
ಸಾಮಾಜಿಕ ಜಾಲತಾಣದ (Social Media) ಈ ಜಮಾನಾನಲ್ಲಿ ಯಾವಾಗ ಯಾವುದು ವೈರಲ್ ಆಗುತ್ತದೆ, ಯಾವ ರೀತಿಯ ಕಂಟೆಂಟ್ ಜನರಿಗೆ ಇಷ್ಟವಾಗುತ್ತದೆ ಎಂದು ಊಹಿಸುವುದೇ ಕಷ್ಟ. ಭಾರತದ ಕೋತಿಯೊಂದು ವಿಶ್ವಮಟ್ಟದಲ್ಲಿ ಟಾಪ್ ಕಂಟೆಂಟ್ ಆಗಿ ಮಿಂಚಿದೆ ಮಾತ್ರವಲ್ಲದೆ ಕೆಲವೇ ತಿಂಗಳುಗಳಲ್ಲಿ 38 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕೇವಲ ಯೂಟ್ಯೂಬ್ ಒಂದರಿಂದಲೇ ಗಳಿಸಿದೆ. ಆಶ್ಚರ್ಯ ಎನಿಸಿದರೂ ಸಹ ಇದು ನಿಜ. ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಎಐ ವಿಡಿಯೋಗಳಲ್ಲಿ ಭಾರತದ ಕೋತಿ ಸ್ಥಾನ ಗಳಿಸಿದೆ.
‘ಬಂದರ್ ಅಪ್ನ ದೋಸ್ತ್’ (ಕೋತಿ ನಮ್ಮ ಸ್ನೇಹಿತ) ಹೆಸರಿನ ಯೂಟ್ಯೂಬ್ ಚಾನೆಲ್ ಒಂದಿದೆ. ಈ ಚಾನೆಲ್ ಆರಂಭವಾಗಿ ವರ್ಷ ಸಹ ಇನ್ನೂ ಆಗಿಲ್ಲ. ಯೂಟ್ಯೂಬ್ನ ಎಲ್ಲ ವಿಡಿಯೋಗಳು ಎಐ ಬಳಸಿ ಮಾಡಿರುವಂಥಹವು. ಯೂಟ್ಯೂಬ್ನಲ್ಲಿ ವಿಡಿಯೋಗಳಲ್ಲಿ ಒಂದು ಕೋತಿ ಇದೆ, ಆಗಾಗ್ಗೆ ಹಲ್ಕ್ ರೀತಿಯ ವ್ಯಕ್ತಿಯೊಬ್ಬ ಬರುತ್ತಾನೆ. ಕೆಂಪು ಸೀರೆ ಉಟ್ಟ ಮಂತ್ರವಾದಿ ಹೆಂಗಸೊಬ್ಬಳು ಕೆಲ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾಳೆ ಅಷ್ಟೆ. ಈ ಖಾತೆಯಲ್ಲಿರುವ ವಿಡಿಯೋಗಳ ಸಂಖ್ಯೆ ಸಹ ಕಡಿಮೆಯೇ ಆದರೆ ಅಷ್ಟರಲ್ಲೇ ಈ ಖಾತೆಯ ಮಾಲೀಕ 38 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದ್ದಾನೆ.
ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಎಐ ವಿಡಿಯೋಗಳಲ್ಲಿ ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್ ಚಾನೆಲ್ಲು ಸಹ ಒಂದಾಗಿದೆ. ವಿಶೇಷವೆಂದರೆ ಈ ಯೂಟ್ಯೂಬ್ ಚಾನೆಲ್ಲಿನ ಕಂಟೆಂಟ್ ಸಹ ಅದ್ಭುತ ಗುಣಮಟ್ಟವನ್ನೇನೂ ಹೊಂದಿಲ್ಲ. ಬಹಳ ಸಾಧಾರಣ ಗುಣಮಟ್ಟದ ಕಂಟೆಂಟ್ ಅನ್ನು ಒಳಗೊಂಡಿದೆ ಆದರೂ ಸಹ ಇದು ವಿಶ್ವದಲ್ಲೇ ಹೆಚ್ಚು ನೋಡಲಾದ ಎಐ ವಿಡಿಯೋಗಳಲ್ಲಿ ಒಂದಾಗಿದೆ.
ಇದನ್ನೂ ಓದಿ:Year Ender 2024: ಈ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದ 10 ವಿಡಿಯೋಗಳು
‘ಬಂದರ್ ಅಪ್ನಾ ದೋಸ್ತ್’ ವಿಡಿಯೋನ ಯಶಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಎಐನ ಅಗತ್ಯತೆ ಬಗ್ಗೆ ಮನದಟ್ಟು ಮಾಡಲು ಕೆಲವರು ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್ ಚಾನೆಲ್ಲಿನ ಉದಾಹರಣೆ ಕೊಡುತ್ತಿದ್ದಾರೆ. ಇನ್ನು ಕೆಲವರು ‘ಭಾರತದ ಒಂದು ಕೋತಿ ಅರ್ಧ ಹಾಲಿವುಡ್ ಸಿನಿಮಾಗಳಿಗೂ ಹೆಚ್ಚು ಹಣ ಗಳಿಕೆ ಮಾಡಿದೆ’ ಎಂದಿದ್ದಾರೆ. ಇನ್ನು ಕೆಲವರು ಇದು ಸುಳ್ಳು ಇಷ್ಟು ಹಣ ಬರಲು ಸಾಧ್ಯವಿಲ್ಲ ಎಂದು ಸಹ ವಾದ ಮಾಡಿದ್ದಾರೆ.
ಜೀತ್ ಕರಮ್ಕಮ್ ಎಂಬಾತ ಈ ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್ ಚಾನೆಲ್ಲಿನ ಮಾಲೀಕನಾಗಿದ್ದಾನೆ. ಈ ಯೂಟ್ಯೂಬ್ ಚಾನೆಲ್ಲಿಗೆ ಈಗಾಗಲೇ 27 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಗಳಿದ್ದಾರೆ. ಚಾನೆಲ್ಲಿನಲ್ಲಿ ಕೇವಲ ಐದು ಲಾಂಗ್ ಫಾರ್ಮ್ಯಾಟ್ ವಿಡಿಯೋಗಳಷ್ಟೆ ಇವೆ. ಆದರೆ 600 ಕ್ಕೂ ಹೆಚ್ಚು ಶಾರ್ಟ್ ವಿಡಿಯೋಗಳಿವೆ. ಕೇವಲ ಶಾರ್ಟ್ ವಿಡಿಯೋಗಳಿಂದಲೇ ಕೋಟ್ಯಂತರ ಹಣ ಗಳಿಸಿದ್ದಾರೆ ‘ಬಂದರ್ ಅಪ್ನಾ ದೋಸ್ತ್’ ಮಾಲೀಕ ಜೀತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