Ashish Vidyarthi: ಖುಷಿ ಇಲ್ಲದೇ ಸಾಯಬೇಕಾ? 57ನೇ ವಯಸ್ಸಿನಲ್ಲಿ ಮದುವೆ ಆಗಿದ್ದಕ್ಕೆ ಟ್ರೋಲ್​ ಮಾಡಿದವರಿಗೆ ಆಶಿಷ್​ ವಿದ್ಯಾರ್ಥಿ ಪ್ರಶ್ನೆ

​Ashish Vidyarthi Wife: ‘ಮುದುಕ ಎಂಬಿತ್ಯಾದಿ ಅವಹೇಳನಕಾರಿ ಕಮೆಂಟ್​ ನಾನು ಓದಿದ್ದೇನೆ. ಹಾಗಂತ ಖುಷಿ ಇಲ್ಲದೇ ಸಾಯಬೇಕಾ? ಸಂಗಾತಿ ಬೇಕು ಎನಿಸಿದರೆ ಯಾಕೆ ಪಡೆಯಬಾರದು’ ಎಂದು ಆಶಿಷ್​ ವಿದ್ಯಾರ್ಥಿ ಪ್ರಶ್ನಿಸಿದ್ದಾರೆ.

Ashish Vidyarthi: ಖುಷಿ ಇಲ್ಲದೇ ಸಾಯಬೇಕಾ? 57ನೇ ವಯಸ್ಸಿನಲ್ಲಿ ಮದುವೆ ಆಗಿದ್ದಕ್ಕೆ ಟ್ರೋಲ್​ ಮಾಡಿದವರಿಗೆ ಆಶಿಷ್​ ವಿದ್ಯಾರ್ಥಿ ಪ್ರಶ್ನೆ
ರೂಪಾಲಿ ಬರುವಾ, ಆಶಿಷ್​ ವಿದ್ಯಾರ್ಥಿ

Updated on: Jun 07, 2023 | 12:29 PM

ನಟ ಆಶಿಷ್​ ವಿದ್ಯಾರ್ಥಿ (​Ashish Vidyarthi) ಅವರು ಬಹುಭಾಷೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಸಿನಿಮಾಗಿಂತಲೂ ಖಾಸಗಿ ಜೀವನದ ಕಾರಣಕ್ಕೆ ಹೆಚ್ಚು ಸುದ್ದಿ ಆಗಿದ್ದಾರೆ. ಮೇ 25ರಂದು ಅವರು ಅಸ್ಸಾಂ ಮೂಲದ ರೂಪಾಲಿ ಬರುವಾ (Rupali Barua) ಜೊತೆ ಹೊಸ ಜೀವನ ಆರಂಭಿಸಿದರು. ಈಗ ಆಶಿಷ್​ ವಿದ್ಯಾರ್ಥಿ ಅವರಿಗೆ 57 ವರ್ಷ ವಯಸ್ಸು. ಈ ಪ್ರಾಯದಲ್ಲಿ ಅವರು ಎರಡನೇ ಮದುವೆ (Second marriage) ಆಗಿದ್ದಕ್ಕೆ ಹಲವರು ಟ್ರೋಲ್​ ಮಾಡಿದ್ದಾರೆ. ಹಾಗಂತ ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಂಡಿಲ್ಲ. ತಮ್ಮಿಷ್ಟದ ರೀತಿಯಲ್ಲಿ ಅವರು ಜೀವನ ಸಾಗಿಸುತ್ತಿದ್ದಾರೆ. ಈ ಕುರಿತಾಗಿ ಅವರು ‘ಇಂಡಿಯಾ ಟುಡೇ’ ಜೊತೆ ಮಾತನಾಡಿದ್ದು, ಟ್ರೋಲ್​ಗಳಿಗೆ ತಿರುಗೇಟು ನೀಡಿದ್ದಾರೆ. ‘ಮುದುಕ’ ಎಂದು ಅವರನ್ನು ನೆಟ್ಟಿಗರು ಹೀಯಾಳಿಸಿದ್ದಾರೆ. ಇದು ಅವರಿಗೆ ಬೇಸರ ಉಂಟು ಮಾಡಿದೆ.

‘ಮುದುಕ ಎಂಬಿತ್ಯಾದಿ ಅವಹೇಳನಕಾರಿ ಕಮೆಂಟ್​ ನಾನು ಓದಿದ್ದೇನೆ. ಎಲ್ಲರಿಗೂ ವಯಸ್ಸಾಗುತ್ತದೆ ಎಂಬ ಭಯವನ್ನು ಇಂಥ ಕಮೆಂಟ್​ ಮೂಲಕ ಹುಟ್ಟಿಸಲಾಗುತ್ತಿದೆ. ವಯಸ್ಸಾಯ್ತು ಎಂಬ ಕಾರಣಕ್ಕೆ ನಾವು ಏನನ್ನೂ ಮಾಡಬಾರದು ಅಂತ ಹೇಳಲಾಗುತ್ತಿದೆ. ಹಾಗಂತ ಖುಷಿ ಇಲ್ಲದೇ ಸಾಯಬೇಕಾ? ಸಂಗಾತಿ ಬೇಕು ಎನಿಸಿದರೆ ಯಾಕೆ ಪಡೆಯಬಾರದು’ ಎಂದು ಆಶಿಷ್​ ವಿದ್ಯಾರ್ಥಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಟಿ ಸೆಲಿನಾ ಜೇಟ್ಲಿಗೆ ಬಂತು ಎರಡನೇ ಮದುವೆ ಆಫರ್​

