ಆಂಧ್ರ, ತೆಲಂಗಾಣದ ಪ್ರವಾಹ ಸಂತ್ರಸ್ತರ ನೆರವಿಗೆ 6 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್

ಮೊದಲು 2 ಕೋಟಿ ರೂಪಾಯಿ ದೇಣಿಗೆ ನೀಡಿದ ಪವನ್​ ಕಲ್ಯಾಣ್​ ಅವರು ನಂತರ ಮತ್ತೆ 4 ಕೋಟಿ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಪ್ರವಾಹಕ್ಕೆ ಸಿಕ್ಕ ಅಂದಾಜು 400 ಪಂಚಾಯತ್​ಗಳಿಗೆ ಈ ಹಣದಿಂದ ಸಹಾಯ ಆಗಲಿದೆ. ತೆಲುಗು ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಕೂಡ ಕೋಟ್ಯಂತರ ರೂಪಾಯಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆಂಧ್ರ, ತೆಲಂಗಾಣದ ಪ್ರವಾಹ ಸಂತ್ರಸ್ತರ ನೆರವಿಗೆ 6 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್
ಪವನ್​ ಕಲ್ಯಾಣ್​

Updated on: Sep 04, 2024 | 10:12 PM

ಪ್ರವಾಹದಿಂದಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಜನಜೀವನ ಅಸ್ತವ್ಯಸ್ತ ಆಗಿದೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಚಿರಂಜೀವಿ, ರಾಮ್​ ಚರಣ್​, ಪ್ರಭಾಸ್​, ಅಲ್ಲು ಅರ್ಜುನ್​, ನಂದಮೂರಿ ಬಾಲಕೃಷ್ಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಆ ಮೂಲಕ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ಟಾಲಿವುಡ್​ ನಟ ಪವನ್​ ಕಲ್ಯಾಣ್​ ಅವರು 6 ಕೋಟಿ ರೂಪಾಯಿ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರರಾಗಿದ್ದಾರೆ.

ಮೊದಲು ಪವನ್​ ಕಲ್ಯಾಣ್​ ಅವರು ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಒಂದು ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದರು. ಆ ನಂತರ ಅವರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ, ಈ ಹಣ ಸಾಕಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರು. ಹಾಗಾಗಿ ಮತ್ತೆ 4 ಕೋಟಿ ರೂಪಾಯಿ ನೀಡುವುದಾಗಿ ಪವನ್​ ಕಲ್ಯಾಣ್​ ಘೋಷಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ 400 ಪಂಚಾಯತ್​ ಕ್ಷೇತ್ರಗಳಲ್ಲಿ ಪುನರ್​ವಸತಿ ಕಲ್ಪಿಸುವ ಸಲುವಾಗಿ ಪವನ್​ ಕಲ್ಯಾಣ್​ ನೀಡಿದ 4 ಕೋಟಿ ರೂಪಾಯಿ ಬಳಕೆ ಆಗಲಿದೆ. ‘ಪ್ರವಾಹದಿಂದ ಆಗಿರುವ ಹಾನಿ ಗಮನಿಸಿದರೆ 1 ಕೋಟಿ ರೂಪಾಯಿಯಿಂದ ಏನೂ ಸಾಧ್ಯವಾಗುವುದಿಲ್ಲ. ಹಾಗಾಗಿ ಮತ್ತೆ 4 ಕೋಟಿ ರೂಪಾಯಿ ನೀಡಲಿದ್ದೇನೆ’ ಎಂದು ಪವನ್​ ಕಲ್ಯಾಣ್​ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಕನ್ನಡ ಕಲಿಯುವ ಮನಸ್ಸಾಗಿದೆ’: ಕರುನಾಡಿಗೆ ಬಂದು ಆಸೆ ಹೇಳಿಕೊಂಡ ಪವನ್​ ಕಲ್ಯಾಣ್​

‘ನಮ್ಮ ಪಕ್ಕದ ತೆಲಂಗಾಣ ಕೂಡ ಪ್ರವಾಹದಲ್ಲಿ ಸಿಲುಕಿದೆ. ಹಾಗಾಗಿ ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡುತ್ತಿದ್ದೇನೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ನಾನು ನೇರವಾಗಿ ಭೇಟಿ ಮಾಡಿ ಹಣ ನೀಡುತ್ತೇನೆ. ಸಿನಿಮಾ ಸೆಲೆಬ್ರಿಟಿಗಳು ಕೂಡ ಈ ಸಮಯದಲ್ಲಿ ಮಾನವೀಯತೆ ತೋರಿಸುತ್ತಿದ್ದಾರೆ’ ಎಂದು ಪವನ್​ ಕಲ್ಯಾಣ್​ ಹೇಳಿದ್ದಾರೆ. ಪ್ರವಾಹ ಪೀಡಿತ ಅನೇಕ ಪ್ರದೇಶಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us