
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಆದಿಪುರುಷ್’ (Adipurush) ಚಿತ್ರ ಮುಂಚೂಣಿಯಲ್ಲಿದೆ. ಈ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಜೂನ್ 16ರಂದು ‘ಆದಿಪುರುಷ್’ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ನಟ ಪ್ರಭಾಸ್ (Prabhas) ಅವರು ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ಅಭಿನಯಿಸಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೇ 9ರಂದು ‘ಆದಿಪುರುಷ್’ ಟ್ರೇಲರ್ (Adipurush Trailer) ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ, ಅಂದರೆ ಮೇ 8ರ ಸಂಜೆ ಮಾಧ್ಯಮದವರಿಗೆ ಹಾಗೂ ಅಭಿಮಾನಿಗಳಿಗಾಗಿ ಕೆಲವು ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿತ್ತರ ಮಾಡಲಾಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ‘ಜೈ ಶ್ರೀರಾಮ್’ ಎಂದು ಜೈಕಾರ ಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್ನಲ್ಲಿ ಆಯೋಜಿಸಲಾಗಿದ್ದ ಟ್ರೇಲರ್ ಪ್ರದರ್ಶನದಲ್ಲಿ ಪ್ರಭಾಸ್, ಕೃತಿ ಸನೋನ್, ನಿರ್ದೇಶಕ ಓಂ ರಾವತ್ ಸೇರಿದಂತೆ ಇಡೀ ಚಿತ್ರತಂಡದವರು ಹಾಜರಿ ಹಾಕಿದ್ದರು. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಮೂಡಿಬಂದಿದೆ. 3ಡಿ ಟ್ರೇಲರ್ ಕಣ್ತುಂಬಿಕೊಂಡ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಚಿತ್ರಮಂದಿರದಲ್ಲಿ ಪ್ರಭಾಸ್ ಜೊತೆ ಸೇರಿ ಅಭಿಮಾನಿಗಳು ‘ಜೈ ಶ್ರೀರಾಮ್’ ಎಂದು ಜೈಕಾರ ಹಾಕುವ ಮೂಲಕ ಟ್ರೇಲರ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಆರಂಭದಲ್ಲಿ ‘ಆದಿಪುರುಷ್’ ಸಿನಿಮಾದ ಟೀಸರ್ ಬಿಡುಗಡೆ ಆದಾಗ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಕಳಪೆ ಗ್ರಾಫಿಕ್ಸ್ ಕಾರಣದಿಂದ ಈ ಚಿತ್ರಕ್ಕೆ ನೆಗೆಟಿವ್ ಕಮೆಂಟ್ಗಳು ಬಂದಿದ್ದವು. ಆದ್ದರಿಂದ ನಿರ್ದೇಶಕ ಓಂ ರಾವತ್ ಅವರು ಎಚ್ಚರಿಕೆ ವಹಿಸಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರು. ಅಂತಿಮವಾಗಿ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ.
ಮೇ 9ರಂದು ಸಂಜೆ 5 ಗಂಟೆಗೆ ಆನ್ಲೈನ್ನಲ್ಲಿ ‘ಆದಿಪುರುಷ್’ ಟ್ರೇಲರ್ ರಿಲೀಸ್ ಆಗಲಿದೆ. ಇದನ್ನು ನೋಡಿದ ಸಿನಿಪ್ರಿಯರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಸಿನಿಮಾ ಮೇಲೆ ಪ್ರಭಾಸ್ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯೂಟ್ಯೂಬ್ನಲ್ಲಿ ‘ಆದಿಪುರುಷ್’ ಟ್ರೇಲರ್ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Kriti Sanon: ಸೀತೆ ಆಗಿ ಬಂದ ಕೃತಿ ಸನೋನ್; ಹೊಸ ಪೋಸ್ಟರ್ ರಿಲೀಸ್ ಮಾಡಿದ ‘ಆದಿಪುರುಷ್’ ಟೀಂ
ಪ್ರಭಾಸ್ ಅವರು ‘ಆದಿಪುರುಷ್’ ಸಿನಿಮಾ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ‘ಬಾಹುಬಲಿ 2’ ಬಳಿಕ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ‘ಆದಿಪುರುಷ್’ ಚಿತ್ರ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:55 pm, Mon, 8 May 23