ತಿರುಪತಿ ಲಡ್ಡು ವಿವಾದ ದೇಶದಾದ್ಯಂತ ಕೋಲಾಹಲ ಎಬ್ಬಿಸಿದೆ. ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾಗಿದ್ದು, ಇದು ಹಿಂದುಗಳ ಭಾವನೆಗೆ ತೀವ್ರ ಧಕ್ಕೆ ಉಂಟು ಮಾಡಿದೆ. ಆಂಧ್ರ ಪ್ರದೇಶ ಸರ್ಕಾರ, ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದೇವಾಲಯದ ಶುಭ್ರತೆಗೆ ನಿರ್ದೇಶಿಸಿದೆ. ಅಲ್ಲದೆ, ಲಡ್ಡು ಮಾಡಲು ತುಪ್ಪ ಸರಬರಾಜು ಮಾಡುತ್ತಿದ್ದ ಏಜೆನ್ಸಿ ವಿರುದ್ಧ ದೂರು ಸಹ ದಾಖಲಾಗಿದೆ. ಪ್ರಸ್ತುತ ಆಂಧ್ರದಲ್ಲಿ ಲಡ್ಡು ವಿವಾದ ದೊಡ್ಡದಾಗಿದ್ದು, ಆಡಳಿತ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದರ ಬೆನ್ನಲ್ಲೆ, ನಟ, ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ತಿರುಪತಿ ಲಡ್ಡು ಬಗ್ಗೆ ಮಾತನಾಡುತ್ತಿರುವ ನಟರಿಗೆ ಎಚ್ಚರಿಕೆ ಸಹ ನೀಡಿದ್ದಾರೆ.
ತಮಿಳು ನಟ ಕಾರ್ತಿ ನಟಿಸಿರುವ ತಮಿಳು ಸಿನಿಮಾ ‘ಮೆಯಿಳಾಗನ್’ ಸೆಪ್ಟೆಂಬರ್ 27ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲಿ ‘ಸತ್ಯಂ-ಸುಂದರಂ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಾರ್ತಿ ಇತ್ತೀಚೆಗಷ್ಟೆ ಹದರಾಬಾದ್ಗೆ ಆಗಮಿಸಿದ್ದರು. ಈ ವೇಳೆ ನಿರೂಪಕಿ, ‘ಲಡ್ಡು ಬೇಕಾ’ ಎಂದು ಜಾಹೀರಾತಿನ ಡೈಲಾಗ್ ಒಂದನ್ನು ತಮಾಷೆಗೆ ಹೇಳಿದರು. ಅದಕ್ಕೆ ಕಾರ್ತಿ, ‘ಲಡ್ಡು ವಿಷಯ ಈಗ ಬೇಡ, ಅದು ಬಹಳ ಸೆನ್ಸಿಟಿವ್ (ಸೂಕ್ಷ್ಮ) ವಿಷಯ ಆಗಿದೆ, ಲಡ್ಡು ಈಗ ಬೇಡ’ ಎಂದು ನಗುತ್ತಾ ಹೇಳಿದರು, ಅದಕ್ಕೆ ನಿರೂಪಕಿ, ‘ನಿಮಗಾಗಿ ಮೋತಿಚೂರ್ ಲಡ್ಡು ತರಿಸಿಕೊಡುತ್ತೇವೆ’ ಎನ್ನುತ್ತಾರೆ. ಅದಕ್ಕೆ ‘ಕಾರ್ತಿ, ಈಗ ಬೇಡ, ಲಡ್ಡು ಈಗ ಬೇಡ’ ಎಂದು ನಗುತ್ತಾ ಹೇಳಿದ್ದರು.
ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ: ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್
ಆದರೆ ಇಂದು ಮಾಧ್ಯಮಗಳ ಬಳಿ ಇದೇ ವಿಷಯ ಮಾತನಾಡಿರುವ ಪವನ್ ಕಲ್ಯಾಣ್, ‘ಸಿನಿಮಾ ಮಂದಿಗೆ ನಾನು ಎಚ್ಚರಿಕೆ ನೀಡಲು ಬಯಸುತ್ತೇನೆ. ಲಡ್ಡು ವಿಷಯದ ಬಗ್ಗೆ ಮಾತನಾಡುವುದಾದರೆ ಗಂಭೀರವಾಗಿ ಮಾತನಾಡಿ, ಇಲ್ಲವಾದರೆ ಮೌನವಾಗಿ ಇದ್ದು ಬಿಡಿ. ಅದನ್ನು ಬಿಟ್ಟು ನಿಮಗೆ ಅನಿಸಿದಂತೆ ಅಪಹಾಸ್ಯ ಮಾಡಿದರೆ ಮಾತ್ರ ಪ್ರಜೆಗಳು ನಿಮ್ಮನ್ನು ಕ್ಷಮಿಸರು’ ಎಂದಿದ್ದಾರೆ.
ಮುಂದುವರೆದು, ‘ಇದು ನಮಗೆ ಬಹಳ ತೀವ್ರವಾದ ನೋವು, ನೀವು ಲಡ್ಡು ಬಗ್ಗೆ ಜೋಕ್ ಮಾಡುತ್ತಿದ್ದೀರಿ. ನಿನ್ನೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸಹ ನೋಡಿದ್ದೀನಿ, ‘ಲಡ್ಡು ಸೆನ್ಸಿಟಿವ್ ಇಶ್ಯೂ’ ಎಂದಿದ್ದಾರೆ. ಹಾಗೆ ಮಾತನಾಡಬೇಡಿ, ಎಂದಿಗೂ ಹಾಗೆ ಮಾತನಾಡುವ ಧೈರ್ಯ ಮಾಡಬೇಡಿ. ನಿಮ್ಮನ್ನು ನಟರಾಗಿ ನಾನು ಗೌರವಿಸುತ್ತೀನಿ. ಆದರೆ ಸನಾತನ ಧರ್ಮದ ವಿಷಯ ಬಂದಾಗ ನೀವು ಸಾವಿರ ಬಾರಿ ಯೋಚನೆ ಮಾಡಿ ಮಾತನಾಡಿ’ ಎಂದು ಎಚ್ಚರಿಕೆ ನೀಡಿದ್ದಾರೆ ಪವನ್ ಕಲ್ಯಾಣ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Tue, 24 September 24