
ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಅಖಂಡ 2’ ಸಿನಿಮಾ ನಾಳೆ (ಡಿಸೆಂಬರ್ 05) ಬಿಡುಗಡೆ ಆಗಲಿದೆ. ‘ಅಖಂಡ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾನಲ್ಲಿ ಬಾಲಕೃಷ್ಣ ಅಘೋರಿಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದ ಆಕ್ಷನ್, ಬಾಲಯ್ಯನ ಅಘೋರಿ ಪಾತ್ರವೆಲ್ಲ ಅಭಿಮಾನಿಗಳೆಲ್ಲ ಬಹಳ ಇಷ್ಟವಾಗಿತ್ತು. ಬೊಯಪಾಟಿ ಸೀನು ನಿರ್ದೇಶಿಸಿದ್ದ ಈ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಸಿನಿಮಾದ ಎರಡನೇ ಭಾಗ ನಾಳೆ ಬಿಡುಗಡೆ ಆಗಲಿದೆ. ಇದು ಬಹು ನಿರೀಕ್ಷಿತ ತೆಲುಗು ಸಿನಿಮಾಗಳಲ್ಲಿ ಒಂದಾಗಿದ್ದು, ಇದೇ ಕಾರಣಕ್ಕೆ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ.
‘ಅಖಂಡ 2’ ಸಿನಿಮಾದ ಟಿಕೆಟ್ ದರಗಳನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಸರ್ಕಾರದ ಅನುಮತಿ ಪಡೆದು ಹೆಚ್ಚಿಸಲಾಗಿದೆ. ಆಂಧ್ರದಲ್ಲಿ ಅರ್ಲಿ ಮಾರ್ನಿಂಗ್ ಶೋ, ಮಿಡ್ ನೈಟ್ ಶೋಗಳು ಸಹ ಇರಲಿವೆ. ಸಿನಿಮಾದ ಪ್ರೀಮಿಯರ್ ಶೋಗಳಿಗೆ 600 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಆದರೆ ಬಿಡುಗಡೆ ದಿನದ ಸಾಮಾನ್ಯ ಶೋಗಳಿಗೆ 375 ರಿಂದ 275 ರೂಪಾಯಿಗಳ ದರವನ್ನು ನಿಗದಿಪಡಿಸಲಾಗಿದೆ. ಸಿಂಗಲ್ ಸ್ಕ್ರೀನ್, ಟೈರ್ 2 ನಗರಗಳಲ್ಲಿ 200 ರಿಂದ 175 ರೂಪಾಯಿಗಳಿಗೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ಮೇಲಿನದ್ದು ಆಂಧ್ರ ಪ್ರದೇಶ ಲೆಕ್ಕಾಚಾರವಾಗಿದ್ದರೆ ತೆಲಂಗಾಣದಲ್ಲಿ ಡಿಸೆಂಬರ್ 04ರ ಮಧ್ಯಾಹ್ನದ ವರೆಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿಲ್ಲ. ಹೈದರಾಬಾದ್ ಅಂಥಹಾ ಮುಖ್ಯವಾದ ಸೆಂಟರ್ನಲ್ಲಿಯೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿಲ್ಲ ಇದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ತೆಲಂಗಾಣ ಸರ್ಕಾರವು ಪ್ರೀಮಿಯರ್ ಶೋ ಇನ್ನಿತರೆ ವಿಚಾರಗಳಿಗೆ ಖ್ಯಾತೆ ತೆಗೆದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಟಾಲಿವುಡ್ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ
ಇನ್ನು ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ, ಆಂಧ್ರಕ್ಕಿಂತಲೂ ಹೆಚ್ಚಿನ ದರದಲ್ಲಿ ‘ಅಖಂಡ 2’ ಸಿನಿಮಾ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದ್ದು, ಪ್ರೀಮಿಯರ್ ಶೋ ಟಿಕೆಟ್ ದರಗಳು ಗಗನ ಮುಟ್ಟಿವೆ. ಕೆಲ ಮಲ್ಟಿಪ್ಲೆಕ್ಸ್ಗಳಲ್ಲಿ 900-1000 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಒಂದು ಮಲ್ಟಿಪ್ಲೆಕ್ಸ್ನಲ್ಲಿ 1950 ರೂಪಾಯಿಗೆ ಟಿಕೆಟ್ ಮಾರಾಟ ಮಾಡುತ್ತಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ ಸಹ 400 ರಿಂದ 500 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ನಾಳಿನ ಅಂದರೆ ಡಿಸೆಂಬರ್ 05ರ ಶೋನ ಟಿಕೆಟ್ ಬೆಲೆಗಳು ಸಹ ಕಡಿಮೆ ಏನಿಲ್ಲ. ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ನಾಳಿನ ಶೋಗೂ ಸಹ 750 ರಿಂದ 500ರ ವರೆಗೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಶನಿವಾರ, ಭಾನುವಾರ ಈ ದರಗಳು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಊರ್ವಶಿ, ಸಿದ್ದಲಿಂಗೇಶ್ವರ ಅಂಥಹ ಚಿತ್ರಮಂದಿರಗಳಲ್ಲಿಯೂ ಸಹ 600, 500 ರೂಪಾಯಿ ಟಿಕೆಟ್ ದರ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