ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿಲ್ಲ: 2020ರ ನಾಗರಿಕ ಪರೀಕ್ಷೆಗಳ ಬಗ್ಗೆ ಸರ್ಕಾರದ ಮಾಹಿತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 24, 2021 | 9:28 PM

ಪ್ರತಿ ವರ್ಷ ನಾಗರಿಕ ಸೇವಾ ಪರೀಕ್ಷೆಗಳನ್ನು ಮೂರು ಹಂತಗಳಲ್ಲಿ ಕೇಂದ್ರ ಲೋಕಸೇವಾ ಆಯೋಗವು (Union Public Service Commission - UPSC) ನಡೆಸುತ್ತದೆ.

ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿಲ್ಲ: 2020ರ ನಾಗರಿಕ ಪರೀಕ್ಷೆಗಳ ಬಗ್ಗೆ ಸರ್ಕಾರದ ಮಾಹಿತಿ
ಪ್ರಾತಿನಿಧಿಕ ಚಿತ್ರ (Photo credit: Facebook/ IAS association)
Follow us on

ದೆಹಲಿ: 2020ರ ಸಾಲಿನಲ್ಲಿ ನಡೆದಿದ್ದ ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ನೀಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಿತು.

ಪ್ರತಿ ವರ್ಷ ನಾಗರಿಕ ಸೇವಾ ಪರೀಕ್ಷೆಗಳನ್ನು ಮೂರು ಹಂತಗಳಲ್ಲಿ ಕೇಂದ್ರ ಲೋಕಸೇವಾ ಆಯೋಗವು (Union Public Service Commission – UPSC) ನಡೆಸುತ್ತದೆ. ಪ್ರಾಥಮಿಕ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನಗಳ ಹಂತದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಆಯ್ಕೆಯಾದವರನ್ನು ಭಾರತೀಯ ಆಡಳಿತ ಸೇವೆ (Union Public Service Commission – UPSC), ಭಾರತೀಯ ವಿದೇಶಾಂಗ ಸೇವೆ (Indian Foreign Service – IFS) ಮತ್ತು ಭಾರತೀಯ ಪೊಲೀಸ್ ಸೇವೆ (Indian Police Service – IPS) ಸೇರಿದಂತೆ ಹಲವು ಸರ್ಕಾರಿ ಸೇವೆಗಳಿಗೆ ಈ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

‘2020ರಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆಯೇ’ ಎಂಬ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಿಬ್ಬಂದಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಇಲ್ಲ, ಇಂಥ ಯಾವುದೇ ಪ್ರಸ್ತಾವಗಳು ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಂದರ್ಶನದಲ್ಲಿ ಫೇಲ್ ಆದರೂ ಹಲವು ಅನುಕೂಲ
ಭಾರತೀಯ ನಾಗರಿಕ ಸೇವೆ ಪರೀಕ್ಷೆಗಳಿಗೆ (Indian Civil Service Examination) ನೋಂದಣಿ ಮಾಡಿಕೊಂಡವರು ಪ್ರಾಥಮಿಕ (ಪ್ರಿಲಿಮಿನರಿ) ಮತ್ತು ಮುಖ್ಯ ಪರೀಕ್ಷೆಗಳಲ್ಲಿ (ಮೇನ್ಸ್​) ಮುನ್ನಡೆ ಸಾಧಿಸಿ, ಸಂದರ್ಶನದ ಹಂತದಲ್ಲಿ ವಿಫಲರಾದರೂ ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆ, ಸರ್ಕಾರಿ / ಖಾಸಗಿ ಸಂಸ್ಥೆಗಳು, ಉದ್ಯಮಗಳಲ್ಲಿ ಉನ್ನತ ಹುದ್ದೆಗಳು ಸಿಗುವಂತೆ ಅವಕಾಶ ಮಾಡಿಕೊಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

ಹಲವು ವರ್ಷಗಳಿಂದ ಚರ್ಚೆಯ ಹಂತದಲ್ಲಿಯೇ ಇದ್ದ ಕೇಂದ್ರ ಲೋಕಸೇವಾ ಆಯೋಗದ (Union Public Service Commission – UPSC) ಈ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ಈ ವರ್ಷದಿಂದ ಕೇಂದ್ರ ಲೋಕಸೇವಾ ಆಯೋಗವು ಪ್ರಿಲಿಮಿನರಿ ಮತ್ತು ಮೇನ್ಸ್​ನಲ್ಲಿ ತೇರ್ಗಡೆಯಾಗಿ, ಸಂದರ್ಶನದಲ್ಲಿ ವಿಫಲರಾಗುವ ಅಭ್ಯರ್ಥಿಗಳ ಅಂಕಗಳಿಕೆ ಮತ್ತು ಇತರ ವಿವರಗಳನ್ನು ಆಯೋಗವು ಸಾರ್ವಜನಿಕವಾಗಿ ಪ್ರಕಟಿಸುತ್ತದೆ. ಈ ಮಾಹಿತಿಯನ್ನು ಬಳಸಿಕೊಳ್ಳುವ ಇತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಇಂಥ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವಾಗ ಆದ್ಯತೆ ನೀಡುವುದು ನಿರೀಕ್ಷಿತ.

(IAS Exams UPSC 2020 No Proposal To Give Another Chance Government replies in Rajyasabha)

ಇದನ್ನೂ ಓದಿ: UPSC Exam 2021: ಐಎಎಸ್ ಪರೀಕ್ಷೆ ಕಟ್ಟಿದವರು ಸಂದರ್ಶನದಲ್ಲಿ ಫೇಲ್ ಆದರೂ ಹಲವು ಅನುಕೂಲ

ಇದನ್ನೂ ಓದಿ: UPSC Prelims Exam 2021 Postponed: ಜೂನ್ 27ರ ಯುಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆ ಅಕ್ಟೋಬರ್ 10ಕ್ಕೆ ಮುಂದೂಡಿಕೆ

Published On - 9:28 pm, Sat, 24 July 21