
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಬೆಳ್ಳಿಪರದೆಗಿಂತಲೂ ಹೆಚ್ಚಾಗಿ ಓಟಿಟಿಯಲ್ಲಿ ಯಶಸ್ಸು ಸಿಗುತ್ತಿದೆ. ಬ್ರೀಥ್ ವೆಬ್ ಸರಣಿಯ ಗೆಲುವಿನ ಬಳಿಕ ಮತ್ತೊಮ್ಮೆ ಆನ್ಲೈನ್ನಲ್ಲಿ ಸದ್ದು ಮಾಡಲು ಅಭಿಷೇಕ್ ಬಚ್ಚನ್ ಸಜ್ಜಾಗುತ್ತಿದ್ದಾರೆ. ಅವರು ನಟಿಸಿರುವ ‘ದಿ ಬಿಗ್ ಬುಲ್’ ಚಿತ್ರ ಕೂಡ ನೇರವಾಗಿ ಓಟಿಟಿಯಲ್ಲಿ ತೆರೆಕಾಣಲಿದೆ.
ಷೇರು ಮಾರುಕಟ್ಟೆಯಲ್ಲಿ ಭಾರಿ ಹಗರಣ ನಡೆಸಿದ ಹರ್ಷದ್ ಮೆಹ್ತಾ ಜೀವನವನ್ನು ಆಧರಿಸಿ ‘ದಿ ಬಿಗ್ ಬುಲ್’ ಸಿನಿಮಾ ತಯಾರಾಗಿದೆ. ಆದರೆ ಕೆಲವು ಕಾಲ್ಪನಿಕ ಅಂಶಗಳನ್ನು ಸೇರಿಸಲಾಗಿದೆ. ಪಾತ್ರಗಳ ಹೆಸರುಗಳನ್ನು ಕೂಡ ಬದಲಾಯಿಸಲಾಗಿದೆ. ಮುಖ್ಯ ಭೂಮಿಕೆಯಲ್ಲಿ ಅಭಿಷೇಕ್ ಬಚ್ಚನ್ ನಟಿಸಿದ್ದು, ಮಂಗಳವಾರ (ಮಾ.16) ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಅದರ ಜೊತೆ ರಿಲೀಸ್ ಡೇಟ್ ಬಹಿರಂಗಪಡಿಸಲಾಗಿದೆ. ಏಪ್ರಿಲ್ 8ರಂದು ‘ದಿ ಬಿಗ್ ಬುಲ್’ ರಿಲೀಸ್ ಆಗಿದೆ.
ಮೊದಲೇ ತಿಳಿಸಿದಂತೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣುವುದಿಲ್ಲ. ಬದಲಿಗೆ, ಡಿಸ್ನಿ ಹಾಟ್ ಸ್ಟಾರ್ ಮೂಲಕ ನೇರವಾಗಿ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ವಿಶೇಷ ಏನೆಂದರೆ, ಹರ್ಷದ್ ಮೆಹ್ತಾ ನಡೆಸಿದ ಹಗರಣಗಳನ್ನೇ ಆಧರಿಸಿ ಕಳೆದ ವರ್ಷ ‘ಸ್ಕ್ಯಾಮ್ 1992’ ವೆಬ್ ಸಿರೀಸ್ ಬಿಡುಗಡೆ ಆಗಿತ್ತು. ಅದು ಸಿಕ್ಕಾಪಟ್ಟೆ ಜನಪ್ರಿಯವಾಯಿತು. ಈಗ ಅದೇ ಕಥೆಯನ್ನು ‘ದಿ ಬಿಗ್ ಬುಲ್’ ಸಿನಿಮಾದಲ್ಲಿ ಯಾವ ರೀತಿ ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಸಿನಿಪ್ರಿಯರ ಮನದಲ್ಲಿ ಮೂಡಿದೆ.
‘ದಿ ಬಿಗ್ ಬುಲ್’ ಚಿತ್ರಕ್ಕೆ ಕೂಕಿ ಗುಲಾಟಿ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆಗೆ ಇಲಿಯಾನಾ ಡಿಕ್ರೂಜ್, ನಿಖಿತಾ ದತ್ತ, ರಾಮ್ ಕಪೂರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಾ.19ರಂದು ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ಅಕ್ಟೋಬರ್ನಲ್ಲಿಯೇ ಈ ಚಿತ್ರ ತೆರೆಕಾಣಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಕೆಲಸಗಳು ತಡವಾಯಿತು. ನಂತರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು.
ಇದನ್ನೂ ಓದಿ: ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗ್ತಿದೆ ಅಭಿಷೇಕ್ ಬಚ್ಚನ್ ಹೊಸ ಹೇರ್ ಸ್ಟೈಲ್
Published On - 5:29 pm, Tue, 16 March 21