ಒಂದೆಡೆ ನಟ ಶಾರುಖ್ ಖಾನ್ ಅವರು ಗೆದ್ದು ಬೀಗುತ್ತಿದ್ದಾರೆ. ಇನ್ನೊಂದೆಡೆ ಅಕ್ಷಯ್ ಕುಮಾರ್ (Akshay Kumar) ಅವರ ಸೋತು ಸುಣ್ಣವಾಗಿದ್ದಾರೆ. ಸತತ ಸೋಲಿನ ಸುಳಿಗೆ ಸಿಲುಕಿರುವ ಅವರಿಗೆ 2022ರ ವರ್ಷ ತುಂಬ ನಿರಾಶಾದಾಯಕವಾಗಿತ್ತು. 2023ರಲ್ಲಿ ಗೆಲುವಿಗಾಗಿ ಹಂಬಲಿಸಿದ್ದ ಅವರು ‘ಸೆಲ್ಫೀ’ ಸಿನಿಮಾ (Selfiee Movie) ಮೇಲೆ ಸಖತ್ ಭರವಸೆ ಇಟ್ಟುಕೊಂಡಿದ್ದರು. ಆದರೆ ಈ ಚಿತ್ರ ಹೀನಾಯವಾಗಿ ಸೋತಿದೆ. ಫೆಬ್ರವರಿ 24ರಂದು ‘ಸೆಲ್ಫೀ’ ತೆರೆಕಂಡಿತು. ಇಮ್ರಾನ್ ಹಷ್ಮಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇಬ್ಬರು ಸ್ಟಾರ್ ಕಲಾವಿದರು ಇದ್ದರೂ ಕೂಡ ಜನರಿಗೆ ಈ ಚಿತ್ರ ಹಿಡಿಸಿಲ್ಲ. ಸತತ 8 ದಿನ ಪ್ರದರ್ಶನ ಕಂಡ ‘ಸೆಲ್ಫೀ’ ಗಳಿಸಿದ್ದು (Selfiee Total Box Office Collection) ಕೇವಲ 14.25 ಕೋಟಿ ರೂಪಾಯಿ ಮಾತ್ರ.
ಒಂದು ಕಾಲದಲ್ಲಿ ಅಕ್ಷಯ್ ಕುಮಾರ್ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ಬ್ಯಾಕ್ ಟು ಬ್ಯಾಕ್ ಸೋಲು ಅವರ ಬೆನ್ನು ಹತ್ತಿದೆ. ‘ಸೆಲ್ಫೀ’ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 2.33 ಕೋಟಿ ರೂಪಾಯಿ ಮಾತ್ರ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟನ ಚಿತ್ರಕ್ಕೆ ಈ ಕಲೆಕ್ಷನ್ ಏನೇನೂ ಸಾಲದು. ಎರಡನೇ ದಿನ 3.80 ಕೋಟಿ ರೂಪಾಯಿ ಗಳಿಸುವ ಮೂಲಕ ಕೊಂಚ ಚೇತರಿಕೆ ಕಂಡಿತು. ಆದರೆ ಮೂರನೇ ದಿನ ಹೇಳಿಕೊಳ್ಳುವಂತಹ ಏರಿಕೆ ಆಗಲಿಲ್ಲ.
ಇದನ್ನೂ ಓದಿ: Akshay Kumar: ‘ಸೆಲ್ಫೀ’ ಹೀನಾಯ ಸೋಲು; ‘ಎಲ್ಲ ತಪ್ಪು ನನ್ನದೇ’ ಎಂದು ಹೊಣೆ ಹೊತ್ತುಕೊಂಡ ಅಕ್ಷಯ್ ಕುಮಾರ್
ಮೂರನೇ ದಿನ ‘ಸೆಲ್ಫೀ’ ಸಿನಿಮಾ 3.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಬಳಿಕ ದಿಢೀರ್ ಅಂತ ಕಲೆಕ್ಷನ್ ಕುಸಿಯಿತು. ನಾಲ್ಕನೇ ದಿನ 1.10 ಕೋಟಿ ರೂಪಾಯಿ ಮಾತ್ರ ಸಂಗ್ರಹ ಆಯಿತು. ಹಂಗೂ ಹಿಂಗೂ 8 ದಿನಗಳ ಕಾಲ ಪ್ರದರ್ಶನ ಕಂಡಿರುವ ಈ ಸಿನಿಮಾ ಕೇವಲ 14.25 ಕೋಟಿ ರೂಪಾಯಿ ಗಳಿಸುವಷ್ಟರಲ್ಲಿ ಸುಸ್ತಾಗಿದೆ. ಅಲ್ಲಿಗೆ, ಇದರ ಬಿಸ್ನೆಸ್ ಬಹುತೇಕ ಅಂತ್ಯವಾದಂತೆ ಆಗಿದೆ.
ಇದನ್ನೂ ಓದಿ: Akshay Kumar: ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೋಗಿ ಟ್ರೋಲ್ ಆದ ಅಕ್ಷಯ್ ಕುಮಾರ್; ಇಲ್ಲಿದೆ ಕಾರಣ
ಅಕ್ಷಯ್ ಕುಮಾರ್ ಅವರ ವೃತ್ತಿಜೀವನದ ಬಹು ದೊಡ್ಡ ಫ್ಲಾಪ್ ಎಂಬ ಕುಖ್ಯಾತಿಗೆ ‘ಸೆಲ್ಫೀ’ ಸಿನಿಮಾ ಒಳಗಾಗಿದೆ. ಇದರಿಂದ ಅವರ ಮಾರ್ಕೆಟ್ ಕುಸಿಯುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ತುಂಬ ಎಚ್ಚರಿಕೆ ವಹಿಸಬೇಕಾಗಿದೆ.
ತುಂಬ ವೇಗವಾಗಿ ಅಕ್ಷಯ್ ಕುಮಾರ್ ಅವರು ಸಿನಿಮಾದ ಕೆಲಸಗಳನ್ನು ಮುಗಿಸುತ್ತಾರೆ. ಇದರಿಂದ ಚಿತ್ರದ ಗುಣಮಟ್ಟ ಕುಸಿಯುತ್ತಿದೆ ಎಂಬುದು ಹಲವರ ಅಭಿಪ್ರಾಯ. ಅವರು ರಿಮೇಕ್ ಮಾಡಬಾರದು ಎಂದು ಕೂಡ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.