
ಇತ್ತೀಚೆಗೆ ಬಾಲಿವುಡ್ನಲ್ಲಿ ತಯಾರಾದ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿಲ್ಲ ಎಂಬ ಬೇಸರ ಅಲ್ಲಿಯವರಿಗೆ ಕಾಡುತ್ತಲೇ ಇತ್ತು. ಎಷ್ಟೇ ಪ್ರಚಾರ ಮಾಡಿದರೂ ಜನರು ಮಾತ್ರ ಚಿತ್ರಮಂದಿರದತ್ತ ಹೆಜ್ಜೆ ಹಾಕಿಲ್ಲ. ಒಳ್ಳೆಯ ಸಿನಿಮಾಗಳು ಬರದೇ ಇರುವುದೇ ