ಭಾರತ- ಬಾಂಗ್ಲಾದ ಗಡಿಯಲ್ಲಿ ಗಡಿ ಭದ್ರತಾ ಪಡೆಗಳಿಗೆ ಹೊಸ ತಲೆಬಿಸಿ; ಹೆಚ್ಚಾದ ಮಾನವ ಕೂದಲು ಕಳ್ಳಸಾಗಣೆ!

BSF: ಭಾರತ ಬಾಂಗ್ಲಾದೇಶ ಗಡಿಭಾಗದಲ್ಲಿ ಗಡಿಭದ್ರತಾ ಪಡೆಗಳಿಗೆ ಹೊಸ ತಲೆನೋವು ಎದುರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರವೃತ್ತಿ ಪ್ರಾರಂಭವಾಗಿದೆ. ಏನದು? ಇಲ್ಲಿದೆ ಮಾಹಿತಿ.

ಭಾರತ- ಬಾಂಗ್ಲಾದ ಗಡಿಯಲ್ಲಿ ಗಡಿ ಭದ್ರತಾ ಪಡೆಗಳಿಗೆ ಹೊಸ ತಲೆಬಿಸಿ; ಹೆಚ್ಚಾದ ಮಾನವ ಕೂದಲು ಕಳ್ಳಸಾಗಣೆ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Mar 06, 2022 | 10:11 AM

ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆಗೆ (Border Security Forces) ಹೊಸ ತಲೆಬಿಸಿ ಎದುರಾಗಿದೆ. ಈ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಏನದು ಅಂತೀರಾ? ಮಾನವ ಕೂದಲು ಕಳ್ಳಸಾಗಣೆ! ಹೌದು. ಮಾನವ ಕೂದಲು ಕಳ್ಳಸಾಗಣೆ ಹೆಚ್ಚಾಗುತ್ತಿದ್ದು, ಗಡಿ ಭದ್ರತಾ ಪಡೆಗೆ ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 400 ಕೆಜಿಗೂ ಹೆಚ್ಚು ಮಾನವ ಕೂದಲನ್ನು ವಶಪಡಿಸಿಕೊಳ್ಳಲಾಗಿದೆ. ‘ಇದು 2021 ರಿಂದ ನಡೆಯುತ್ತಿರುವ ಇತ್ತೀಚಿನ ಪ್ರವೃತ್ತಿಯಾಗಿದೆ. ಫೆಬ್ರವರಿ 2021 ರಲ್ಲಿ ನಾಡಿಯಾ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸುಮಾರು 12 ಕೆಜಿ ಮಾನವ ಕೂದಲು ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಲಾಯಿತು. 2021 ರಲ್ಲಿ ಕನಿಷ್ಠ 397 ಕಿಲೋ ಮಾನವ ಕೂದಲನ್ನು ವಶಪಡಿಸಿಕೊಳ್ಳಲಾಗಿದೆ. 2022ರಲ್ಲಿ ಇಲ್ಲಿಯವರೆಗೆ ಕಳ್ಳಸಾಗಣೆ ಮಾಡುತ್ತಿದ್ದ 47 ಕೆಜಿ ಮಾನವ ಕೂದಲನ್ನು  ವಶಪಡಿಸಿಕೊಳ್ಳಲಾಗಿದೆ’ ಎಂದು ಬಿಎಸ್‌ಎಫ್‌ನ ದಕ್ಷಿಣ ಬಂಗಾಳ ಗಡಿಭಾಗದ ಡಿಐಜಿ ಎಸ್‌ಎಸ್ ಗುಲೇರಿಯಾ ಹೇಳಿದ್ದಾರೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ದಕ್ಷಿಣ ಬಂಗಾಳದ ನಾಡಿಯಾ ಜಿಲ್ಲೆಯ ತೆಹಟ್ಟಾದಲ್ಲಿ ಮಾರ್ಚ್ 3 ರಂದು 10 ಚೀಲಗಳಲ್ಲಿ ತುಂಬಿದ ಸುಮಾರು 38 ಕೆಜಿ ಮಾನವ ಕೂದಲನ್ನು ವಶಪಡಿಸಿಕೊಳ್ಳಲಾಯಿತು. ದೇಶದಾದ್ಯಂತ ಚಿಂದಿ ಆಯುವವರು ಸಂಗ್ರಹಿಸಿದ ಟನ್‌ಗಟ್ಟಲೆ ಮಾನವ ಕೂದಲು, ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳ ಮೂಲಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ತಲುಪುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೂದಲು ಶುಚಿಗೊಳಿಸುವಿಕೆ ಮತ್ತು ಸಂಸ್ಕರಣೆಯು ಮುರ್ಷಿದಾಬಾದ್‌ನ ಬೆಲ್ದಂಗಾ ಪ್ರದೇಶದಲ್ಲಿ ಗೃಹ ಉದ್ಯಮವಾಗಿದೆ.

