
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಎಸೆದಿದ್ದ ‘ವಂದೇ ಮಾತರಂ’ ಸವಾಲಿನ ಹಳೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋಗೆ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಅಲಾಯಾ ಎಫ್ ನೀಡಿರುವ ಪ್ರತಿಕ್ರಿಯೆ ಈಗ ವೈರಲ್ ಆಗಿದೆ. ಪುಣೆಯಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ‘ಪುರುಷಪ್ರಧಾನ ವ್ಯವಸ್ಥೆಯನ್ನು ನಿರ್ನಾಮ ಮಾಡಿ’ ಎಂದು ಕರೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ್ದ ಬಿಜೆಪಿ ನಾಯಕಿ ಬಾನ್ಸುರಿ ಸ್ವರಾಜ್, ‘ನಿಮಗೆ ಪುರುಷಪ್ರಧಾನ ವ್ಯವಸ್ಥೆಯನ್ನು ಅಂತ್ಯಗೊಳಿಸುವ ನಿಜವಾದ ಆಸೆ ಇದ್ದರೆ, ಮೊದಲು ವಂದೇ ಮಾತರಂ ಗೀತೆಯ ಎಲ್ಲಾ ಸಾಲುಗಳನ್ನು ಹಾಡಿ ತೋರಿಸಿ’ ಎಂದು ಸವಾಲು ಹಾಕಿದ್ದರು.
ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಸಂಚಾಲಕಿ ರುಚಿರಾ ಚತುರ್ವೇದಿ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದರು. ಪುರುಷಪ್ರಧಾನ ವ್ಯವಸ್ಥೆಯನ್ನು ಎದುರಿಸುವುದಕ್ಕೂ ವಂದೇ ಮಾತರಂ ಹಾಡುವುದಕ್ಕೂ ಏನು ಸಂಬಂಧ ಎಂದು ಅನೇಕ ನೆಟ್ಟಿಗರು ಪ್ರಶ್ನಿಸಿದ್ದರು. ಈ ವೈರಲ್ ವಿಡಿಯೋಗೆ ಕಾಮೆಂಟ್ ಮಾಡಿರುವ ನಟ ಹೃತಿಕ್ ರೋಷನ್, ‘ಹಃ? ಇದು ನಿಜವೇ. ವಾವ್’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು, ನಟಿ ಅಲಾಯಾ ಎಫ್ ಕೂಡ ‘ಇದೇನಿದು?’ ಎಂದು ನಗುವಿನ ಇಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.
‘ನಾನು ಇಂದು ನಿಮಗೆ ಒಂದು ಸವಾಲು ಹಾಕುತ್ತಿದ್ದೇನೆ. ನೀವು ಪುರುಷಪ್ರಧಾನ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಬಯಸುತ್ತೀರಿ, ಸರಿ. ನಾನು ಕ್ರಿಸ್‌ಮಸ್ ಕ್ಯಾರೋಲ್ ಹಾಡಲು, ವಂದೇ ಮಾತರಂ ಹಾಡಲು ಹಾಗೂ ಶಿವ ತಾಂಡವ ಸ್ತೋತ್ರ ಪಠಿಸಲು ಸಂಪೂರ್ಣ ಸಿದ್ಧಳಾಗಿದ್ದೇನೆ. ಆದ್ದರಿಂದ ನಾನು ನಿಮಗೆ ಸವಾಲು ಹಾಕುತ್ತೇನೆ. ನೀವು ನಿಜವಾಗಿಯೂ ಪುರುಷಪ್ರಧಾನ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಬಯಸಿದರೆ, ಮೊದಲು ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಿ ತೋರಿಸಿ’ ಎಂದು ಬಾನ್ಸುರಿ ಸ್ವರಾಜ್ ವಿಡಿಯೋದಲ್ಲಿ ಹೇಳಿದ್ದರು.
ಇದನ್ನೂ ಓದಿ: ಬೆಂಕಿಗೆ ತುಪ್ಪ ಸುರಿಯಬೇಡಿ: ಹೃತಿಕ್ ರೋಷನ್ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್
ಪುಣೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಮನುಸ್ಮೃತಿ ಮನಸ್ಥಿತಿಯನ್ನು ಟೀಕಿಸುತ್ತಾ ಮಹಿಳೆಯರು ಜಾಗೃತರಾಗಬೇಕು ಎಂದಿದ್ದರು. ‘ಹೆಣ್ಣುಮಕ್ಕಳು ಬೈಗುಳಗಳನ್ನು ಬಳಸಿದ್ದಕ್ಕೆ ಸಾಂಸ್ಕೃತಿಕ ಆಘಾತವಾಯಿತು ಎಂದು ಪ್ರಧಾನಿಯವರು ಹೇಳುತ್ತಾರೆ. ಆದರೆ ಗಂಡುಮಕ್ಕಳು ಬೈದರೆ ಯಾವುದೇ ಸಮಸ್ಯೆಯಿಲ್ಲವೇ? ಪುರುಷಪ್ರಧಾನ ವ್ಯವಸ್ಥೆಯು ನಿಮ್ಮನ್ನು ಹತೋಟಿಯಲ್ಲಿಡುತ್ತದೆ ಮತ್ತು ಹೆದರಿಸುತ್ತದೆ. ನಾವೆಲ್ಲರೂ ಸೇರಿ ಈ ವ್ಯವಸ್ಥೆಯನ್ನು ಧ್ವಂಸಗೊಳಿಸಬೇಕು’ ಎಂದು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.