Job Alert: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳು: ಕನ್ನಡ, ಕೊಂಕಣಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 20, 2022 | 6:59 PM

ESIC Recruitment: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಭ್ಯರ್ಥಿಗಳು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯನ್ನು ಈ ಬಾರಿ ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ, ಕೊಂಕಣಿ ಭಾಷೆಗಳಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ.

Job Alert: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳು: ಕನ್ನಡ, ಕೊಂಕಣಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ
ಕಾರ್ಮಿಕರ ರಾಜ್ಯ ವಿಮಾ ಕಂಪನಿಯಲ್ಲಿ ಉದ್ಯೋಗಾವಕಾಶಗಳು
Follow us on

ಬೆಂಗಳೂರು: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ (Employee State Insurance Corporation – ESIC) ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ವಿವಿಧ ಪ್ರಾದೇಶಿಕ ಕಚೇರಿಗಳಿಗೆ ಅಪ್ಪರ್ ಡಿವಿಷನ್ ಕ್ಲರ್ಕ್ (ಯುಡಿಸಿ), ಸ್ಟೆನೊಗ್ರಾಫರ್ (ಸ್ಟೆನೊ), ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳ ಭರ್ತಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತೆ ಸೇರಿದಂತೆ ಇತರ ವಿವರಗಳು ಹಾಗೂ ಅರ್ಜಿ ಸಲ್ಲಿಸಲು ರಾಜ್ಯ ವಿಮಾ ನಿಗಮದ www.esic.nic.in/recruitments ವೆಬ್​ಸೈಟ್​ ನೋಡಬಹುದು.

ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯನ್ನು ಈ ಬಾರಿ ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ‘ಕಾರ್ಮಿಕರ ರಾಜ್ಯ ವಿಮಾ ನಿಗಮವು ಕಳೆದ ಡಿಸೆಂಬರ್ 27 ರಂದು ಅಪ್ಪರ್ ಡಿವಿಷನ್ ಕ್ಲರ್ಕ್‌, ಸ್ಟೆನೋಗ್ರಾಫರ್ ಹಾಗೂ ಮಲ್ಟಿ ಟಾಸ್ಕ್ ಸಿಬ್ಬಂದಿಗಳು ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಪ್ರಕಟಿಸಿತ್ತು. ಈ ಕೆಳಹಂತದ ಹುದ್ದೆಗಳಿಗೆ ಕರ್ನಾಟಕದಲ್ಲಿ ಹಿಂದಿ ಜತೆಗೆ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶವಾಗುವಂತೆ ನಾನು ಕೇಂದ್ರ ಕಾರ್ಮಿಕ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚಿಸಿದ್ದೆ’ ಎಂದು ಹೇಳಿದ್ದಾರೆ.

‘ಇದೀಗ ನಿಗಮವು ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಎಂಟಿಎಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯಲ್ಲಿ ಭಾಷಾ ಮಾಧ್ಯಮದಲ್ಲಿ ಬದಲಾವಣೆ ಮಾಡಿ ಇತರ ಪ್ರಾದೇಶಿಕ ಭಾಷೆಗಳಿಗೂ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀ ಭೂಪೇಂದರ್ ಯಾದವ್ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ’ ಎಂದು ಟ್ವೀಟ್ ಮೂಲಕ

ಸಾಮಾನ್ಯ ಬುದ್ಧಿವಂತಿಕೆ ಮತ್ತು ರೀಸನಿಂಗ್, ಸಾಮಾನ್ಯ ಜ್ಞಾನ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್ ಕಾಂಪ್ರಹೆನ್ಷನ್ ವಿಷಯಗಳ ಬಗ್ಗೆ ಪ್ರಾಥಮಿಕ ಹಂತದ ಪರೀಕ್ಷೆ ತಲಾ ಒಂದು ಗಂಟೆ, ಅಂತಿಮ ಹಂತದ ಪರೀಕ್ಷೆ 2 ಗಂಟೆ ಅವಧಿಗೆ ನಡೆಯಲಿದೆ. ಕರ್ನಾಟಕದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕನ್ನಡ, ಕೊಂಕಣಿ, ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಬರೆಯಬಹುದು. ಉಳಿದಂತೆ ಇತರ ರಾಜ್ಯಗಳಿಗೆ ಪ್ರಾದೇಶಿಕವಾಗಿ ಆಯಾ ಪ್ರಾದೇಶಿಕ ಭಾಷೆಗಳನ್ನು ಬಳಸಲು ಅವಕಾಶ ನೀಡಲಾಗಿದೆ.

