
ರವಿಚಂದ್ರನ್ (Ravichandran) ನಟಿಸಿರುವ ‘ಅಣ್ಣಯ್ಯ’ ಸಿನಿಮಾ ಯಾರಿಗೆ ನೆನಪಿಲ್ಲ. ಆ ಬ್ಲಾಕ್ ಬಸ್ಟರ್ ಸಿನಿಮಾನಲ್ಲಿ ನಾಯಕನಷ್ಟೆ ಪ್ರಮುಖವಾದ ಪಾತ್ರ ನಾಯಕನ ತಾಯಿಯದ್ದು. ಆ ಪಾತ್ರದಲ್ಲಿ ನಟಿಸಿದ್ದಿದ್ದು ಆಗಿನ ಸ್ಟಾರ್ ಬಾಲಿವುಡ್ ನಟಿ ಅರುಣಾ ಇರಾನಿ. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅರುಣಾ ಇರಾನಿ ಈ ವರೆಗೆ ಹಲವಾರು ಸಿನಿಮಾಗಳು ಮತ್ತು ಟಿವಿ ಶೋಗಳಲ್ಲಿ ನಟಿಸಿದ್ದಾರೆ. ಅರುಣಾ ಇರಾನಿ ಅವರ ಖಾಸಗಿ ಜೀವನ ಸಿನಿಮಾ ರೀತಿಯಲ್ಲಿಯೇ ಹಲವು ಏರಿಳಿತಗಳನ್ನು ಕಂಡಿದೆ. ಇದೀಗ ಅರುಣಾ ಇರಾನಿ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದು, ಬಾಲಿವುಡ್ನ ದಂತಕತೆಗಳಲ್ಲಿ ಒಬ್ಬರು ಎನ್ನಲಾಗುವ ಸ್ಟಾರ್ ನಟರೊಬ್ಬರು ತಮ್ಮ ಜೀವನ ರೂಪಿಸಿದ ಜೊತೆಗೆ ಜೀವನ ಹಾಳು ಮಾಡಿದರು ಎಂದಿದ್ದಾರೆ. ತಮ್ಮ ಜೀವನದ ಬಗ್ಗೆ ಹಲವು ವಿಷಯಗಳನ್ನು ಅರುಣಾ ಇರಾನಿ ಹಂಚಿಕೊಂಡಿದ್ದಾರೆ.
ಮೆಹಮೂದ್ ಅಲಿ, ಬಾಲಿವುಡ್ನ ಹೆಸರಾಂತ ಹಾಸ್ಯನಟ. ಅದರ ಜೊತೆಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮತ್ತು ಗಾಯನವನ್ನೂ ಮಾಡಿದ್ದಾರೆ. ಅರುಣಾ ಇರಾನಿ ಅವರು ಮೆಹಮೂದ್ ಅವರೊಟ್ಟಿಗೆ ಸಂಬಂಧ ಹೊಂದಿದ್ದರು. ಅರುಣಾ ಇರಾನಿ ಹೇಳಿಕೊಂಡಿರುವಂತೆ, ಅವರಿಗೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಮೆಹಮೂದ್ ಬಹಳ ಸಹಾಯ ಮಾಡಿದ್ದರು. ‘ನನಗೆ ಕೆಲಸವಿಲ್ಲದ ಸಮಯದಲ್ಲಿ ಮೆಹಮೂದ್ ಅವರು ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಿದರು. ‘ಔಲಾದ್’, ‘ಹಮ್ಜೋಲಿ’ ಮತ್ತು ‘ನಯಾ ಜಮಾನಾ’ ಚಿತ್ರಗಳ ಮೂಲಕ ನನಗೆ ದೊಡ್ಡ ಬ್ರೇಕ್ ಸಿಕ್ಕಿತು. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದರು ಮತ್ತು ನನಗೊಬ್ಬ ಮಾರ್ಗದರ್ಶಕನಂತಿದ್ದರು’ ಎಂದು ಅರುಣಾ ನೆನಪಿಸಿಕೊಂಡಿದ್ದಾರೆ.
