ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಹರಿದ್ವಾರ ಮತ್ತು ಉತ್ತರಾಖಂಡ್ನ (Uttarakhand) ಕೆಲವು ಸ್ಥಳಗಳಲ್ಲಿ ಶನಿವಾರ ಸುಮಾರು ₹ 4,50,00,000 ಕ್ಕಿಂತ ಹೆಚ್ಚು ಮೌಲ್ಯದ ಹಳೆಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ ಆರು ಜನರನ್ನು ಬಂಧಿಸಲಾಗಿದೆ. ಉತ್ತರಾಖಂಡ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ದಾಳಿ ನಡೆಸಿತ್ತು. ‘‘ಹಣದೊಂದಿಗೆ ಸಿಕ್ಕಿಬಿದ್ದಿರುವವರಲ್ಲಿ ಮೂವರು ಹರಿದ್ವಾರದವರು ಮತ್ತು ಉಳಿದವರು ಉತ್ತರ ಪ್ರದೇಶದವರು. ಪ್ರಕರಣದ ವಿಚಾರಣೆ ನಡೆಯುತ್ತಿದೆ’’ ಎಂದು ಎಸ್‌ಟಿಎಫ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಜಯ್ ಸಿಂಗ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರಂದು ನೋಟು ಅಮಾನ್ಯೀಕರಣದ ಘೋಷಣೆ ಮಾಡಿದ್ದರು. ಆ ಮೂಲಕ ಹಳೆಯ ₹500 ಮತ್ತು ₹1,000 ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಹಳೆಯ ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಉತ್ತರಾಖಂಡ ಮತ್ತು ಯುಪಿ ಸೇರಿದಂತೆ ಐದು ರಾಜ್ಯಗಳಲ್ಲಿ ಮುಂದಿನ ತಿಂಗಳಿನಿಂದ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪಡೆಯ ದಾಳಿ ಮಹತ್ವ ಪಡೆದಿದೆ. ಉತ್ತರಾಖಂಡ್ನಲ್ಲಿ ಫೆಬ್ರವರಿ 14 ರಂದು 70 ಸ್ಥಾನಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಭಾರತೀಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಪಂಚರಾಜ್ಯ ಚುನಾವಣೆ; ಪ್ರಚಾರ ಸಮಾರಂಭಗಳಿಗೆ ವಿಧಿಸಿದ್ದ ನಿರ್ಬಂಧ ಮುಂದುವರಿಕೆ:
ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಪಂಚ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಸಾರ್ವಜನಿಕ ಸಭೆ, ರೋಡ್ ಶೋ, ಪ್ರಚಾರ ಸಭೆಗಳನ್ನು ನಡೆಸಲು ವಿಧಿಸಲಾಗಿದ್ದ ನಿರ್ಬಂಧದ ಅವಧಿಯನ್ನು ಇಂದು ಚುನಾವಣಾ ಆಯೋಗ (Election Commission Of India) ವಿಸ್ತರಣೆ ಮಾಡಿದೆ. ಜನವರಿ 8ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗದ ಅಧಿಕಾರಿಗಳು, ಕೊವಿಡ್ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಐದು ರಾಜ್ಯಗಳಲ್ಲಿ ಜನವರಿ 15ರವರೆಗೆ ಯಾವುದೇ ಪಕ್ಷಗಳೂ ರೋಡ್ ಶೋ, ಸಾರ್ವಜನಿಕ ಪ್ರಚಾರದ ನೆಪದಲ್ಲಿ ಜನರನ್ನು ಸೇರಿಸುವ, ಪ್ರಚಾರ ಸಭೆ, ರ್ಯಾಲಿಗಳನ್ನು ನಡೆಸುವಂತಿಲ್ಲ ಎಂದು ಹೇಳಿದ್ದರು.
ಆ ಅವಧಿಯನ್ನೀಗ ವಿಸ್ತರಣೆ ಮಾಡಲಾಗಿದ್ದು, ಜನವರಿ 22ರವರೆಗೂ ಸಾರ್ವಜನಿಕ ಸಭೆ, ರೋಡ್ ಶೋ, ರ್ಯಾಲಿಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಿದೆ. ಗೋವಾ, ಮಣಿಪುರ, ಉತ್ತರಾಖಂಡ್, ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಫೆಬ್ರವರಿ 10ರಿಂದ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ:
Indian Flag: ಜೈಸಲ್ಮೇರ್ ಗಡಿಯಲ್ಲಿ ಭಾರತದ ಅತ್ಯಂತ ದೊಡ್ಡ ಖಾದಿ ರಾಷ್ಟ್ರ ಧ್ವಜ ಪ್ರದರ್ಶನ