada (@tv9kannada) March 6, 2022
ಸಂಘರ್ಷ ನಿಲ್ಲಸದಿದ್ದರೆ ದೇಶವೇ ಇಲ್ಲದಂತಾದೀತು: ಉಕ್ರೇನ್ ಅಸ್ತಿತ್ವಕ್ಕೇ ಸವಾಲೆಸೆದ ರಷ್ಯಾ
ರಷ್ಯಾ ಸೇನೆಯ ವಿರುದ್ಧದ ಸಂಘರ್ಷವನ್ನು ಉಕ್ರೇನ್ ಅಡಳಿತ ತಕ್ಷಣ ನಿಲ್ಲಿಸಬೇಕು. ಅವರ ನಡವಳಿಕೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಕ್ರೇನ್‌ಗೆ ಇರುವ ಪ್ರತ್ಯೇಕ ದೇಶದ ಸ್ಥಾನಮಾನವೇ ಅಪಾಯಕ್ಕೀಡಾಗಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ರಷ್ಯಾ ಅಂಥ ಕಠಿಣ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾದರೆ ಅದರ ಸಂಪೂರ್ಣ ಹೊಣೆ ಉಕ್ರೇನ್‌ನ ಆಡಳಿತಗಾರರದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಉಕ್ರೇನ್‌ನಿಂದ ಬೀದರ್ಗೆ ಹಿಂದಿರುಗಿದ ಅಮಿತ್
ರಷ್ಯಾ ದಾಳಿಯ ನಂತರ ಯುದ್ಧಭೂಮಿಯಾಗಿರುವ ಉಕ್ರೇನ್‌ನಲ್ಲಿ ಸಿಲುಕಿದ್ದ ಅಮಿತ್ ತವರಿಗೆ ಆಗಮಿಸಿ, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೀದರ್ನ ಮಂಗಲಪೇಟ್ ನಿವಾಸಿಯಾಗಿರುವ ಈ ಎಂಬಿಬಿಎಸ್ ವಿದ್ಯಾರ್ಥಿ ತಡರಾತ್ರಿ ದೆಹಲಿಯಿಂದ ಹೈದರಾಬಾದ್ ಮಾರ್ಗವಾಗಿ ಬೀದರ್ಗೆ ಆಗಮಿಸಿದರು. ಕಳೆದ ನಾಲ್ಕು ವರ್ಷದಿಂದ ಉಕ್ರೇನ್‌ನಲ್ಲಿ ಎಂಬಿಬಿಎಸ್ ಓದುತ್ತಿದ್ದರು. ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ತವರಿಗೆ ಬಂದಿರುವ ಅಮೀತ್ ಆಗಮನದಿಂದ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.
11ನೇ ದಿನಕ್ಕೆ ಉಕ್ರೇನ್ ಯುದ್ಧ
ಉಕ್ರೇನ್ ಮೇಲೆ ರಷ್ಯಾ ಆರಂಭಿಸಿರುವ ದಾಳಿಯು 11ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯಿಂದ ಈವರೆಗೆ 15 ಲಕ್ಷ ಉಕ್ರೇನ್ ನಾಗರಿಕರು ನಿರಾಶ್ರಿತರಾಗಿದ್ದಾರೆ.
ಖಾರ್ಕಿವ್ ನಗರದಿಂದ ಎಲ್ಲ ಭಾರತೀಯರ ರಕ್ಷಣೆ
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಭಾರತೀಯರು ಯಾರೊಬ್ಬರೂ ಇಲ್ಲ. ಅಲ್ಲಿದ್ದ ಎಲ್ಲ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
ಉಕ್ರೇನ್‌ಗೆ ಶಸ್ತ್ರಾಸ್ತ್ರ ಬೇಡ: ರಷ್ಯಾ ತಾಕೀತು
ಉಕ್ರೇನ್‌ಗೆ ಇನ್ನು ಮುಂದೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಕೊಡಬಾರದು ಎಂದು ಐರೋಪ್ಯ ಒಕ್ಕೂಟ ಮತ್ತು ನ್ಯಾಟೊ ಸಂಘಟನೆಗೆ ರಷ್ಯಾ ತಾಕೀತು ಮಾಡಿದೆ.