ಆದರೆ, ಈ ಯಶಸ್ಸಿನ ನಡುವೆಯೇ ಇವರಿಬ್ಬರ ಸಂಬಂಧದ ಬಗ್ಗೆ ಹಬ್ಬಿದ ಒಂದು ವದಂತಿ ಅರುಣಾ ಅವರ ಕೆರಿಯರ್‌ಗೆ ಕೊಡಲಿ ಪೆಟ್ಟು ನೀಡಿತು. ‘ನಾನು ಮತ್ತು ಮೆಹಮೂದ್ ಮದುವೆಯಾಗಿದ್ದೇವೆ ಎಂಬ ಸುದ್ದಿಯು ಚಿತ್ರರಂಗದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಆಗ ನಾನು ಯಾವುದೇ ಪತ್ರಿಕಾಗೋಷ್ಠಿ ನಡೆಸಿ ಇದನ್ನು ನಿರಾಕರಿಸುವಷ್ಟು ಧೈರ್ಯವಂತೆಯಾಗಿರಲಿಲ್ಲ. ಅಚ್ಚರಿಯೆಂದರೆ, ಮೆಹಮೂದ್ ಕೂಡ ಈ ಸುದ್ದಿಯನ್ನು ಎಲ್ಲೂ ನಿರಾಕರಿಸಲಿಲ್ಲ. ಇದರಿಂದಾಗಿ ಇತರ ನಿರ್ಮಾಪಕರು ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಅಥವಾ ಮೆಹಮೂದ್ ಅಪ್ಪಣೆ ಇಲ್ಲದೆ ಕೆಲಸ ಮಾಡುವುದಿಲ್ಲ ಎಂದು ಭಾವಿಸಿದರು. ಹೀಗಾಗಿ ನನಗೆ ಬರುತ್ತಿದ್ದ ಹಲವು ಅವಕಾಶಗಳು ಕೈತಪ್ಪಿದವು’ ಎಂದು ಅವರು ನೋವಿನಿಂದ ಹೇಳಿದ್ದಾರೆ.
ಇದನ್ನೂ ಓದಿ:ಬಾಲಿವುಡ್ನ ಸ್ಟಾರ್ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಸಿನಿಮಾ?
ಒಂದು ಹಂತದಲ್ಲಿ ಅರುಣಾ ಇರಾನಿ ಅವರಿಗೆ ಕೆಲಸವೇ ಇಲ್ಲದಂತಾಯಿತು. ಮೆಹಮೂದ್ ಅವರೇ ನನ್ನನ್ನು ಕೆಲಸ ಕೊಡಿಸಿ ಬೆಳೆಸಿದರು ಮತ್ತು ಅವರಿಂದಲೇ ನಾನು ಕೆಲಸ ಕಳೆದುಕೊಳ್ಳುವಂತಾಯಿತು ಎಂಬುದು ಅರುಣಾ ಹೇಳಿದ್ದಾರೆ. ‘ಅವರು ನನ್ನನ್ನು ಬಹಿರಂಗವಾಗಿ ಶೋಷಿಸಿದರು, ಇದರಲ್ಲಿ ಅವರದ್ದು ಮಾತ್ರವೇ ತಪ್ಪು ಎಂದು ನಾನು ಹೇಳಲಾರೆ, ಆದರೆ ನನ್ನ ಹೆಸರನ್ನು ಬಳಸಿ ಅವರು ಪಡೆದ ಲಾಭ ಅಥವಾ ಹಬ್ಬಿದ ಸುಳ್ಳು ಸುದ್ದಿಯಿಂದ ನನ್ನ ಜೀವನದ ಹಲವು ವರ್ಷಗಳು ವ್ಯರ್ಥವಾದವು’ ಎಂದು ಅವರು ತಿಳಿಸಿದ್ದಾರೆ.
ನಾನು ಮೆಹಮೂದ್ ಅವರೊಟ್ಟಿಗೆ ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ್ದೆ. ಅವರೂ ಸಹ ನನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಮದುವೆ ಆಗಲಿಲ್ಲ. ಅದು ನಂತರದ ದಿನಗಳಲ್ಲಿ ಒಳ್ಳೆಯದೇ ಆಯ್ತು. ಅದಾಗಲೇ ಎರಡು ಮದುವೆ ಆಗಿದ್ದ ಮೆಹಮೂದ್ ಅವರು ಮೂರನೇ ಮದುವೆ ಆಗಲು ಹಿಂಜರಿಯುತ್ತಿರಲಿಲ್ಲ. ಆದರೆ ಅದು ನನ್ನನ್ನು ಇನ್ನಷ್ಟು ಸಮಸ್ಯೆಗೆ, ಇಕ್ಕಟ್ಟಿಗೆ ಸಿಲುಕಿಸಬಹುದಾಗಿತ್ತು. ಆ ದಿನಗಳಲ್ಲಿ ನಾನು ಮೆಹಮೂದ್ ಅವರನ್ನು ಸೆಳೆಯಲು, ಖುಷಿ ಪಡಿಸಲು ಏನು ಬೇಕಾದರೂ ಮಾಡಲು ನಾನು ತಯಾರಿದ್ದೆ. ಬಡತನದಿಂದ ಬಂದಿದ್ದ ನಾನು ಹಣ, ಜನಪ್ರಿಯತೆ ನೋಡಿದ್ದೇ ಆ ಸಂದರ್ಭದಲ್ಲಿ ಅದು ನನ್ನ ಸ್ಥಿಮಿತಕಳೆದುಕೊಳ್ಳುವಂತೆ ಮಾಡಿತ್ತು’ ಎಂದಿದ್ದಾ ನಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