ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ 2022ರ ವರ್ಷದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ನಟಿಸಿದ ಬಹುತೇಕ ಸಿನಿಮಾಗಳು ಕೈ ಕೊಟ್ಟಿವೆ. ‘ಬಚ್ಚನ್ ಪಾಂಡೆ’, ‘ಸಾಮ್ರಾಟ್ ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ರಾಮ್ ಸೇತು’ ಸಿನಿಮಾಗಳು ಈ ವರ್ಷ ರಿಲೀಸ್ ಆಗಿವೆ. ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡುವಲ್ಲಿ ಈ ಚಿತ್ರಗಳು (Akshay Kumar Movies) ವಿಫಲವಾಗಿವೆ. ಅಕ್ಷಯ್ ಕುಮಾರ್ ಅವರು ಹೊಸದೇನಾದರೂ ಪ್ರಯತ್ನಿಸುವ ಅನಿವಾರ್ಯತೆ ಇದೆ. ಈಗ ಅವರು ಲೈಂಗಿಕ ಶಿಕ್ಷಣದ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಾಗಂತ ಇದು ಗಾಸಿಪ್ ಅಲ್ಲ. ಸ್ವತಃ ಅಕ್ಷಯ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ ಅವರ ಮುಂದಿನ ಸಿನಿಮಾ (Akshay Kumar New Movie) ಬಗ್ಗೆ ಸಖತ್ ನಿರೀಕ್ಷೆ ಮೂಡುವಂತಾಗಿದೆ.
‘ರೆಡ್ ಸೀ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಅಕ್ಷಯ್ ಕುಮಾರ್ ಭಾಗಿ ಆಗಿದ್ದಾರೆ. ಈ ವೇಳೆ ಅವರು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ. ‘ಲೈಂಗಿಕ ಶಿಕ್ಷಣದ ಕುರಿತು ನಾನು ಸಿನಿಮಾ ಮಾಡುತ್ತಿದ್ದೇನೆ. ಇದು ಮುಖ್ಯವಾದ ವಿಷಯ. ಆದರೆ ಹೆಚ್ಚಿನ ಕಡೆಗಳಲ್ಲಿ ಇದು ಇಲ್ಲ. ಶಾಲೆಯಲ್ಲಿ ನಾವು ಎಲ್ಲ ವಿಷಯ ಕಲಿಯುತ್ತೇವೆ. ಅದೇ ರೀತಿ ಲೈಂಗಿಕ ಶಿಕ್ಷಣ ಕೂಡ ಜಗತ್ತಿನ ಎಲ್ಲ ಶಾಲೆಯಲ್ಲಿ ಇರಬೇಕು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಈ ಸಿನಿಮಾ ಬಗ್ಗೆ ಅಕ್ಷಯ್ ಕುಮಾರ್ ಅವರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ರೀತಿಯ ಸಾಮಾಜಿಕ ಸಂದೇಶ ಸಾರುವ ಸಿನಿಮಾಗಳನ್ನು ಮಾಡುವುದು ಎಂದರೆ ಅವರಿಗೆ ಹೆಚ್ಚು ಆಸಕ್ತಿ. ಈ ಹಿಂದೆ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’, ‘ಪ್ಯಾಡ್ ಮ್ಯಾನ್’ ಸಿನಿಮಾಗಳಲ್ಲಿ ಅವರು ಸಾಮಾಜಿಕ ಸಂದೇಶ ನೀಡಿದ್ದರು. ಲೈಂಗಿಕ ಶಿಕ್ಷಣದ ಕುರಿತಾದ ಸಿನಿಮಾ 2023ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ರಿಲೀಸ್ ಆಗಲಿದೆ.
‘ಕಮರ್ಷಿಯಲ್ ದೃಷ್ಟಿಯಿಂದ ಈ ರೀತಿಯ ಸಿನಿಮಾಗಳು ದೊಡ್ಡದು ಎನಿಸುವುದಿಲ್ಲ. ಆದರೆ ನನಗೆ ತೃಪ್ತಿ ನೀಡುತ್ತವೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಈ ಹೊಸ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಹೇರಾ ಫೇರಿ 3’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಬೇಕಿತ್ತು. ಆದರೆ ಆ ಸಿನಿಮಾದಲ್ಲಿ ಅವರು ಬಣ್ಣ ಹಚ್ಚುತ್ತಿಲ್ಲ. ಸ್ಕ್ರಿಪ್ಟ್ ಇಷ್ಟ ಆಗಿಲ್ಲ ಎಂಬ ಕಾರಣಕ್ಕೆ ಅವರು ಸಿನಿಮಾ ಒಪ್ಪಿಕೊಂಡಿಲ್ಲ. ಬಳಿಕ ಆ ಅವಕಾಶ ಕಾರ್ತಿಕ್ ಆರ್ಯನ್ ಪಾಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.