ರಷ್ಯಾದ ಮಾಧ್ಯಮ ಕಾನೂನಿಗೆ ಅಮೆರಿಕ ವಿರೋಧ
ರಷ್ಯಾ ಜಾರಿಗೆ ತಂದಿರುವ ಹೊಸ ಮಾಧ್ಯಮ ಕಾನೂನಿಗೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸುಳ್ಳು ಸುದ್ದಿಯನ್ನು ಬಿತ್ತರಿಸಿದರೆ 15 ವರ್ಷ ಜೈಲುಶಿಕ್ಷೆ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಪುಟಿನ್ ನಡೆಯನ್ನು ಅಮೆರಿಕ ಅಧ್ಯಕ್ಷರ ಕಚೇರಿ ಆಕ್ಷೇಪಿಸಿದೆ.
ಆರ್ಥಿಕ ಬೆಂಬಲ, ರಕ್ಷಣಾ ಉಪಕರಣ ಕೋರಿದ ಝೆಲೆನ್ಸ್ಕಿ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡ್ಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸಿದ್ದಾರೆ. ರಷ್ಯಾ ಮೇಲಿನ ನಿರ್ಬಂಧ ಮುಂದುವರಿಸಬೇಕು ಎಂದು ಅವರು ಕೋರಿದ್ದಾರೆ.
ರಷ್ಯಾ ಸೇನೆಯ ದಿಗ್ಬಂಧನದಲ್ಲಿ 4 ಲಕ್ಷ ಜನ
ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ದಾಳಿ ಮುಂದುವರಿದಿದೆ. ರಷ್ಯಾ ಸೇನೆಯು ಮರಿಯುಪೋಲ್ ನಗರಕ್ಕೆ ದಿಗ್ಬಂಧನ ಹೇರಿದೆ. ನಗರದಲ್ಲಿ ಪ್ರಸ್ತುತ 4 ಲಕ್ಷ ಜನರಿದ್ದಾರೆ. ವಿದ್ಯುತ್ ಸಂಪರ್ಕ ಇಲ್ಲದ ನಗರದಲ್ಲಿ, ಕುಡಿಯುವ ನೀರಿನ ಪೂರೈಕೆಯು ಕಡಿತಗೊಂಡಿದೆ. ಜನರನ್ನು ರಷ್ಯಾ ಸೇನೆ ಜನರನ್ನ ಒತ್ತೆ ಇರಿಸಿಕೊಂಡಿದೆ ಎಂದು ಮರಿಯುಪೋಲ್ ನಗರದ ಮೇಯರ್ ವಾಡಿಮ್ ಬಾಯ್ಚೆಂಕೊ ಹೇಳಿದ್ದಾರೆ.
ರಷ್ಯಾ ಬ್ಯಾಂಕ್ಗೆ ಸೇವೆ ನಿಲ್ಲಿಸಿದ ವೀಸಾ, ಮಾಸ್ಟರ್‌ಕಾರ್ಡ್
ವಿಶ್ವದಾದ್ಯಂತ ಹಣಕಾಸು ಸೇವೆ ಒದಗಿಸುತ್ತಿರುವ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಕಂಪನಿಗಳು ರಷ್ಯಾ ಬ್ಯಾಂಕ್ಗಳಿಗೆ ನೀಡುತ್ತಿದ್ದ ಸೇವೆಯನ್ನು ರದ್ದುಪಡಿಸಿವೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಎರಡೂ ಕಂಪನಿಗಳು ಕಠಿಣ ನಿಲುವು ತಳೆದಿವೆ. ಈ ನಡುವೆ ಮತ್ತೊಂದು ಪ್ರಮುಖ ಕಂಪನಿ ಪುಮಾ ಸಹ ರಷ್ಯಾದಲ್ಲಿದ್ದ ಮಳಿಗೆಗಳನ್ನು ಮುಚ್ಚಲು ನಿರ್ಧರಿಸಿದೆ.
