ಧ್ರುವ್ ವಿಕ್ರಮ್‌ ನಿಯಂತ್ರಣದಲ್ಲಿದ್ದ ನಟಿ ಅನುಪಮಾ ಪರಮೇಶ್ವರನ್? ಹಳೆಯ ವಿಡಿಯೋ ವೈರಲ್

ಅನುಪಮಾ ಪರಮೇಶ್ವರನ್ ಅವರು ಇತ್ತೀಚೆಗೆ ಧನ್ಯಾ ವರ್ಮಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದರು. ‘ನಮ್ಮ ನಿಶ್ಚಿತಾರ್ಥವನ್ನು ಮುಂದೂಡಿದೆ, ಏಕೆಂದರೆ ಆ ಮದುವೆ ಖಂಡಿತವಾಗಿಯೂ ವಿಚ್ಛೇದನದಲ್ಲಿ ಮುಕ್ತಾಯಗೊಳ್ಳುತ್ತಿತ್ತು’ ಎಂದು ಹೇಳುವ ಮೂಲಕ ತಮ್ಮ ಸಂಬಂಧಕ್ಕೆ ಪೂರ್ಣವಿರಾಮ ಬಿದ್ದಿರುವುದನ್ನು ಅವರು ಸ್ಪಷ್ಟಪಡಿಸಿದ್ದರು. ಆದರೆ ಅವರು ಧ್ರುವ್ ವಿಕ್ರಮ್ ಹೆಸರು ಹೇಳಿಲ್ಲ.

ಧ್ರುವ್ ವಿಕ್ರಮ್‌ ನಿಯಂತ್ರಣದಲ್ಲಿದ್ದ ನಟಿ ಅನುಪಮಾ ಪರಮೇಶ್ವರನ್? ಹಳೆಯ ವಿಡಿಯೋ ವೈರಲ್
Anupama Parameswaran

Updated on: Aug 17, 2026 | 5:31 PM

ಚಿತ್ರರಂಗದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಇತ್ತೀಚೆಗೆ ತಮ್ಮ ಮಾಜಿ ಪ್ರೇಮಿಯ ಬಗ್ಗೆ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಅತಿಯಾದ ಆತ್ಮರತಿ ಸ್ವಭಾವ ಹೊಂದಿದ ವ್ಯಕ್ತಿಯೊಂದಿಗೆ ತಾವು ಎರಡು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿ ಇದ್ದ ವಿಷಯವನ್ನು ಅವರು ಬಾಯಿಬಿಟ್ಟಿದ್ದಾರೆ. ಆತ ತಮ್ಮ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದನೆಂದು ಅನುಪಮಾ ಬಹಿರಂಗಪಡಿಸಿದ್ದರು. ಆ ವ್ಯಕ್ತಿ ಧ್ರುವ್ ವಿಕ್ರಮ್ (Dhruv Vikram) ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಅನುಪಮಾ ಪರಮೇಶ್ವರನ್ ಅವರು ಈ ಹೇಳಿಕೆ ನೀಡಿದ ಬೆನ್ನಲ್ಲೇ, ‘ಆ ವ್ಯಕ್ತಿ ಬೇರಾರೂ ಅಲ್ಲ, ಬೈಸನ್ ಕಾಲಮಾದನ್ ಸಿನಿಮಾದ ಅವರ ಸಹ-ನಟ ಧ್ರುವ್ ವಿಕ್ರಮ್ ಇರಬಹುದು’ ಎಂದು ನೆಟ್ಟಿಗರು ಶಂಕಿಸಿದ್ದಾರೆ. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ಅವರಿಬ್ಬರ ಹಳೆಯ ಪೋಡ್‌ಕಾಸ್ಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡುತ್ತಿದೆ.

ಏನಿದೆ ಆ ವೈರಲ್ ಪೋಡ್‌ಕಾಸ್ಟ್‌ನಲ್ಲಿ?

2025ರ ಅಕ್ಟೋಬರ್​ನಲ್ಲಿ ನಿಖಿಲ್ ವಿಜಯೇಂದ್ರ ಸಿಂಹ ಅವರ ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಅನುಪಮಾ, ಸಿನಿಮಾದ ಪ್ರಚಾರದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ತಾವು ಯಾವ ಫೋಟೋಗಳನ್ನು ಪೋಸ್ಟ್ ಮಾಡಬೇಕು ಎಂಬುದನ್ನು ಧ್ರುವ್ ಅವರೇ ನಿರ್ಧರಿಸುತ್ತಿದ್ದರು ಎಂದು ಹೇಳಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ. ಅಭಿಮಾನಿಗಳು ಆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಅನುಪಮಾ ಪರಮೇಶ್ವರನ್ ಹೇಳಿದ್ದೇನು?

