Bell Bottom: ಬಾಕ್ಸಾಫೀಸ್ನಲ್ಲಿ ಅಕ್ಷಯ್ ನಟನೆಯ ‘ಬೆಲ್ಬಾಟಂ’ ಹೊಸ ದಾಖಲೆ; ಮೊದಲ ವೀಕೆಂಡ್ ನಂತರ ಚಿತ್ರ ಗಳಿಸಿದ್ದೆಷ್ಟು?
Akshay Kumar: ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಬೆಲ್ಬಾಟಂ’ ಚಿತ್ರದ ಮೊದಲ ವಾರದ ಕಲೆಕ್ಷನ್ನಲ್ಲಿ ದಾಖಲೆ ಬರೆದಿದ್ದು, ಚಿತ್ರದ ಬಾಕ್ಸಾಫೀಸ್ ವರದಿ ಇಲ್ಲಿದೆ.
ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾದ ಮೊದಲ ಬಾಲಿವುಡ್ ಚಿತ್ರ ‘ಬೆಲ್ಬಾಟಂ’ ನಿಧಾನವಾಗಿ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ ಅಂದಾಜಿಗಿಂತಲೂ ಕಡಿಮೆ ಗಳಿಸಿದ್ದ ಅಕ್ಕಿ ಚಿತ್ರ, ವೀಕೆಂಡ್ನಲ್ಲಿ ಸುಧಾರಿಸಿಕೊಂಡಿದೆ. ನಾಲ್ಕು ದಿನಗಳ ದೀರ್ಘ ರಜೆಯಿದ್ದ ಕಾರಣ ಕಲೆಕ್ಷನ್ನಲ್ಲಿ ಏರಿಕೆಯಾಗಿದ್ದು, ಭಾನುವಾರ ಒಂದೇ ದಿನ ₹ 4.30 ಕೋಟಿ ಬಾಚಿಕೊಂಡಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ಭಾನುವಾರ ಒಂದೇ ದಿನ ಚಿತ್ರದ ಗಳಿಕೆಯಲ್ಲಿ 35 ಪ್ರತಿಶತ ಏರಿಕೆಯಾಗಿದೆ. ಬೆಲ್ಬಾಟಂ ಚಿತ್ರವು ಬಿಡುಗಡೆಯಾದ ಮೊದಲೆರಡು ದಿನಗಳಲ್ಲಿ ತಲಾ ₹2.75 ಕೋಟಿ ರೂಗಳನ್ನು ಗಳಿಸಿತ್ತು.
ರಕ್ಷಾ ಬಂಧನದ ಕಾರಣವೂ ಚಿತ್ರದ ಗಳಿಕೆಗೆ ಸಹಾಯ ಮಾಡಿದೆ ಎಂದು ಅಂದಾಜಿಸಿರುವ ಬಾಕ್ಸಾಫೀಸ್ ಪಂಡಿತರು, ಈ ವರ್ಷ ಬಿಡುಗಡೆಯಾದ ಬಾಲಿವುಡ್ ಚಿತ್ರಗಳ ಮೊದಲ ವಾರದ ಗಳಿಕೆಯಲ್ಲಿ ಬೆಲ್ಬಾಟಂ ಮೊದಲ ಸ್ಥಾನ ಪಡೆದುಕೊಂಡಿದೆ ಎಂದಿದ್ದಾರೆ. ಮಾರ್ಚ್ನಲ್ಲಿ ಬಿಡುಗಡೆಯಾಗಿದ್ದ ರೂಹಿ ಚಿತ್ರವು, ಮೊದಲ ವಾರದಲ್ಲಿ ₹12.58 ಕೋಟಿ ಕಲೆಕ್ಷನ್ ಮಾಡಿದ್ದರೆ, ಬೆಲ್ಬಾಟಂ ಕಲೆಕ್ಷನ್ ₹12.65 ಕೋಟಿ ದಾಟಿದೆ. ಈ ಮೂಲಕ ಈ ವರ್ಷ ಬಾಲಿವುಡ್ನಲ್ಲಿ ಬಿಡುಗಡೆಯ ವಾರದಲ್ಲಿ ಅತೀ ಹೆಚ್ಚು ಹಣ ಬಾಚಿದ ಚಿತ್ರ ಎಂಬ ದಾಖಲೆಯನ್ನು ಬೆಲ್ಬಾಟಂ ಬರೆದಿದೆ. ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ವೀಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾದ ಕಾರಣ, ಬೆಲ್ಬಾಟಂ ವೀಕೆಂಡ್ನಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಮೊದಲೆರಡು ದಿನಗಳ ಕಲೆಕ್ಷನ್ ಮೀರಿಸಿದ್ದ ವೀಕೆಂಡ್ನಲ್ಲಿ ಶನಿವಾರ ₹3.25 ಕೋಟಿ ಹಾಗೂ ಭಾನುವಾರ ₹4.30 ಕೋಟಿ ವಹಿವಾಟು ನಡೆಸಿತ್ತು. ಇದು ಚಿತ್ರದ ಗಳಿಕೆಗೆ ಪ್ಲಸ್ ಪಾಯಿಂಟ್ ಆಗಿದೆ.