ಹುದ್ದೆ ಮತ್ತು ವೇತನ ವಿವರ
ಒಟ್ಟು 3882 ಹುದ್ದೆಗಳಿವೆ. ಜನವರಿ 15ರಿಂದ ಫೆಬ್ರುವರಿ 15ರವರೆಗೆ ಆನ್​ಲೈನ್​ನಲ್ಲಿ ನೋಂದಣಿಗೆ ಅವಕಾಶವಿದೆ. ಪರೀಕ್ಷೆಗಳು ಮಾರ್ಚ್ 19, 20, 26ರಂದು ನಡೆಯಲಿದೆ. ಯುಡಿಸಿ ಮತ್ತು ಸ್ಟೆನೊ ಹುದ್ದೆಗೆ ₹ 25,500ದಿಂದ ₹ 81,100 ಹಾಗೂ ಮಲ್ಟಿ ಟಾಸ್ಕ್​ ಸಿಬ್ಬಂದಿಗೆ ₹ 18,000ದಿಂದ ₹ 56,900ರವರೆಗೆ ವೇತನವಿದೆ.

ವಿದ್ಯಾರ್ಹತೆ
ಯುಡಿಸಿ ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಮೈಕ್ರೊಸಾಫ್ಟ್ ಆಫೀಸ್ ಮತ್ತು ಡೇಟಾಬೇಸ್ ನಿರ್ವಹಣೆಯನ್ನು ತಿಳಿದುಕೊಂಡಿರಬೇಕು. ಸ್ಟೆನೊ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ (12ನೇ ತರಗತಿ) ಪಾಸಾಗಿರಬೇಕು. ಒಂದು ನಿಮಿಷಕ್ಕೆ 80 ಪದಗಳಂತೆ 10 ನಿಮಿಷದ ಅವಧಿಗೆ ಟಿಕ್ಟೇಶನ್ ತೆಗೆದುಕೊಳ್ಳಬೇಕು. ಕಂಪ್ಯೂಟರ್​ನಲ್ಲಿ ಟ್ರಾಕ್ಸ್​ಕ್ರಿಪ್ಷನ್ ಪರೀಕ್ಷೆಯೂ ಇರುತ್ತದೆ. ಮಲ್ಟಿಟಾಸ್ಕಿಂಗ್​ ಹುದ್ದಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಪಾಸ್ ಆಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನದ ಒಳಗೆ ಅರ್ಹತೆಯ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗದವರು ಅರ್ಜಿ ಸಲ್ಲಿಸುವಂತಿಲ್ಲ.

ವಯೋಮಿತಿ
ಯುಡಿಸಿ ಮತ್ತು ಸ್ಟೆನೊ ಹುದ್ದೆಗೆ 18ರಿಂದ 27 ವರ್ಷ, ಮಲ್ಟಿಟಾಸ್ಕಿಂಗ್ ಹುದ್ದಗೆ 18ರಿಂದ 25 ವರ್ಷ. 15ನೇ ಫೆಬ್ರುವರಿ 2022ರ ದಿನಾಂಕದಂದು ಆಗಿರುವ ವಯಸ್ಸನ್ನು ಲೆಕ್ಕ ಹಾಕಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ, ನಿವೃತ್ತ ಸೈನಿಕರು ಮತ್ತು ಇತರ ವರ್ಗದವರಿಗೆ ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ವಿನಾಯ್ತಿ ಇರುತ್ತದೆ.

ಅರ್ಜಿ ಶುಲ್ಕ
ಪರಿಶಿಷ್ಟ ಜಾತಿ, ವರ್ಗ, ಮಹಿಳೆಯರು ಮತ್ತು ನಿವೃತ್ತ ಸೈನಿಕರಿಗೆ ₹ 250, ಸಾಮಾನ್ಯ ವಿಭಾಗದ ಅಭ್ಯರ್ಥಿಗಳಿಗೆ ₹ 500.

ಇದನ್ನೂ ಓದಿ: Central Railway Jobs: 2422 ಅಪ್ರೆಂಟಿಸ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ರೈಲ್ವೆ; 5 ವಲಯಗಳಲ್ಲಿ ಇದೆ ಉದ್ಯೋಗ ಅವಕಾಶ
ಇದನ್ನೂ ಓದಿ: ಸರ್ಕಾರಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಉದ್ಯೋಗಳಿಗಿರುವ ಸಾಮಾನ್ಯ ಅರ್ಹತಾ ಪರೀಕ್ಷೆ ಮತ್ತೆ ವಿಳಂಬ

Published On - 6:58 pm, Thu, 20 January 22