ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿಗೆ ಲಂಚ ನೀಡದಿದ್ದಕ್ಕೆ ಚುನಾವಣಾ ಟಿಕೆಟ್ ಕೊಡಲಿಲ್ಲ; ಉತ್ತರ ಪ್ರದೇಶ ಕಾಂಗ್ರೆಸ್ ನಾಯಕಿ ಆರೋಪ

ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಅವರಿಗೆ ಲಂಚ ನೀಡಲು ಸಾಧ್ಯವಾಗದ ಒಬಿಸಿ ಮಹಿಳೆಯಾದ ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪ್ರಿಯಾಂಕಾ ಮೌರ್ಯ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.

ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿಗೆ ಲಂಚ ನೀಡದಿದ್ದಕ್ಕೆ ಚುನಾವಣಾ ಟಿಕೆಟ್ ಕೊಡಲಿಲ್ಲ; ಉತ್ತರ ಪ್ರದೇಶ ಕಾಂಗ್ರೆಸ್ ನಾಯಕಿ ಆರೋಪ
ಪ್ರಿಯಾಂಕಾ ಮೌರ್ಯ

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಕಾರ್ಯದರ್ಶಿಗೆ ನಾನು ಲಂಚ ನೀಡಲಿಲ್ಲ ಎಂಬ ಕಾರಣಕ್ಕೆ ನನಗೆ ವಿಧಾನಸಭಾ ಟಿಕೆಟ್ ನಿರಾಕರಿಸಲಾಗಿದೆ. ಕಾಂಗ್ರೆಸ್ ಪಕ್ಷವು (Congress Party) ಮಹಿಳಾ ವಿರೋಧಿಯಾಗಿದೆ ಎಂದು ಉತ್ತರ ಪ್ರದೇಶ ಮಹಿಳಾ ಕಾಂಗ್ರೆಸ್ ನಾಯಕಿ ಆರೋಪಿಸಿದ್ದಾರೆ. 2019ರಿಂದ ಉತ್ತರ ಪ್ರದೇಶದ ಮಹಿಳಾ ಕಾಂಗ್ರೆಸ್‌ನ ರಾಜ್ಯ ಉಪಾಧ್ಯಕ್ಷೆ ಡಾ. ಪ್ರಿಯಾಂಕಾ ಮೌರ್ಯ ತಮ್ಮದೇ ಪಕ್ಷದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮದೇ ಕಾಂಗ್ರೆಸ್ ಪಕ್ಷವು ಮಹಿಳಾ ವಿರೋಧಿ ಮತ್ತು ಒಬಿಸಿ ವಿರೋಧಿಯಾಗಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ನಾನು ಲಂಚ ನೀಡಲು ನಿರಾಕರಿಸಿದ್ದರಿಂದ ಕಾಂಗ್ರೆಸ್ ಚುನಾವಣಾ ಟಿಕೆಟ್ ನಿರಾಕರಿಸಿದೆ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಅವರಿಗೆ ಲಂಚ ನೀಡಲು ಸಾಧ್ಯವಾಗದ ಒಬಿಸಿ ಮಹಿಳೆಯಾದ ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪ್ರಿಯಾಂಕಾ ಮೌರ್ಯ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ. ಟಿಕೆಟ್‌ಗೆ ಬದಲಾಗಿ ಹಣ ನೀಡಬೇಕೆಂದು ಅಪರಿಚಿತ ವ್ಯಕ್ತಿಯಿಂದ ತನಗೆ ಕರೆ ಬಂದಿತ್ತು. ಆದರೆ, ನಾನು ಅದಕ್ಕೆ ನಿರಾಕರಿಸಿದೆ ಎಂದಿದ್ದಾರೆ.

“ನಾನು ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿದ್ದೇನೆ. ಆದರೆ ಯಾರಿಗೆ ಟಿಕೆಟ್ ನೀಡಬೇಕೆಂದು ಅವರು ಮೊದಲೇ ನಿರ್ಧರಿಸಿದ್ದರು. ಕೇವಲ ಒಂದು ತಿಂಗಳ ಹಿಂದೆ ಪಕ್ಷಕ್ಕೆ ಬಂದ ವ್ಯಕ್ತಿಗೂ ಟಿಕೆಟ್ ನೀಡಲಾಯಿತು. ಅಪರಿಚಿತ ವ್ಯಕ್ತಿಯಿಂದ ತನಗೆ ಕರೆ ಬಂದಿತ್ತು. ನನಗೆ ಕರೆ ಮಾಡಿದವರು ಟಿಕೆಟ್‌ಗೆ ಪ್ರತಿಯಾಗಿ ಹಣ ಕೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ ಎಂದು ಪ್ರಿಯಾಂಕಾ ಮೌರ್ಯ ಆರೋಪಿಸಿದ್ದಾರೆ.

“ಕ್ಷೇತ್ರದಲ್ಲಿ ನಾನು ಕಷ್ಟಪಟ್ಟು ಕೆಲಸ ಮಾಡಿದರೂ ನನಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗಲಿಲ್ಲ ಎಂದು ನನಗೆ ಬೇಸರವಾಗಿದೆ. `ಲಡ್ಕಿ ಹೂಂ ಲಾಡ್ ಸಕ್ತಿ ಹೂಂ’ ಪ್ರಚಾರದಲ್ಲಿ ನನ್ನ ಮುಖವನ್ನು ಬಳಸಲಾಯಿತು. ಆದರೆ, ಟಿಕೆಟ್ ನೀಡುವಾಗ ಮಾತ್ರ ನನ್ನನ್ನು ಪರಿಗಣಿಸಲಿಲ್ಲ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಿಯಾಂಕಾ ಅವರ ಆಪ್ತ ಕಾರ್ಯದರ್ಶಿ ಸಂದೀಪ್ ಸಿಂಗ್, ಯೋಗೀಶ್ ಕುಮಾರ್ ದೀಕ್ಷಿತ್ ಮತ್ತು ಶಿವ ಪಾಂಡೆ ಎಂಬ ಇಬ್ಬರು ಕಾಂಗ್ರೆಸ್ ನಾಯಕರ ಮೇಲೆ ಲಕ್ನೋದ ಹುಸೇನ್‌ಗಂಜ್ ಪೊಲೀಸರು ಬೆದರಿಕೆ ಮತ್ತು ಹಲ್ಲೆಗಾಗಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: Congress Candidate List Punjab: ಪಂಜಾಬ್​ನಲ್ಲಿ ಕಾಂಗ್ರೆಸ್​ನಿಂದ ನವಜೋತ್ ಸಿಂಗ್ ಸಿಧು, ಸಿಎಂ ಚನ್ನಿ ಸೇರಿ 86 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

BSP Candidate List UP: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; ಬಿಎಸ್​ಪಿಯಿಂದ 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Click on your DTH Provider to Add TV9 Kannada