ಮುಂಬೈ ಹಾಗೂ ಪುಣೆಯಂತಹ ಪ್ರಮುಖ ನಗರಗಳಲ್ಲಿ ಚಿತ್ರಮಂದಿರಗಳು ಮುಚ್ಚಿರುವುದು ಚಿತ್ರದ ಗಳಿಕೆಗೆ ಬಹುದೊಡ್ಡ ಹಿನ್ನೆಡೆಯಾಗಿದೆ. ಅದಾಗ್ಯೂ ದೆಹಲಿ, ಉತ್ತರ ಪ್ರದೇಶ ಹಾಗೂ ಗುಜರಾತ್ನಿಂದ ಚಿತ್ರಕ್ಕೆ ಲಾಭವಾಗಬಹುದು ಎಂದು ನಿರೀಕ್ಷಿಸಲಾಗಿದ್ದರೂ ಕೂಡಾ, ಅದು ಅಷ್ಟಾಗಿ ಪರಿಣಾಮ ಬೀರಿಲ್ಲ. ಅದಾಗ್ಯೂ ಚಿತ್ರವು ಬಹುದೊಡ್ಡ ರಿಸ್ಕ್ ತೆಗೆದುಕೊಂಡು ಚಿತ್ರ ಬಿಡುಗಡೆ ಮಾಡಿದ್ದರ ಫಲವಾಗಿ, ಚಿತ್ರಕ್ಕೆ ನಿಧಾನವಾಗಿ ಯಶಸ್ಸು ಸಿಗುತ್ತಿದೆ.
ಬೆಲ್ಬಾಟಂ ಬಾಕ್ಸ್ಆಫೀಸ್ ಗಳಿಕೆಯ ಕುರಿತಂತೆ ಅಕ್ಷಯ್ ನಿಲುವೇನು? ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವ ಪ್ರಕಾರ, ಇತ್ತೀಚೆಗೆ ಮಾತನಾಡಿರುವ ಅಕ್ಷಯ್ ಬೆಲ್ಬಾಟಂ ಸಂಕಷ್ಟದ ನಡುವೆಯೂ ಎಂತಹ ದೊಡ್ಡ ರಿಸ್ಕ್ ತೆಗೆದುಕೊಂಡಿದೆ ಎಂಬುದನ್ನು ವಿವರಿಸಿದ್ದರು. ‘‘ಬಾಲಿವುಡ್ನ ಮಾರುಕಟ್ಟೆಯಲ್ಲಿ 30 ಪ್ರತಿಶತ ಕೊಡುಗೆಯನ್ನು ಮಹಾರಾಷ್ಟ್ರ ನೀಡುತ್ತದೆ. ಪ್ರಸ್ತುತ ಅದು ನಮಗೆ ಲಭ್ಯವಿಲ್ಲ. ಉಳಿದ 70 ಪ್ರತಿಶತ ಮಾರುಕಟ್ಟೆ ಇಡೀ ದೇಶದ್ದು. ಆದರೆ ಅದರಲ್ಲೂ ಚಿತ್ರಮಂದಿರ ಅರ್ಧ ಮಾತ್ರ ಭರ್ತಿಯಾಗಲು ಅವಕಾಶವಿದೆ. ಹಾಗಾಗಿ ಗಳಿಕೆಯ ಸಾಧ್ಯತೆ ಇರುವುದು 70ರ ಅರ್ಧದಷ್ಟು ಮಾತ್ರ. ಅದಾಗ್ಯೂ ಯಾರಾದರೊಬ್ಬರು ಮುಂದೆ ಬಂದು ಸವಾಲನ್ನು ತೆಗೆದುಕೊಳ್ಳಲೇ ಬೇಕು. ನಾವು ತೆಗೆದುಕೊಂಡಿದ್ದೇವೆ’’ ಎಂದಿದ್ದರು ಅಕ್ಷಯ್.
ಈಗಿನ ಸಂದರ್ಭದಲ್ಲಿ ಬಾಕ್ಸ್ಆಫೀಸ್ ಗಳಿಕೆಯನ್ನು ಹೇಗೆ ಸ್ವೀಕರಿಸಬೇಕು ಎಂದೂ ತಿಳಿಸಿದ್ದ ಅಕ್ಷಯ್, ಚಿತ್ರವು 30 ಕೋಟಿ ಗಳಿಕೆ ಮಾಡಿದರೆ ಅದು 100 ಕೋಟಿ ಗಳಿಕೆ ಮಾಡಿದ್ದಕ್ಕೆ ಸಮ. ಒಂದು ವೇಳೆ 50 ಕೋಟಿ ರೂ ಗಳಿಕೆ ಮಾಡಿದರೆ ಅದು 150 ಕೋಟಿ ರೂ ಗಳಿಕೆ ಮಾಡಿದಂತೆ ಎಂದಿದ್ಧರು. ಪ್ರಸ್ತುತ ಚಿತ್ರವು ಉತ್ತಮ ಗಳಿಕೆ ಮಾಡುವತ್ತ ಹೆಜ್ಜೆ ಇಟ್ಟಿದ್ದು, ಮುಂಬರುವ ದಿನಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಆಧರಿಸಿ ಚಿತ್ರದ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ:
ದುಡ್ಡಿಲ್ಲ ಎಂದು ಗಂಡನನ್ನೇ ಬಿಟ್ಟು ಹೋದ ಪತ್ನಿ? ಗೋಳು ತೋಡಿಕೊಳ್ಳುತ್ತಿರುವ ಕನ್ನಡದ ಹಾಸ್ಯ ಕಲಾವಿದ ರವಿ
ಕನ್ನಡದ ಡಾಲಿ, ತೆಲುಗಿನಲ್ಲಿ ಜಾಲಿ; ಧನಂಜಯ ಹುಟ್ಟುಹಬ್ಬಕ್ಕೆ ‘ಪುಷ್ಪ’ ಚಿತ್ರತಂಡದಿಂದ ಫಸ್ಟ್ಲುಕ್ ರಿಲೀಸ್
(Akshay Kumar starring Bell Bottom got good response in weekend and become 1st week highest grossed film in this year)