ಗುಡ್​ನ್ಯೂಸ್: ನೈಋತ್ಯ ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ

|

Updated on: Aug 02, 2024 | 5:24 PM

ಪರೀಕ್ಷೆ ಸಿದ್ಧತೆ ನಡೆಸಿದ್ದ ಕನ್ನಡಿಗರು ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಆಯ್ಕೆ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಸಂಸದ ತೇಜಸ್ವಿ ಸೂರ್ಯ ಅವರ ಪರಿಶ್ರಮದಿಂದ ನೈಋತ್ಯ ರೈಲ್ವೆಯ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

ಗುಡ್​ನ್ಯೂಸ್: ನೈಋತ್ಯ ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ
ಸೋಮಣ್ಣ, ತೇಜಸ್ವಿ ಸೂರ್ಯ
Follow us on

ಬೆಂಗಳೂರು, (ಆಗಸ್ಟ್ 02): ನೈಋತ್ಯ ರೈಲ್ವೆ ವತಿಯಿಂದ ನಡೆಯಬೇಕಿರುವ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಕೇಂದ್ರ ರೈಲ್ವೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ನೈಋತ್ಯ ರೈಲ್ವೆ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮನವಿ ಮಾಡಿದ್ದರು. ಇದೀಗ ಇದಕ್ಕೆ ಸ್ಪಂದಿಸಿರುವ ರೈಲ್ವೆ ಇಲಾಖೆ, ನೈಋತ್ಯ ರೈಲ್ವೆ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಿದೆ. ಇದರಿಂದ ಕರ್ನಾಟಕದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದ್ದು, ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ನೈಋತ್ಯ ರೈಲ್ವೆ ವತಿಯಿಂದ ನಡೆಯಬೇಕಿದ್ದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷಾ ಸುತ್ತೋಲೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದಿರುವುದನ್ನು ಇಂದು ರೈಲ್ವೆ ಇಲಾಖೆ ರಾಜ್ಯ ಸಚಿವರಾದ ವಿ ಸೋಮಣ್ಣನವರ ಗಮನಕ್ಕೆ ತಂದಿದ್ದು, ಕನ್ನಡದಲ್ಲಿಯೂ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಮಾಡಿದ್ದ ಮನವಿಯನ್ನು ತಕ್ಷಣವೇ ಪುರಸ್ಕರಿಸಿ ಆದೇಶ ಹೊರಡಿಸಿರುವುದು ಅಭಿನಂದನಾರ್ಹ ಕ್ರಮ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Railway Facilitator Recruitment: ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ನೇಮಕಾತಿ – ಆಗಸ್ಟ್ 20ರೊಳಗೆ ಅರ್ಜಿ ಸಲ್ಲಿಸಿ


ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂದೆಂದಿಗೂ ಕಟಿಬದ್ಧವಾಗಿದೆ. ಇದರಿಂದ ಮಾತೃಭಾಷೆ ಕನ್ನಡದಲ್ಲಿ ಪರೀಕ್ಷೆ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ತುರ್ತಾಗಿ ಸ್ಪಂದಿಸಿ ಕ್ರಮ ಕೈಗೊಂಡಿರುವ ನಮ್ಮ ಕನ್ನಡದವರೇ ಆದ ಸಚಿವ ವಿ ಸೋಮಣ್ಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು ಎಂದು ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ನೈಋತ್ಯ ರೈಲ್ವೆಯು ಸಹಾಯಕ ಲೋಕೋಪೈಲಟ್‌ ಹುದ್ದೆಗಳಿಗೆ ಮೇ ತಿಂಗಳಲ್ಲಿ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಯ (ಜಿಡಿಸಿಇ) ಸುತ್ತೋಲೆ ಹೊರಡಿಸಿತ್ತು. ಇದರಲ್ಲಿ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರೀಕ್ಷೆ ಬರೆವ ಅವಕಾಶವಿತ್ತು. ಹೀಗಾಗಿ ಕನ್ನಡಿಗ ಅಭ್ಯರ್ಥಿಗಳು ಪರೀಕ್ಷಾ ಸಿದ್ಧತೆ ಕೈಗೊಂಡಿದ್ದರು. ಆಗಸ್ಟ್ 3ಕ್ಕೆ ಈ ಪರೀಕ್ಷೆಯಿದೆ. ಆದರೆ, ಈ ನಡುವೆ ಪರೀಕ್ಷಾರ್ಥಿಗಳಿಗೆ ನೀಡಲಾದ ಹಾಲ್‌ ಟಿಕೆಟ್‌ನಲ್ಲಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆವಂತೆ ಆಯ್ಕೆ ನೀಡಲಾಗಿತ್ತು.

ಇದನ್ನೂ ಓದಿ: RRB JE Recruitment 2024: ರೈಲ್ವೆ ನೇಮಕಾತಿ ಮಂಡಳಿ ಜೂನಿಯರ್ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಹುಬ್ಬಳ್ಳಿ ವಿಭಾಗದಲ್ಲಿ 521, ಮೈಸೂರು 130, ಬೆಂಗಳೂರು ವಿಭಾಗದಲ್ಲಿ 278 ಹುದ್ದೆಗಳಿಗೆ ಈ ಪರೀಕ್ಷೆ ನಡೆಯಲಿದ್ದು, ಎರಡು ತಿಂಗಳಿಂದ ಪರೀಕ್ಷೆ ಸಿದ್ಧತೆ ನಡೆಸಿದ್ದ ಕನ್ನಡಿಗರು ಇದೀಗ ಮಾತೃಭಾಷೆಯಲ್ಲಿ ಪರೀಕ್ಷೆ ಬರೆವ ಆಯ್ಕೆ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತುಕೊಂಡಿದ್ದರು.

ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಇಂದು (ಆಗಸ್ಟ್​ 02) ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ಕೂಡಲೇ ಇದಕ್ಕೆ ಸ್ಪಂದಿಸಿರುವ ಸೋಮಣ್ಣ ಅವರು ಕನ್ನಡದಲ್ಲೂ ಸಹ ಪರೀಕ್ಷೆ ಬರೆಯಲು ಅವಕಾಶ ಮಾಡಿಸಿಕೊಟ್ಟಿದ್ದಾರೆ.

ಇನ್ನಷ್ಟು  ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Fri, 2 August 24