
ಬೆಂಗಳೂರು, (ಜನವರಿ 22): 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಮರು ಪರೀಕ್ಷೆಯು ನಾಳೆ ಅಂದರೆ ಜನವರಿ 23ರಂದು ಬೆಂಗಳೂರಿನ ಒಟ್ಟು 117 ಕೇಂದ್ರಗಳಲ್ಲಿ ನಡೆಯಲಿದೆ. ಈ ಹಿನ್ನೆಲ್ಲಿ ಈ ಬಾರಿ ಯಾವುದೇ ಅಕ್ರಮಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ 117 ಕೇಂದ್ರಗಳಲ್ಲಿ ನಾಳೆ (ಮಂಗಳವಾರ) ಬೆಳಗ್ಗೆ 7 ಗಂಟೆಯಿಂದ ಪರೀಕ್ಷೆ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲು ಆದೇಶದಲ್ಲಿ ಸೂಚಿಸಿದ್ದಾರೆ. ಈ ಹಿಂದೆ ನಡೆದ ಘಟನೆಗಳು ಮರುಕಳಿಸಬಾರದೆಂದು ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಸೂಚಿಸಿರುವಂತೆ ಅಭ್ಯರ್ಥಿಗಳು ವಸ್ತ್ರಸಂಹಿತೆಯನ್ನು ಪಾಲಿಸಬೇಕೆಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: 545 ಪಿಎಸ್‌ಐ ನೇಮಕಾತಿ ಮರುಪರೀಕ್ಷೆಯ ಮಾರ್ಗಸೂಚಿ ಬಿಡುಗಡೆ, ಇಲ್ಲಿದೆ ಸಂಪೂರ್ಣ ವಿವರ
54 ಸಾವಿರ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಣಿ ಮಾಡಿಕೊಂಡಿದ್ದು, ಪರೀಕ್ಷೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಮತ್ತು ಮಧ್ಯಾಹ್ನ 1ರಿಂದ 2.30ರ ವರೆಗೆ ನಡೆಯಲಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿ ನಾಲ್ವರು ಸಶಸ್ತ್ರ ಪೇದೆ ಮತ್ತು ಇಬ್ಬರು ಮಹಿಳಾ ಪೇದೆ ಸೇರಿದಂತೆ ಒಟ್ಟು 6 ಮಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 40 ಬೆಟಾಲಿಯನ್ ಪೊಲೀಸರನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಪೊಲೀಸರು ಪರೀಕ್ಷಾ ಕೇಂದ್ರಗಳ ಸುತ್ತ ಅನುಮಾನಸ್ಪದವಾಗಿ ಓಡಾಡುವವರ, ಗಾಳಿ ಸುದ್ದಿ ಹಬ್ಬಿಸುವ ಕಿಡಿಗೇಡಿಗಳು ಮತ್ತು ಜೆರಾಕ್ಸ್ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. 200 ಮೀಟರ್ ಸುತ್ತ ನಿಷೇಧಾಜ್ಞೆ ಘೋಷಿಸಿದ್ದು, ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನು ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಲಾಗುತ್ತದೆ.
ಇನ್ನು ಅಭ್ಯರ್ಥಿಗಳು ಕೆಇಎ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೆಕು. ಎಲೆಕ್ಟ್ರಾನಿಕ್ ಸಾಧನ, ಮೊಬೈಲ್ ಸೇರಿದಂತೆ ಕೆಲ ವಸ್ತುಗಳನ್ನು ನಿಷೇಧಿಸಲಾಗಿದೆ.