
ಶಾರುಖ್ ಖಾನ್ (Shah Rukh Khan) ಅಭಿನಯದ ‘ಪಠಾಣ್’ ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದ್ದಂತೆಯೇ ವಿರೋಧದ ಕಾವು ಕೂಡ ಹೆಚ್ಚಾಗುತ್ತಿದೆ. ಹಿಂದೂ ಪರ ಸಂಘಟನೆಗಳು ಈ ಸಿನಿಮಾದ ವಿರುದ್ಧ ತಿರುಗಿಬಿದ್ದಿವೆ. ಈ ಚಿತ್ರದ ‘ಬೇಷರಂ ರಂಗ್..’ ಹಾಡು ರಿಲೀಸ್ ಆದಾಗಿನಿಂದ ಕಾಂಟ್ರವರ್ಸಿ ಜೋರಾಗಿದೆ. ಈಗ ಭಜರಂಗ ದಳ (Bajrang Dal) ಕಾರ್ಯಕರ್ತರು ‘ಪಠಾಣ್’ ಪ್ರಚಾರಕ್ಕೆ ಅಡ್ಡಿ ಪಡಿಸಿದ ಘಟನೆ ಗುಜರಾತ್ನಲ್ಲಿ ನಡೆದಿದೆ. ಚಿತ್ರಮಂದಿರವೊಂದರಲ್ಲಿ ‘ಪಠಾಣ್’ (Pathaan Movie) ಚಿತ್ರದ ಪೋಸ್ಟರ್ ಮತ್ತು ಸ್ಟ್ಯಾಂಡಿಗಳನ್ನು ಹಾಕಲಾಗಿತ್ತು. ಅದನ್ನು ಕಿತ್ತು ಹಾಕುವ ಮೂಲಕ ಭಜರಂಗ ದಳದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಪಠಾಣ್’ ಸಿನಿಮಾ ಜನವರಿ 25ರಂದು ಬಿಡುಗಡೆ ಆಗಲಿದೆ. ಆದರೆ ಈ ಚಿತ್ರವನ್ನು ರಿಲೀಸ್ ಮಾಡಬಾರದು ಎಂದು ಭಜರಂಗ ದಳದ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ‘ಸನಾತನ ಧರ್ಮ ವಿರೋಧಿ ಶಾರುಖ್ ಖಾನ್ ಹಾಗೂ ಟುಕ್ಡೆ ಟುಕ್ಡೆ ಗ್ಯಾಂಗ್ನ ದೀಪಿಕಾ ಪಡುಕೋಣೆ ನಟಿಸಿದ ಸಿನಿಮಾವನ್ನು ಪ್ರದರ್ಶನ ಮಾಡಲು ಬಿಡುವುದಿಲ್ಲ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: Shah Rukh Khan: ಎಷ್ಟೇ ವಿರೋಧ ಬಂದ್ರೂ ಜಗ್ಗದ ಶಾರುಖ್ ಖಾನ್; ‘ಪಠಾಣ್’ ಟೈಟಲ್ ಬದಲಾಗಬೇಕು ಎಂದವರಿಗೆ ಇಲ್ಲಿದೆ ಉತ್ತರ
‘ಮಲ್ಟಿಪ್ಲೆಕ್ಸ್ನವರಿಗೆ ವಾರ್ನಿಂಗ್ ನೀಡಿದ್ದೇವೆ. ಒಂದು ವೇಳೆ ಸಿನಿಮಾ ರಿಲೀಸ್ ಮಾಡಿದರೆ ಭಜರಂಗ ದಳವು ತನ್ನ ವರಸೆ ತೋರಿಸಬೇಕಾಗುತ್ತದೆ’ ಎಂದು ಬೆದರಿಕೆಯೊಂದಿಗೆ ಈ ವಿಡಿಯೋವನ್ನ ಭಜರಂಗ ದಳದ ಕಾರ್ಯಕರ್ತರು ಹಂಚಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Vivek Agnihotri: ‘ಪಠಾಣ್ ಚಿತ್ರದ ವಿವಾದದಿಂದ ವಿವೇಕ್ ಅಗ್ನಿಹೋತ್ರಿ ಪ್ರಚಾರ ಪಡೆಯುತ್ತಿದ್ದಾರೆ’: ಕೆಆರ್ಕೆ ಆರೋಪ
ಮಲ್ಟಿಪ್ಲೆಕ್ಸ್ನಲ್ಲಿ ಹಾಕಲಾಗಿದ್ದ ‘ಪಠಾಣ್’ ಚಿತ್ರದ ಪೋಸ್ಟರ್ಗಳನ್ನು ಕಿತ್ತು ಎಸೆಯಲಾಗಿದೆ. ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತ ಗಲಾಟೆ ಮಾಡಲಾಗಿದೆ. ದಾಂಧಲೆ ತಡೆಯಲು ಅಲ್ಲಿನ ಸಿಬ್ಬಂದಿ ಪ್ರಯತ್ನ ನಡೆಸಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ವಿರೋಧ ಇದೇ ರೀತಿ ಮುಂದುವರಿದರೆ ಚಿತ್ರದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ, ಈ ರೀತಿ ದಾಂಧಲೆ ನಡೆಸಿದ್ದರ ಬಗ್ಗೆ ಟೀಕೆ ಕೂಡ ವ್ಯಕ್ತವಾಗುತ್ತಿದೆ.
‘ಪಠಾಣ್’ ಸಿನಿಮಾದ ಟೈಟಲ್ ಬದಲಾಗಬೇಕು ಎಂದು ಒಂದು ವರ್ಗದ ಜನರು ಒತ್ತಡ ಹೇರಿದ್ದರು. ಆದರೆ ಶೀರ್ಷಿಕೆ ಬದಲಾಯಿಸಲು ಚಿತ್ರತಂಡ ಸಿದ್ಧವಿಲ್ಲ. ಚಿತ್ರದ ಟೈಟಲ್ ‘ಪಠಾಣ್’ ಎಂದೇ ಇರಲಿದೆ ಎಂಬುದು ಖಚಿತವಾಗಿದೆ. ಆದಷ್ಟು ಬೇಗ ಟ್ರೇಲರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಶಾರುಖ್ ಖಾನ್ ಅವರ ಅಭಿಮಾನಿಗಳು ಈ ಸಿನಿಮಾಗಾಗಿ ಕಾದಿದ್ದಾರೆ.
ಜಾನ್ ಅಬ್ರಾಹಂ ಕೂಡ ‘ಪಠಾಣ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಿಂದಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಲ್ಲೂ ‘ಪಠಾಣ್’ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.