ಕಲಬುರಗಿ, ಅಕ್ಟೋಬರ್ 4: ಕೇಂದ್ರ ಸರ್ಕಾರವು ಪಿ.ಎಂ ವಿಶ್ವಕರ್ಮ ಎಂಬ ಹೊಸ ಯೋಜನೆಯನ್ನು (PM Vishwakarma Yojana) ಜಾರಿಗೊಳಿಸಿದ್ದು, ವಿವಿಧ 18 ವೃತ್ತಿಗಳಲ್ಲಿ ತೊಡಗಿರುವ ಸ್ವಯಂ ಉದ್ಯೋಗಿ ಕುಶಲಕರ್ಮಿಗಳು ವಿವಿಧ ಸವಲತ್ತು ಪಡೆಯಲು ಗ್ರಾಮ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ (kalaburagi) ಜಂಟಿ ನಿರ್ದೇಶಕ ಎಂ. ಸತೀಷಕುಮಾರ ತಿಳಿಸಿದ್ದಾರೆ.
ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಪಿ.ಎಂ. ವಿಶ್ವಕರ್ಮ ಪ್ರಮಾಣ ಪತ್ರ., ಐ.ಡಿ ಕಾರ್ಡ್, ಕೌಶಲ್ಯಾಭಿವೃದ್ಧಿ, ಉಪಕರಣಗಳಿಗೆ ಪ್ರೋತ್ಸಾಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ಹಾಗೂ ಮಾರುಕಟ್ಟೆ ಬೆಂಬಲ ಸೌಲಭ್ಯಗಳಂತಹ ಸವಲತ್ತುಗಳನ್ನು ನೀಡಲಾಗುತ್ತದೆ.
ಬಡಗಿತನ, ದೋಣಿ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ ಅಂದರೆ ಸ್ವಯಂ ಉದ್ಯೋಗಿ ಕುಶಲಕರ್ಮಿಗಳು ಹಸ್ತ ಮತ್ತು ಸಾಂಪ್ರದಾಯಿಕ ಉಪಕರಣಗಳೊಂದಿಗೆ ಕತ್ತಿ, ಗುರಾಣಿ, ಚಾಕುಗಳು ಇತ್ಯಾದಿ ಶಸ್ತ್ರಾಸ್ತ್ರ ತಯಾರಿಕೆ, ದುರಸ್ತಿ ಮತ್ತು ಸೇವೆ ಒದಗಿಸುವ ಅಸಂಘಟಿತ ವಲಯದ ಕುಶಲಕರ್ಮಿಗಳು, ಕಮ್ಮಾರ, ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಿಕೆ, ಬೀಗ ತಯಾರಕರು, ಶಿಲ್ಪಕಲೆ/ ಕಲ್ಲುಕೆತ್ತನೆ ಮಾಡುವವರು, ಆಭರಣ ತಯಾರಿಕೆ (ಅಕ್ಕಸಾಲಿಗರು), ಕುಂಬಾರಿಕೆ, ಪಾದರಕ್ಷೆ/ ಚರ್ಮಗಾರಿಕೆ ತಯಾರಿಕೆ, ಗೌಂಡಿ ಕೆಲಸಗಾರರು, ಕಸಬರಿಕೆ/ ಬಾಸ್ಕೆಟ್ / ಮ್ಯಾಟ್ ತಯಾರಿಕೆ/ ತೆಂಗಿನ ನಾರಿನ ಉತ್ಪನ್ನ ತಯಾರಕರು, ಗೊಂಬೆ ತಯಾರಕರು, ಕ್ಷೌರಿಕ, ಹೂ ಮಾಲೆ ತಯಾರಕರು, ಧೋಬಿ, ಟೈಲರ್, ಮೀನಿನ ಬಲೆಗಳನ್ನು ತಯಾರಿಸುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ನೊಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.
18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿದ್ದು, 18 ವರ್ಷ ಮೇಲ್ಪಟ್ಟವರಾಗಿರಬೇಕು. ಒಂದು ಕುಟುಂಬದಲ್ಲಿ (ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು) ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರು. ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು, ಕಳೆದ 5 ವರ್ಷಗಳಲ್ಲಿ ಪಿಎಂ ಇಜಿಪಿ/ಮುದ್ರಾ ಮತ್ತು ಪಿಎಂ-ಸ್ವನಿಧಿ ಸಾಲಗಳನ್ನು ಪಡೆದಿರಬಾರದು. ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
ಯೋಜನೆಯಡಿ ನೋಂದಣಿಯಾದ ಕುಶಲಕರ್ಮಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಸ್ಟೆಫಂಡ್ ಮತ್ತು ಇತರೆ ಭತ್ಯೆ ನೀಡಲಾಗುತ್ತದೆ. ತರಬೇತಿ ನಂತರ ಪ್ರಮಾಣ ಪತ್ರದೊಂದಿಗೆ 15,000 ರೂ. ಬೆಲೆಬಾಳುವ ಉಪಕರಣ ನೀಡಲಾಗುತ್ತದೆ.
ಇದಲ್ಲದೆ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಶೇ. 5 ಬಡ್ಡಿ ದರದಲ್ಲಿ 1 ಲಕ್ಷ ರೂ. ಸಾಲ ನೀಡಲಾಗುವುದು. ತದನಂತರ 15 ದಿನಗಳ ವರೆಗೆ ಉನ್ನತ ಮಟ್ಟದ ತರಬೇತಿ ನೀಡಿ ಮೊದಲು ಪಡೆದ 1 ಲಕ್ಷ ರೂ. ಸಾಲ ಮರುಪಾವತಿಯಾದ ನಂತರ ಶೇ. 5ರ ಬಡ್ಡಿ ದರದಲ್ಲಿಯೇ 2 ಲಕ್ಷ ರೂ. ಸಾಲ ನೀಡುವುದರ ಜೊತೆಗೆ ಕುಶಲಕರ್ಮಿಗಳಿಂದ ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಸಹ ಕಲ್ಪಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಸಂಪರ್ಕಿಸಬೇಕೆಂದು ಅವರು ಕೋರಿದ್ದಾರೆ.
ಉದ್ಯೋಗಕ್ಕೆ ಸಂಬಂಧಪಟ್ಟ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Wed, 4 October 23