
ಮೆಗಾ ಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರಪ್ರಸಾದ್ ಗಾರು’ (Mana Shankara Vara Prasad Garu) ಸಿನಿಮಾ ಜನವರಿ 12ರಂದು ಬಿಡುಗಡೆ ಆಗುತ್ತಿದೆ. ಸಂಕ್ರಾಂತಿ ಪ್ರಯುಕ್ತ ಈ ಚಿತ್ರವನ್ನು ನೋಡಲು ಚಿರಂಜೀವಿ (Chiranjeevi) ಫ್ಯಾನ್ಸ್ ಕಾತರದಿಂದ ಕಾದಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಈ ಚಿತ್ರವನ್ನು ನೋಡಿ ತಮ್ಮ ಅನಿಸಿಕೆ ತಿಳಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ‘ಬುಕ್ ಮೈ ಶೋ’ (Book My Show) ಮೂಲಕ ಯಾರೂ ಕೂಡ ಈ ಸಿನಿಮಾಗೆ ರೇಟಿಂಗ್ ನೀಡುವಂತಿಲ್ಲ. ವಿಮರ್ಶೆ ತಿಳಿಸುವಂತಿಲ್ಲ! ಈ ರೀತಿ ನ್ಯಾಯಾಲಯದ ಆದೇಶ ಇದೆ. ಈ ಮೊದಲು ಕನ್ನಡದ ‘ದಿ ಡೆವಿಲ್’, ‘ಮಾರ್ಕ್’, ‘45’ ಸಿನಿಮಾಗಳು ಕೂಡ ಇದೇ ಹಾದಿಯನ್ನು ಅನುಸರಿಸಿದ್ದವು.
ದರ್ಶನ್ ಅಭಿನಯದ ‘ದಿ ಡೆವಿಲ್’, ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’, ಶಿವರಾಜ್ಕುಮಾರ್ ಅಭಿನಯದ ‘45’ ಸಿನಿಮಾಗಳು ಬಿಡುಗಡೆ ಆಗುವಾಗ ಫ್ಯಾನ್ಸ್ ವಾರ್ ನಡೆಯುತ್ತಿತ್ತು. ಆಗ ಕೆಲವರು ಬೇಕಂತಲೇ ಈ ಸಿನಿಮಾಗಳಿಗೆ ನೆಗೆಟಿವ್ ಪ್ರಚಾರ ಮಾಡುವ ಸಾಧ್ಯತೆ ಇತ್ತು. ಅದನ್ನು ತಪ್ಪಿಸಲು ಕೋರ್ಟ್ ಮೊರೆ ಹೋಗಲಾಗಿತ್ತು. ‘ಬುಕ್ ಮೈ ಶೋ’ ರೀತಿಯ ಪ್ಲಾಟ್ಫಾರ್ಮ್ ಮೂಲಕ ಜನರು ವಿಮರ್ಶೆ ಅಥವಾ ರೇಟಿಂಗ್ ನೀಡುವುದನ್ನು ತಡೆಯಲಾಗಿತ್ತು.
ಚಿರಂಜೀವಿ ಅಭಿನಯದ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಸಹ ಕೋರ್ಟ್ ಮೊರೆ ಹೋಗಿದೆ. ಈ ಸಿನಿಮಾಗೆ ರಿವ್ಯೂ ಮತ್ತು ರೇಟಿಂಗ್ ನೀಡುವ ಆಯ್ಕೆಯನ್ನು ತೆಗೆದುಹಾಕಲಾಗಿದೆ. ಕೋರ್ಟ್ ಆದೇಶದ ಮೇರೆಗೆ ಈ ರೀತಿ ಮಾಡಲಾಗಿದೆ ಎಂದು ‘ಬುಕ್ ಮೈ ಶೋ’ ಪ್ರಕಟಿಸಿದೆ. ಸ್ಟಾರ್ ನಟರ ಸಿನಿಮಾಗಳು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಸಿನಿಮಾಗಳ ವಿರುದ್ಧ ಅಪಪ್ರಚಾರ ಮಾಡಲು ಕೆಲವು ಕಿಡಿಗೇಡಿಗಳು ‘ಬುಕ್ ಮೈ ಶೋ’ ರೀತಿಯ ವೇದಿಕೆಗಳನ್ನು ಬಳಸಿಕೊಳ್ಳುತ್ತಾರೆ. ಅದರಿಂದಾಗಿ ಸಿನಿಮಾಗಳಿಗೆ ಹೊಡೆತ ಬೀಳುತ್ತದೆ. ಅದೇ ರೀತಿ, ಕೆಲವರು ಅತಿಯಾಗಿ ಸಿನಿಮಾವನ್ನು ಹೊಗಳುತ್ತಾರೆ. ಹಣ ಪಡೆದು ಉತ್ತಮ ರೇಟಿಂಗ್ ನೀಡಲಾಗುತ್ತದೆ. ಇದರಿಂದ ಪ್ರೇಕ್ಷಕರಿಗೆ ಮೋಸ ಆದಂತೆ ಆಗುತ್ತದೆ. ಇಂಥ ಸಮಸ್ಯೆಗಳನ್ನು ತಪ್ಪಿಸಲು ವಿಮರ್ಶೆ ಮತ್ತು ರೇಟಿಂಗ್ ನೀಡುವ ಆಯ್ಕೆಯನ್ನೇ ಚಿತ್ರತಂಡಗಳು ತೆಗೆದು ಹಾಕುತ್ತಿವೆ.
ಇದನ್ನೂ ಓದಿ: ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಅನಿಲ್ ರವಿಪುಡಿ ಅವರು ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಶೈನ್ ಸ್ಕ್ರೀನ್ಸ್’ ಮತ್ತು ‘ಗೋಲ್ಡ್ ಬಾಕ್ಸ್ ಎಂಟರ್ಟೇನ್ಮೆಂಟ್’ ಸಂಸ್ಥೆಗಳ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಚಿರಂಜೀವಿ ಜೊತೆಯಲ್ಲಿ ನಯನತಾರಾ, ದಗ್ಗುಬಾಟಿ ವೆಂಕಟೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ದಿ ರಾಜಾ ಸಾಬ್’ ಸಿನಿಮಾಗೆ ‘ಮನ ಶಂಕರ ವರ ಪ್ರಸಾದ್ ಗಾರು’ ಚಿತ್ರ ಪೈಪೋಟಿ ನೀಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.