ಈ ಮೊದಲು ಕೂಡ ಆಶಿಷ್​ ವಿದ್ಯಾರ್ಥಿ ಅವರು ವಿಡಿಯೋ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ‘22 ವರ್ಷದ ಹಿಂದೆ ನಾನು ಹಾಗೂ ರಜೋಶಿಯನ್ನು ಭೇಟಿಯಾದೆ, ಇಬ್ಬರೂ ಗೆಳೆಯರಾದೆವು ಬಳಿಕ ಮದುವೆಯಾದೆವು. ನಮಗೆ ಒಬ್ಬ ಮಗನೂ ಜನಿಸಿದ. ಆತ ಚೆನ್ನಾಗಿದ್ದಾನೆ, ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರೂ ಇಷ್ಟು ವರ್ಷ ಬಹಳ ಚೆನ್ನಾಗಿ ಬದುಕಿದೆವು. ಆದರೆ ಕೆಲವು ವರ್ಷಗಳ ಹಿಂದೆ ನಾವಿಬ್ಬರೂ ಭವಿಷ್ಯವನ್ನು ಹೇಗೆ ನೋಡಬಯುಸುತ್ತೇವೆಯೋ ಆ ದೃಷ್ಟಿಕೋನ ಭಿನ್ನವಾಗಿತ್ತು. ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಲು ಇಬ್ಬರೂ ಪ್ರಯತ್ನ ಪಟ್ಟೆವು, ನಾವಿಬ್ಬರೂ ಒಟ್ಟಿಗೆ ಇರಬಹುದಿತ್ತು, ಆದರೆ ಅದರಿಂದ ಯಾರಾದರೂ ಒಬ್ಬರು ತಮ್ಮ ಸಂತೋಷವನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಅದು ನಮ್ಮಿಬ್ಬರಿಗೂ ಇಷ್ಟವಿರಲಿಲ್ಲ. ಹಾಗಾಗಿ ನಾವು ದೂರಾಗಿ ಇಬ್ಬರೂ ಪ್ರತ್ಯೇಕ ದಾರಿ ಹಿಡಿದು ಸಂತೋಶವಾಗಿರಲು ನಿರ್ಧರಿಸಿದೆವು. ಇಬ್ಬರೂ ಪರಸ್ಪರ ಚರ್ಚಿಸಿದೆವು, ಮಗನೊಟ್ಟಿಗೆ ಚರ್ಚೆ ಮಾಡಿದೆವು, ನಮ್ಮ ಆತ್ಮೀಯ ಗೆಳೆಯರು, ಸಂಬಂಧಿಗಳೊಟ್ಟಿಗೆ ಚರ್ಚಿಸಿ ಘನತೆಯಿಂದ, ಪರಸ್ಪರರ ಮೇಲಿನ ಗೌರವ ಉಳಿಸಿಕೊಂಡು ದೂರಾದೆವು” ಎಂದಿದ್ದರು ಆಶಿಷ್ ವಿದ್ಯಾರ್ಥಿ.

ಇದನ್ನೂ ಓದಿ: ಎರಡನೇ ಮದುವೆ ನಂತರ ಆಕೆಯ ಭೀಕರ ಅಂತ್ಯ; ಇತ್ತ ಪತಿ ಜೈಲಿನಲ್ಲಿ ಮಾಡಿದ್ದೇನು?

ಆಶಿಷ್ ವಿದ್ಯಾರ್ಥಿ ಭಾರತದ ಜನಪ್ರಿಯ ಪೋಷಕ ನಟ ಹಾಗೂ ವಿಲನ್​ಗಳಲ್ಲಿ ಒಬ್ಬರು. ಕನ್ನಡ ಸೇರಿದಂತೆ 11 ಭಾಷೆಗಳ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿರುವ ಆಶಿಷ್ ವಿದ್ಯಾರ್ಥಿ ಕೊವಿಡ್ ಲಾಕ್​ಡೌನ್​ ಬಳಿಕ ವ್ಲಾಗಿಂಗ್ ಆರಂಭ ಮಾಡಿದ್ದಾರೆ. ಹಲವು ನಗರಗಳಿಗೆ ತೆರಳಿ ಅಲ್ಲಿನ ಜನಪ್ರಿಯ ಖಾದ್ಯಗಳನ್ನು ಸವಿಯುತ್ತಾ ಫುಡ್ ವ್ಲಾಗಿಂಗ್ ಮಾಡುತ್ತಿದ್ದಾರೆ. ಆಶಿಷ್ ವಿದ್ಯಾರ್ಥಿಯವರ ವ್ಲಾಗಿಂಗ್ ಬಹಳ ಜನಪ್ರಿಯವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us