ಪಂಚರಾಜ್ಯಗಳ ಚುನಾವಣೆ; ಪ್ರಚಾರಸಭೆ, ರೋಡ್​ಶೋಗಳಿಗೆ ವಿಧಿಸಿದ್ದ ನಿರ್ಬಂಧ ಅವಧಿ ಜ.22ರವರೆಗೆ ವಿಸ್ತರಿಸಿದ ಚುನಾವಣಾ ಆಯೋಗ

ಯಾವುದೇ ರಾಜಕೀಯ ಪಕ್ಷಗಳು ಗರಿಷ್ಠ 300 ವ್ಯಕ್ತಿಗಳನ್ನೊಳಗೊಂಡ ಒಳಾಂಗಣ ಸಭೆ ನಡೆಸಬಹುದು ಅಥವಾ ಯಾವುದೇ ಸಭಾಂಗಣದ ಶೇ.50ರ ಸಾಮರ್ಥ್ಯದಲ್ಲಿ ಜನರನ್ನು ಸೇರಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಪಂಚರಾಜ್ಯಗಳ ಚುನಾವಣೆ; ಪ್ರಚಾರಸಭೆ, ರೋಡ್​ಶೋಗಳಿಗೆ ವಿಧಿಸಿದ್ದ ನಿರ್ಬಂಧ ಅವಧಿ ಜ.22ರವರೆಗೆ ವಿಸ್ತರಿಸಿದ ಚುನಾವಣಾ ಆಯೋಗ
ಚುನಾವಣಾ ಆಯೋಗ

ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆಗಳು (Assembly Election 2022) ನಡೆಯಲಿರುವ ಐದು ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಸಾರ್ವಜನಿಕ ಸಭೆ, ರೋಡ್​ ಶೋ, ಪ್ರಚಾರ ಸಭೆಗಳನ್ನು ನಡೆಸಲು ವಿಧಿಸಲಾಗಿದ್ದ ನಿರ್ಬಂಧದ ಅವಧಿಯನ್ನು ಇಂದು ಚುನಾವಣಾ ಆಯೋಗ (Election Commission Of India) ವಿಸ್ತರಣೆ ಮಾಡಿದೆ. ಜನವರಿ 8ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗದ ಅಧಿಕಾರಿಗಳು, ಕೊವಿಡ್​ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಐದು ರಾಜ್ಯಗಳಲ್ಲಿ ಜನವರಿ 15ರವರೆಗೆ ಯಾವುದೇ ಪಕ್ಷಗಳೂ ರೋಡ್ ಶೋ, ಸಾರ್ವಜನಿಕ ಪ್ರಚಾರದ ನೆಪದಲ್ಲಿ ಜನರನ್ನು ಸೇರಿಸುವ, ಪ್ರಚಾರ ಸಭೆ, ರ್ಯಾಲಿಗಳನ್ನು ನಡೆಸುವಂತಿಲ್ಲ ಎಂದು ಹೇಳಿದ್ದರು. ಆದರೆ ಆ ಅವಧಿಯನ್ನೀಗ ವಿಸ್ತರಣೆ ಮಾಡಲಾಗಿದೆ. ಜನವರಿ 22ರವರೆಗೂ ಸಾರ್ವಜನಿಕ ಸಭೆ, ರೋಡ್​ ಶೋ, ರ್ಯಾಲಿಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಿದೆ.  

ಗೋವಾ, ಮಣಿಪುರ, ಉತ್ತರಾಖಂಡ್​, ಉತ್ತರಪ್ರದೇಶ ಮತ್ತು ಪಂಜಾಬ್​​ ರಾಜ್ಯಗಳಲ್ಲಿ ಫೆಬ್ರವರಿ 10ರಿಂದ ಚುನಾವಣೆ ನಡೆಯಲಿದೆ. ಮಾರ್ಚ್​ 10ರಂದು ಮತ ಎಣಿಕೆ ನಡೆಯುತ್ತದೆ. ಮತ್ತೊಂದೆಡೆ ಕೊರೊನಾ ಹೆಚ್ಚುತ್ತಿರುವ ಕಾರಣಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು, ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಆಗಾಗ ಸಭೆ-ಸಮಾಲೋಚನೆ ಮಾಡುತ್ತಿದ್ದಾರೆ. ಹಾಗೇ, ಇಂದು ಕೂಡ ಸಭೆ ನಡೆದಿತ್ತು. ಈ ವೇಳೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಐದು ರಾಜ್ಯಗಳ ಪ್ರಮುಖ ಆರೋಗ್ಯ ಕಾರ್ಯದರ್ಶಿಗಳು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿ, ಕೊರೊನಾ ವೈರಸ್​ ಹರಡುವಿಕೆ ಪ್ರಮಾಣ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈಗ ನಿರ್ಬಂಧ ಸಡಿಲಿಸಲು ಸೂಕ್ತ ಕಾಲವಲ್ಲ ಎಂದೂ ಮನವರಿಕೆ ಮಾಡಿಕೊಟ್ಟಿದ್ದಾರೆ.  ಇಷ್ಟಾದರೂ ಕೂಡ ಸಾರ್ವಜನಿಕರು, ರಾಜಕೀಯ ಕೆಲ ಮುಖಂಡರು ಕೊವಿಡ್​ 19 ಶಿಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದೂ ಸಹ ಇಂದಿನ ಸಭೆಯಲ್ಲಿ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ ಚುನಾವಣಾ ಆಯೋಗ ಸದ್ಯ ರಾಜಕೀಯ ಪಕ್ಷಗಳಿಗೆ ಒಂದು ವಿಚಾರದಲ್ಲಿ ನಿರ್ಬಂಧ ಸಡಿಲಿಸಿದೆ. ಅದರ ಅನ್ವಯ ಯಾವುದೇ ರಾಜಕೀಯ ಪಕ್ಷಗಳು ಗರಿಷ್ಠ 300 ವ್ಯಕ್ತಿಗಳನ್ನೊಳಗೊಂಡ ಒಳಾಂಗಣ ಸಭೆ ನಡೆಸಬಹುದು ಅಥವಾ ಯಾವುದೇ ಸಭಾಂಗಣದ ಶೇ.50ರ ಸಾಮರ್ಥ್ಯದಲ್ಲಿ ಜನರನ್ನು ಸೇರಿಸಬಹುದು ಎಂದು ಹೇಳಿದೆ. ಹಾಗೇ, ಐದೂ ರಾಜ್ಯಗಳಲ್ಲಿ ಜನವರಿ 8ರಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಅದರ ನಿಯಮಗಳೊಂದಿಗೆ ಕೊವಿಡ್ 19 ನಿಯಂತ್ರಣ ನಿಯಮಗಳನ್ನೂ ರಾಜಕೀಯ ಪಕ್ಷಗಳು ಪಾಲನೆ ಮಾಡಬೇಕಾಗಿದೆ.

ಇದನ್ನೂ ಓದಿ: ಓಮಿಕ್ರಾನ್​ ಆತಂಕ: ಬಟ್ಟೆಯ ಮಾಸ್ಕ್​ಗಳ ಬಳಕೆ ಬೇಡ ಎಂದ ತಜ್ಞರು

Published On - 5:57 pm, Sat, 15 January 22

Click on your DTH Provider to Add TV9 Kannada