ಬಹುತೇಕ ಮಂಜು ಪಾವಗಡ ಅವರೇ ಈ ಬಾರಿ ಬಿಗ್ ಬಾಸ್ ಗೆಲ್ಲಬಹುದು ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡುತ್ತಿದೆ. ಮನೆಯ ಎಲ್ಲ ಸದಸ್ಯರನ್ನೂ ನಗಿಸುತ್ತ, ಟಾಸ್ಕ್ಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತ ಅವರು ಹೆಚ್ಚು ಸ್ಕೋರ್ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರ ಪ್ರೇಮ್ ಕಹಾನಿ ಕೂಡ ಎತ್ತೆತ್ತಲೋ ಹೋಗುತ್ತಿದೆ. ಇಷ್ಟು ದಿನ ದಿವ್ಯಾ ಸುರೇಶ್ ಜೊತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ ಅವರು ಈಗ ದಿವ್ಯಾ ಉರುಡುಗ ಕಡೆಗೆ ಮನಸ್ಸು ಹರಿಸಿದ್ದಾರೆ!
ಸೋಮವಾರದ (ಮಾ.8) ಎಪಿಸೋಡ್ನಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಯಿತು. ಒಬ್ಬರು ಇನ್ನೊಬ್ಬರನ್ನು ಸ್ವಿಮಿಂಗ್ ಪೂಲ್ಗೆ ತಳ್ಳುವ ಈ ಗೇಮ್ನಲ್ಲಿ ಮಂಜು ಪಾವಗಡ ಅವರು ದಿವ್ಯಾ ಉರುಡುಗ ಅವರನ್ನು ಟಾರ್ಗೆಟ್ ಮಾಡಿದರು. ದಿವ್ಯಾ ಅವರನ್ನು ಪೂಲ್ಗೆ ತಳ್ಳುವಲ್ಲಿ ಮಂಜು ಯಶಸ್ವಿ ಕೂಡ ಆದರು. ಆ ಗ್ಯಾಪ್ನಲ್ಲೇ ಮಂಜುಗೆ ದಿವ್ಯಾ ‘ಐ ಲವ್ ಯೂ’ ಎಂದಿದ್ದಾರೆ! ಹಾಗಂತ ದಿವ್ಯಾಗೆ ಮಂಜು ಮೇಲೆ ಪ್ರೀತಿ ಚಿಗುರಿದೆಯೇ? ಅಸಲಿ ವಿಷಯ ಬೇರೆಯೇ ಇದೆ.
‘ನಿನಗೆ ಒಂದು ಸೀಕ್ರೆಟ್ ಹೇಳುತ್ತೇನೆ. ತಾಕತ್ತಿದ್ದರೆ ನೀನು ಅದನ್ನು ಬೇರೆಯವರಿಗೆ ಹೇಳು ನೋಡೋಣ’ ಎಂದು ದಿವ್ಯಾಗೆ ಮಂಜು ಸವಾಲು ಹಾಕಿದರು. ಪೂಲ್ಗೆ ಬೀಳುತ್ತಿದ್ದಂತೆಯೇ ದಿವ್ಯಾ ಕಿವಿಯಲ್ಲಿ ಮಂಜು ಏನೋ ಸೀಕ್ರೆಟ್ ಹೇಳಿಯೇ ಬಿಟ್ಟರು. ಅದೇನು ಸೀಕ್ರೆಟ್ ಹೇಳಿರಬಹುದು ಎಂದು ಮನೆಯ ಇತರೆ ಎಲ್ಲ ಸದಸ್ಯರು ಒಂದು ಕ್ಷಣ ತಲೆ ಕೆಡಿಸಿಕೊಂಡರು. ‘ಧೈರ್ಯ ಇದ್ದರೆ ಜೋರಾಗಿ ಹೇಳು ನೋಡೋಣ’ ಎಂದು ದಿವ್ಯಾಗೆ ಮಂಜು ಸವಾಲು ಹಾಕಿದರು. ಸೋಲು ಒಪ್ಪಿಕೊಳ್ಳಬಾರದು ಎಂಬ ಕಾರಣಕ್ಕೆ ದಿವ್ಯಾ ಅದೇನು ಎಂಬುದನ್ನು ಹೇಳಿಯೇ ಬಿಟ್ಟರು. ‘ಐ ಲವ್ ಯೂ’ ಎಂದು ಕೂಗಿ ಹೇಳಿದರು. ಅಂದರೆ, ದಿವ್ಯಾ ಕಿವಿಯಲ್ಲಿ ಮಂಜು ಹೇಳಿದ ಸೀಕ್ರೆಟ್ ಕೂಡ ‘ಐ ಲವ್ ಯೂ’ ಎಂಬುದು ಜಗಜ್ಜಾಹೀರಾಯಿತು.
ಮಂಜು ಮಾಡಿದ ಈ ಫ್ಲರ್ಟ್ ಕೆಲಸ ನೋಡಿ ದಿವ್ಯಾ ಸುರೇಶ್ ಮುಖ ತಿರುಗಿಸಿಕೊಂಡರು. ಇಷ್ಟು ದಿನ ದಿವ್ಯಾ ಸುರೇಶ್ ಕಡೆಗೆ ಆಸಕ್ತಿ ತೋರಿಸುತ್ತಿದ್ದ ಮಂಜು ಈಗ ನಿಧಾನವಾಗಿ ದಿವ್ಯಾ ಉರುಡುಗ ಕಡೆಗೆ ವಾಲುತ್ತಿರುವುದು ಈ ‘ಐ ಲವ್ ಯೂ’ ಪ್ರಸಂಗದಿಂದ ಗೊತ್ತಾಗಿದೆ. ಒಟ್ಟಿನಲ್ಲಿ ಅವರ ಪ್ರೇಮ್ ಕಹಾನಿ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಆಗುವ ಈ ಪ್ರೀತಿ-ಪ್ರೇಮವನ್ನು ಗಂಭೀರವಾಗಿ ಪರಿಗಣಿಸುವುದು ಅವರವರಿಗೆ ಬಿಟ್ಟ ವಿಚಾರ.
ಇದನ್ನೂ ಓದಿ: Bigg Boss Day 2: ಬಿಗ್ ಬಾಸ್ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ & ದಿವ್ಯಾ ಸುರೇಶ್!
Bigg Boss Kannada: ಬಿಗ್ ಬಾಸ್ ಮನೆಯಿಂದ ಹೊರ ಬಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮೊದಲ ಮಾತು.
Published On - 1:27 pm, Tue, 9 March 21