‘ನಾವು ಪ್ರಚಾರಕ್ಕಾಗಿ ಸಾಕಷ್ಟು ಫೋಟೋಗಳನ್ನು ತೆಗೆಸಿಕೊಳ್ಳುತ್ತೇವೆ. ಆದರೆ ಅದರಲ್ಲಿ ನನ್ನ ಅಭಿಪ್ರಾಯಕ್ಕೆ ಬೆಲೆ ಇರುವುದಿಲ್ಲ. ಯಾವ ಫೋಟೋದಲ್ಲಿ ನಾನು ಚೆನ್ನಾಗಿ ಕಾಣಿಸುತ್ತೇನೆ ಎಂದು ಧ್ರುವ್ ಅವರೇ ಆಯ್ಕೆ ಮಾಡಿ ಪೋಸ್ಟ್ ಮಾಡಲು ಹೇಳುತ್ತಿದ್ದರು’ ಎಂದು ಅನುಪಮಾ ಜಾಲಿಯಾಗಿ ಹೇಳಿದ್ದರು. ಈ ವೇಳೆ ಧ್ರುವ್ ಮುಖದಲ್ಲಿ ವ್ಯತ್ಯಾಸ ಕಂಡುಬಂದಾಗ, ಅನುಪಮಾ ತಕ್ಷಣವೇ ವಿಷಯವನ್ನು ಪ್ರಮೋಷನ್ ಶೂಟ್‌ಗೆ ಸೀಮಿತಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದು ವಿಡಿಯೋದಲ್ಲಿ ಕಂಡುಬಂದಿದೆ.

ಅಷ್ಟೇ ಅಲ್ಲದೆ, ಧ್ರುವ್ ಅವರ ಕಟ್ಟುನಿಟ್ಟಿನ ಡಯಟ್ ಅಭ್ಯಾಸಗಳಿಂದಾಗಿ ತಾವು ಕೂಡ ತಮ್ಮ ಆಹಾರದ ಶೈಲಿಯನ್ನು ಬದಲಾಯಿಸಿಕೊಂಡಿದ್ದಾಗಿ ಅನುಪಮಾ ಆ ಸಂದರ್ಶನದಲ್ಲಿ ತಿಳಿಸಿದ್ದರು. ರೆಡ್ಡಿಟ್, ಎಕ್ಸ್ ಮುಂತಾದ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಧ್ರುವ್ ವಿಕ್ರಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಟಾಕ್ಸಿಕ್ ರಿಲೇಶನ್​ಶಿಪ್​ನಿಂದ ನೊಂದ ಅನುಪಮಾ ಪರಮೇಶ್ವರನ್ ಬೆಂಬಲಕ್ಕೆ ನಿಂತ ಸ್ಟಾರ್ ನಟರಿವರು

‘ಧ್ರುವ್ ಅವರು ತಮ್ಮ ತಂದೆ ವಿಕ್ರಮ್ ಅಭಿನಯದ ಅನ್ನಿಯನ್ ಚಿತ್ರದ ಪಾತ್ರದಂತೆಯೇ ನಿಜ ಜೀವನದಲ್ಲೂ ನಡೆದುಕೊಳ್ಳುತ್ತಿದ್ದಾರೆ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಧ್ರುವ್ ಅವರ ಚೊಚ್ಚಲ ಸಿನಿಮಾ ‘ಆದಿತ್ಯ ವರ್ಮ’ (ಅರ್ಜುನ್ ರೆಡ್ಡಿ ತಮಿಳು ರಿಮೇಕ್) ಪಾತ್ರವನ್ನು ನೆನಪಿಸಿಕೊಂಡ ನೆಟ್ಟಿಗರು, ‘ಅವರು ನಿಜ ಜೀವನದಲ್ಲೂ ಅರ್ಜುನ್ ರೆಡ್ಡಿಯಂತೆಯೇ ಇದ್ದಾರೆ, ಆದ್ದರಿಂದ ಆ ಪಾತ್ರ ಅವರಿಗೆ ಅಷ್ಟೊಂದು ಹೊಂದಿಕೆಯಾಗಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us