ಇತ್ತೀಚೆಗೆ ಚಿತ್ರೀಕರಣದ ವೇಳೆ ಅವಘಡಗಳು ಸಂಭವಿಸುತ್ತಿರುವುದು ಹೆಚ್ಚಾಗಿದೆ. ಸ್ಯಾಂಡಲ್ವುಡ್ನಲ್ಲಿ ಎರಡು ಪ್ರಕರಣಗಳು ಇತ್ತೀಚೆಗಷ್ಟೇ ವರದಿಯಾಗಿದ್ದವು. ‘ಲವ್ ಯೂ ರಚ್ಚು’ ಚಿತ್ರದ ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ಮೃತಪಟ್ಟಿದ್ದರು ಹಾಗೂ ಮತ್ತೋರ್ವರು ಗಾಯಗೊಂಡಿದ್ದರು. ಶ್ರೀ ಮುರುಳಿ ನಟನೆಯ ಮದಗಜ ಚಿತ್ರದ ಚಿತ್ರೀಕರಣದಲ್ಲೂ ಅವಘಡವೊಂದು ಜರುಗಿತ್ತು. ಇದೀಗ ಬಾಲಿವುಡ್ ಅಂಗಳದಲ್ಲಿ ನಾಯಕ ನಟನಿಗೆ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ವರ್ತಮಾನ ಬಂದಿದೆ.
ಬಾಲಿವುಡ್ನ ಖ್ಯಾತ ನಟ ಅಭಿಷೇಕ್ ಬಚ್ಚನ್ ಚಿತ್ರೀಕರಣದ ವೇಳೆ ಗಾಯಗೊಂಡು, ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಿದ್ದಾರೆ. ಬಾಲಿವುಡ್ ಬಿಗ್ಬಿ, ತಂದೆ ಅಮಿತಾಭ್ ಬಚ್ಚನ್ ಹಾಗೂ ಸಹೋದರಿ ಶ್ವೇತಾ ಬಚ್ಚನ್ ಆಸ್ಪತ್ರೆಗೆ ಭೇಟಿ ನೀಡಿ ಅಭಿಷೇಕ್ರನ್ನು ವಿಚಾರಿಸಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ಅಭಿಷೇಕ್ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಅವರಿಗೆ ಆಗಿರುವ ಗಾಯವು ಸಣ್ಣ ಪ್ರಮಾಣದ್ದು, ಚಿತ್ರೀಕರಣದ ಸೆಟ್ನಲ್ಲಿ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಅಭಿಷೇಕ್ ಈಗ ಹೇಗಿದ್ದಾರೆ?
ನಟ ಅಭಿಷೇಕ್ ಬಚ್ಚನ್ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಕುರಿತು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದ್ದು, ಆಸ್ಪತ್ರೆಯ ಹೇಳಿಕೆಯನ್ನು ಉಲ್ಲೇಖಿಸಿದೆ. ‘‘ಅಭಿಷೇಕ್ ಬಚ್ಚನ್ ಅವರಿಗೆ ಗಾಯವಾಗಿದ್ದು ಹೌದು. ಆದರೆ ಅದು ಸಣ್ಣ ಪ್ರಮಾಣದ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅಭಿಷೇಕ್ ಸುಧಾರಿಸಿಕೊಂಡ ಕಾರಣ, ಅವರನ್ನು ಡಿಸ್ಚಾರ್ಜ್ ಆಗಿದ್ದು, ಮನೆ ತಲುಪಿದ್ದಾರೆ ಎಂದು ಆಸ್ಪತ್ರೆಯ ಸಿಇಒ ಮಾಹಿತಿ ನೀಡಿದ್ದಾರೆ.
ಕಳೆದ ವಾರವಷ್ಟೇ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾಳೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ರೈ, ತಮ್ಮ ಮುಂದಿನ ಚಿತ್ರ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ನಿರ್ದೇಶನಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದರು. ಆ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ‘ಬಾಬ್ ಬಿಸ್ವಾಸ್’ ಹಾಗೂ ‘ದಸ್ವಿ’ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
Rachita Ram: ಫೈಟರ್ ವಿವೇಕ್ ಸಾವಿಗೆ ಸಂಬಂಧಪಟ್ಟಂತೆ ಇಂದು ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಲಿರುವ ರಚಿತಾ ರಾಮ್
(Abhishek Bachchan injured in a set and discharged from hospital)