ಒಪ್ಪೊತ್ತು ಊಟ ಮಾಡಿ ಜೀವ ಹಿಡಿದಿದ್ದೆವು
ಉಕ್ರೇನ್‌ನಿಂದ ಬಂದ ಚೈತ್ರಾ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲಿ ತುಂಬಾ ಕಠಿಣ ಪರಿಸ್ಥಿತಿಯಿತ್ತು. ನಮ್ಮ ದೇಶದ ರಾಯಭಾರ ಕಚೇರಿ ಸಾಕಷ್ಟು ಸಹಾಯ ಮಾಡಿತು. ಏಳೆಂಟು ದಿನಗಲ ಕಾಲ ಒಂದು ಹೊತ್ತು ಊಟ ಮಾಡುತ್ತಾ, ಬಂಕರ್ನಲ್ಲೆ ಕಾಲ ಕಳೆದೆವು ಎಂದು ತಮ್ಮ ಪರಿಸ್ಥಿತಿ ವಿವರಿಸಿದರು.
ಉಕ್ರೇನ್‌ನಲ್ಲಿ ಸಿಲುಕಿದ್ದ 35 ಕನ್ನಡಿಗರು ವಾಪಸ್
ಉಕ್ರೇನ್‌ನಲ್ಲಿ ಸಿಲುಕಿದ್ದ 154 ಭಾರತೀಯರು ಸ್ಲೊವಾಕಿಯಾ ಮಾರ್ಗವಾಗಿ ದೆಹಲಿಗೆ ಭಾನುವಾರ ಹಿಂದಿರುಗಿದರು. ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಏರ್‌ಲಿಫ್ಟ್ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದ 35 ಕನ್ನಡಿಗರು ದೆಹಲಿಗೆ ಬಂದಿಳಿದಿದ್ದಾರೆ. ಈ ಪೈಕಿ 18 ಜನರು ಬೆಂಗಳೂರು ತಲುಪಿದ್ದಾರೆ.
ಹಟಕ್ಕೆ ಬಿದ್ದ ಪುಟಿನ್: ಅಮೆರಿಕಕ್ಕೆ ವಾರ್ನಿಂಗ್
ಉಕ್ರೇನ್ ವಾಯುಗಡಿಯಲ್ಲಿ ರಷ್ಯಾದ ಯುದ್ಧವಿಮಾನಗಳ ಸಂಚಾರ ಹೆಚ್ಚಾಗಿದ್ದು, ರಾಜಧಾನಿ ಕೀವ್ ಮೇಲೆ ದೊಡ್ಡಮಟ್ಟದ ದಾಳಿ ನಡೆಯಬಹುದು ಎಂದು ಹೇಳಲಾಗುತ್ತಿದೆ. ಉಕ್ರೇನ್ ವಾಯುಗಡಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂಬ ಉಕ್ರೇನ್ ಅಧ್ಯಕ್ಷ ವೊಮೊಡ್ಮಿರ್ ಝೆಲೆನ್ಸ್ಕಿ ನ್ಯಾಟೊ ದೇಶಗಳಿಗೆ ಮನವಿ ಮಾಡಿದ್ದಾರೆ. ಉಕ್ರೇನ್ ಆಸುಪಾಸಿನ ದೇಶಗಳಲ್ಲಿ ನ್ಯಾಟೊ ಪಡೆಗಳು ಸಹ ಜಮಾವಣೆಗೊಂಡಿವೆ. ಉಕ್ರೇನ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ಯುದ್ಧವನ್ನು ಇತರ ದೇಶಗಳಿಗೂ ವಿಸ್ತರಿಸಲು ಹಿಂಜರಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
Published On - Mar 06,2022 7:05 AM