ಜೈಪುರ, ಡಿಸೆಂಬರ್ 03: ಪಂಚರಾಜ್ಯ ಚುನಾವಣೆಯಲ್ಲಿ ಐದು ರಾಜ್ಯಗಳ (Five states assembly elections 2023) ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಂದಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ. ರಾಜಸ್ಥಾನದ ಜೈಪುರ ವಿದ್ಯಾಧರ್ ನಗರ ವಿಧಾನಸಭಾ ಕ್ಷೇತ್ರ (Vidhyadhar Nagar Assembly) ದಲ್ಲಿ ಕಾಂಗ್ರೆಸ್ನ ಸೀತಾರಾಮ್ ಅಗರ್ವಾಲ್ ಮತ್ತು ಬಿಜೆಪಿಯ ದಿಯಾ ಕುಮಾರಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಳಿಕ 1 ಲಕ್ಷ 8 ಸಾವಿರದ 516 ಮತಗಳನ್ನು ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸೀತಾರಾಮ್ ಅಗರ್ವಾಲ್ ಅವರನ್ನು ಸೋಲಿಸುವ ಮೂಲಕ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಾಸ್ತವವಾಗಿ, ದಿಯಾ ಕುಮಾರಿ ಅವರು ಕೂಡ ರಾಜ್‌ಸಮಂದ್ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದಾರೆ. ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ದಿಯಾ ಕುಮಾರಿ ಬ್ರಿಟೀಷ್ ಆಳ್ವಿಕೆಯ ಅವಧಿಯಲ್ಲಿ ಜೈಪುರದ ರಾಜವಂಶದ ಕೊನೆಯ ಆಡಳಿತಗಾರ ಮಹಾರಾಜ ಮಾನ್ ಸಿಂಗ್ ಅವರ ಎರಡನೇ ಮೊಮ್ಮಗಳಾಗಿದ್ದಾರೆ.
ಇದನ್ನೂ ಓದಿ: ಇಂದಿನ 3 ರಾಜ್ಯಗಳ ಗೆಲುವು 2024ರ ಹ್ಯಾಟ್ರಿಕ್ ಗೆಲುವಿನ ದಿಕ್ಸೂಚಿ: ಪ್ರಧಾನಿ ಮೋದಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವ ಮೂಲಕ ನರ್ಪತ್ ಸಿಂಗ್ ರಾಜ್ವಿ ಸ್ಪರ್ಧಿಸಿದ್ದು, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿಕ್ರಮ್ ಸಿಂಗ್ ಶೇಖಾವತ್ ಅವರನ್ನು ಸೋಲಿಸಿದ್ದರು. ಆ ಮೂಲಕ ನರ್ಪತ್ ಸಿಂಗ್ ರಾಜ್ವಿ ಸತತ ಮೂರು ಬಾರಿ ಇಲ್ಲಿಂದ ಶಾಸಕರಾಗಿದ್ದರು. ಆದರೆ ಈ ಬಾರಿ ಬಿಜೆಪಿ ಅವರಿಗೆ ಚಿತ್ತೋರಗಢದಿಂದ ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣ ಮತ್ತು ರಜಪೂತರ ಮತವನ್ನು ನಿರ್ಣಾಯಕ ಎಂದು ಪರಿಗಣಿಸಲಾಗಿತ್ತು.
ಬಿಜೆಪಿ ಅಭ್ಯರ್ಥಿ ದಿಯಾ ಕುಮಾರಿ 1 ಲಕ್ಷ 8 ಸಾವಿರದ 516 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸೀತಾರಾಮ್ ಅಗರ್ವಾಲ್ 71 ಸಾವಿರದ 368 ಮತಗಳಿಂದ ಸೋತಿದ್ದಾರೆ. 780 ಮತಗಳನ್ನು ಪಡೆದುಕೊಳ್ಳುವ ಮೂಲಕ ಆಮ್ ಆದ್ಮಿ ಪಕ್ಷ ಮೂರನೇ ಸ್ಥಾನದಲ್ಲಿದೆ.
2008 ರಲ್ಲಿ ರಾಜಸ್ಥಾನದಲ್ಲಿ ಡಿಲಿಮಿಟೇಶನ್ ಮಾಡಲಾಯಿತು. ಬಳಿಕ ವಿದ್ಯಾಧರ್ ನಗರ ಕ್ಷೇತ್ರವನ್ನು ರಚಿಸಲಾಯಿತು. ಅಂದಿನಿಂದ ಈ ಕ್ಷೇತ್ರ ಬಿಜೆಪಿ ನಿಯಂತ್ರಣದಲ್ಲಿದೆ. 70 ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಮತದಾರರಿರುವ ಕಾರಣ ಇಲ್ಲಿ ಹೆಚ್ಚಿನ ಜಾತಿ ಸಮೀಕರಣಗಳು ಕಂಡುಬರುತ್ತಿವೆ. ಇದಲ್ಲದೇ 75 ಸಾವಿರಕ್ಕೂ ಹೆಚ್ಚು ರಾಜ್‌ಪುತ್ ಹಾಗೂ 50 ಸಾವಿರಕ್ಕೂ ಹೆಚ್ಚು ವೈಶ್ಯ ಮತದಾರರಿದ್ದು, ಬಿಜೆಪಿ ಮತಬ್ಯಾಂಕ್‌ಗಳೆನ್ನಲಾಗಿದೆ. ಒಟ್ಟಾರೆಯಾಗಿ ಬಿಜೆಪಿ 2 ಲಕ್ಷ ಮತದಾರರ ಮೇಲೆ ಪ್ರಬಲ ಹಿಡಿತ ಹೊಂದಿದೆ.
ವಿದ್ಯಾಧರ್ ನಗರ ಕ್ಷೇತ್ರದಲ್ಲಿ 3 ಲಕ್ಷದ 41 ಸಾವಿರದ 649 ಮತದಾರರಿದ್ದು, ಈ ಪೈಕಿ 1 ಲಕ್ಷ 77 ಸಾವಿರದ 696 ಪುರುಷರು ಹಾಗೂ 1 ಲಕ್ಷ 63 ಸಾವಿರದ 951 ಮಹಿಳೆಯರು ಇದ್ದಾರೆ. ಈ ಬಾರಿ 2 ಲಕ್ಷದ 47 ಸಾವಿರದ 859 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 1 ಲಕ್ಷದ 30 ಸಾವಿರದ 664 ಪುರುಷರು ಹಾಗೂ 1 ಲಕ್ಷದ 17 ಸಾವಿರದ 194 ಮಹಿಳೆಯರು ಮತ ಚಲಾಯಿಸಿದ್ದಾರೆ. ಒಟ್ಟಾರೆ ಶೇ.72.55ರಷ್ಟು ಮತದಾನ ಆಗಿದೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Sun, 3 December 23