‘‘ಉದ್ದ ಕೂದಲು ಹೊಂದಿರುವ ಮಹಿಳೆಯರು ತಲೆ ಬಾಚಿದ ನಂತರ ಉದುರುವ ಕೂದಲಿನ ಎಳೆಗಳನ್ನು ಬಿಸಾಡುತ್ತಾರೆ. ಚಿಂದಿ ಕೀಳುವವರು ಮತ್ತು ಕೂದಲು ಸಂಗ್ರಾಹಕರು ಈ ಎಳೆಗಳನ್ನು ಮನೆ-ಮನೆಯಿಂದ ಮತ್ತು ನಗರಗಳ ಪ್ರದೇಶಗಳಿಂದ ಸಂಗ್ರಹಿಸುತ್ತಾರೆ. ಅವುಗಳು ನಮ್ಮನ್ನು ತಲುಪಿದ ನಂತರ ವಿಗ್‌ಗಳಾಗಿ ನೇಯುವ ಮೊದಲು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಸಂಸ್ಕರಿಸಲಾಗುತ್ತದೆ. ಸಂಸ್ಕರಿಸಿದ ಕೂದಲು ಮತ್ತು ವಿಗ್‌ಗಳನ್ನು ಮುಖ್ಯವಾಗಿ ಚೀನಾಕ್ಕೆ ರಫ್ತು ಮಾಡಲಾಗುತ್ತದೆ’’ ಎಂದು ಮುರ್ಷಿದಾಬಾದ್ ಕೂದಲು ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಿಲನ್ ಚೌಧರಿ ಹೇಳಿದರು.

ಕೊರೊನಾ ಪೂರ್ವದಲ್ಲಿ, ಸಂಸ್ಕರಿಸಿದ ಕೂದಲು ಮತ್ತು ವಿಗ್‌ಗಳನ್ನು ಆಮದು ಮಾಡಿಕೊಳ್ಳುವ ಮೊದಲು ಗುಣಮಟ್ಟವನ್ನು ಪರೀಕ್ಷಿಸಲು ಚೀನೀ ಆಮದುದಾರರು ಮುರ್ಷಿದಾಬಾದ್‌ಗೆ ಬರುತ್ತಿದ್ದರು. ಆದರೆ ಸಾಂಕ್ರಾಮಿಕ ರೋಗದ ನಂತರ ವೀಸಾ ನಿಯಮಗಳನ್ನು ಬಿಗಿಗೊಳಿಸಿದ್ದರಿಂದ ಅವರು ಬರುವುದನ್ನು ನಿಲ್ಲಿಸಿದ್ದಾರೆ ಎಂದು ಮಿಲನ್ ಹೇಳಿದ್ದಾರೆ.

ಚಿಕ್ಕ ಕೂದಲನ್ನು (ಆರು ಇಂಚುಗಳಿಗಿಂತ ಕಡಿಮೆ) ಸಂಸ್ಕರಿಸಲಾಗುವುದಿಲ್ಲ ಮತ್ತು ಸಾಮಾನ್ಯವಾಗಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ಅಗ್ಗದ ದರದಲ್ಲಿ ರಫ್ತು ಮಾಡಲಾಗುತ್ತದೆ. ಬಾಂಗ್ಲಾದೇಶದಲ್ಲಿ ನೌಗಾಂವ್, ಕುಷ್ಟಿಯಾ, ರಾಜ್‌ಶಾಹಿ ಮತ್ತು ದಿನಾಜ್‌ಪುರ ಮುಂತಾದ ಸ್ಥಳಗಳಲ್ಲಿ ಬಹಳಷ್ಟು ಕೂದಲು ಸಂಸ್ಕರಣಾ ಕಾರ್ಖಾನೆಗಳಿವೆ.

ಗಾತ್ರ ಮತ್ತು ಗುಣಮಟ್ಟದ ಆಧಾರದ ಮೇಲೆ ಮಾನವ ಕೂದಲು ಪ್ರತಿ ಕೆಜಿಗೆ ₹ 5,000 ರಿಂದ ₹ 10,000 ವರೆಗೆ ಸಿಗುತ್ತದೆ. 90% ಕೂದಲನ್ನು ಚೀನಾಕ್ಕೆ ಕಳುಹಿಸಿದರೆ, ಸ್ವಲ್ಪ ಭಾಗ ಮಾತ್ರ ಯುಎಇ ಮತ್ತು ಮಲೇಷ್ಯಾಕ್ಕೆ ಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವನ್ನು ಬಾಂಗ್ಲಾದೇಶದ ಸ್ಥಳೀಯ ಕೂದಲನ್ನು ಬದಲಾಯಿಸುವ ಸಲೂನ್‌ಗಳು ಸಹ ಬಳಸುತ್ತಿದ್ದವು.

‘‘6 ಇಂಚುಗಳಿಗಿಂತ ಹೆಚ್ಚು ಉದ್ದದ ಮಾನವ ಕೂದಲಿನ ಉದ್ದನೆಯ ಎಳೆಗಳಿಗೆ ಕಾರ್ಖಾನೆಗಳಲ್ಲಿ ಭಾರಿ ಬೇಡಿಕೆಯಿದೆ. ಉದ್ದನೆಯ ಕೂದಲನ್ನು ಮಹಿಳೆಯರಿಗೆ ವಿಗ್ ಮಾಡಲು ಮತ್ತು ಕೂದಲು ವಿಸ್ತರಣೆಗೆ ಬಳಸಿದರೆ, ಚಿಕ್ಕದಾದ ಕೂದಲನ್ನು ಪುರುಷರಿಗೆ ಮತ್ತು ಕೃತಕ ಆಟಿಕೆಗಳನ್ನು ತಯಾರಿಸಲು ಬಳಸಲಾಗುತ್ತದೆ’’ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:

Fire Accident: ಬೆಳ್ಳಂ ಬೆಳಗ್ಗೆ ಬೆಂಕಿಯ ರುದ್ರ ನರ್ತನ; ಹೊತ್ತಿ ಉರಿದ ಕಟ್ಟಡ

‘ಮೋದಿ ಸರ್ಕಾರದ ಚುನಾವಣಾ ಆಫರ್ ಶೀಘ್ರ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ’: ರಾಹುಲ್ ಗಾಂಧಿ

Published On - 10:02 am, Sun, 6 March 22