ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ (Andhra Pradesh Assembly Election) ಫಲಿತಾಂಶ ನಿನ್ನೆಯಷ್ಟೆ ಪ್ರಕಟವಾಗಿದೆ. ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಪಕ್ಷಗಳು ಭಾರಿ ದೊಡ್ಡ ಗೆಲುವನ್ನು ಸಾಧಿಸಿ, ಆಡಳಿತ ಪಕ್ಷ ವೈಸಿಪಿಯನ್ನು ಮೂಲೆಗುಂಪು ಮಾಡಿವೆ. ಆಂಧ್ರ ವಿಧಾನಸಭೆಯ 175 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಟಿಡಿಪಿ 135, ಜನಸೇನಾ 21 ಹಾಗೂ ಬಿಜೆಪಿ 8 ಸ್ಥಾನಗಳಲ್ಲಿ ಚುನಾವಣೆ ಗೆದ್ದಿದೆ. ಆಡಳಿತ ಪಕ್ಷ ವೈಸಿಪಿ 21 ಸೀಟುಗಳಲ್ಲಿ ಮಾತ್ರವೇ ಗೆಲುವು ಕಂಡಿದೆ. ವೈಸಿಪಿಯ ಹಲವು ಸಚಿವರುಗಳೇ ಸೋಲು ಕಂಡಿದ್ದಾರೆ. ನಟಿ ರೋಜಾ ಸಹ ಅದರಲ್ಲೊಬ್ಬರು.
ನಟಿ ರೋಜಾ, ಕೆಲಸಕ್ಕಿಂತಲೂ ತಮ್ಮ ಹರಿತ ಹೇಳಿಕೆಗಳಿಂದ ಬಹಳ ಸುದ್ದಿಯಾಗಿದ್ದರು. ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ವಿರುದ್ಧ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದರು, ಮೂದಲಿಕೆಗಳನ್ನು ಮಾಡುತ್ತಿದ್ದರು. ಇದೀಗ ರೋಜಾ ಹೀನಾಯವಾಗಿ ಸೋತಿದ್ದಾರೆ. ರೋಜಾ ಸೋತ ಬೆನ್ನಲ್ಲೆ ರೋಜಾ ಬಗ್ಗೆ ಬಗೆ ಬಗೆಯ ಟ್ರೋಲ್, ಮೀಮ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿವೆ. ನಿರ್ಮಾಪಕ ಬಂಡ್ಲ ಗಣೇಶ್ ಅಂತೂ ರೋಜಾ ಬಗ್ಗೆ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಪವನ್ ಕಲ್ಯಾಣ್ಗೆ ಆಪ್ತವಾಗಿರುವ ನಿರ್ಮಾಪಕ, ರಿಯಲ್ ಎಸ್ಟೇಟ್ ಉದ್ಯಮಿ ಬಂಡ್ಲ ಗಣೇಶ್, ರೋಜಾ ಸೋಲಿನ ಬಗ್ಗೆ ಟ್ವೀಟ್ ಮಾಡಿದ್ದು, ‘ಜಬರ್ದಸ್ತ್ ನಿನ್ನನ್ನು ಕರೆಯುತ್ತಿದೆ ಬಾ, ಬೇಗನೆ ಬಾ’ ಎಂದಿದ್ದಾರೆ. ರೋಜಾರ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ರೋಜಾ, ತೆಲುಗಿನ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ‘ಜಬರ್ದಸ್ತ್’ನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಾರೆ. ಸಚಿವೆ ಆಗಿದ್ದಾಗಲೂ ಸಹ ಅವರು ಆ ಕಾರ್ಯಕ್ರಮದ ಜಡ್ಜ್ ಆಗಿದ್ದರು. ಜಬರ್ದಸ್ತ್ ಭಾರಿ ಟಿಆರ್ಪಿ ಇರುವ ತೆಲುಗು ಟಿವಿ ಕಾರ್ಯಕ್ರಮ ಹಾಗಾಗಿ ಬಂಡ್ಲ ಗಣೇಶ್, ಇನ್ನು ರಾಜಕೀಯ ಭವಿಷ್ಯ ಮುಗಿಯಿತು ಜಬರ್ದಸ್ತ್ಗೆ ಬಾ ಎಂದು ಕರೆದಿದ್ದಾರೆ.
ಇದನ್ನೂ ಓದಿ:‘ಎನ್ಡಿಎ ಬಿಟ್ಟು ಹೋಗುವ ಮಾತೇ ಇಲ್ಲ’; ವದಂತಿಗಳಿಗೆ ತೆರೆ ಎಳೆದ ಪವನ್ ಕಲ್ಯಾಣ್
ಅಂದಹಾಗೆ ಜಬರ್ದಸ್ತ್ ಕಾರ್ಯಕ್ರಮದಲ್ಲಿ ರೋಜಾ ಜೊತೆಗೆ ಪವನ್ ಕಲ್ಯಾಣ್ ಸಹೋದರ ನಾಗಬಾಬು ಸಹ ಜಡ್ಜ್ ಆಗಿದ್ದಾರೆ. ಅಸಲಿಗೆ ನಾಗಬಾಬು ಹಾಗೂ ರೋಜಾ ಎದುರಾಳಿ ಪಕ್ಷದವರು. ರೋಜಾ ಅಂತೂ ನಾಗಬಾಬು ಸಹೋದರ ಪವನ್ ಕಲ್ಯಾಣ್ ಬಗ್ಗೆ ತುಚ್ಛವಾಗಿ ಹಲವು ಬಾರಿ ಮಾತನಾಡಿದ್ದಾರೆ. ನಾಗಬಾಬು ಸಹ ಮಾಧ್ಯಮಗಳ ಮುಂದೆ ರೋಜಾ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಈ ಇಬ್ಬರೂ ಒಟ್ಟಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ.
ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡಿರುವ ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಜೂನ್ 9 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಚಂದ್ರಬಾಬು ನಾಯ್ಡು ಹೆಗಲಿಗೆ ಹೆಗಲಾಗಿ ಪ್ರಚಾರ ಮಾಡಿದ ಪವನ್ ಕಲ್ಯಾಣ್ಗೆ ಬಲಿಷ್ಠ ಖಾತೆಯೊಂದನ್ನು ನೀಡುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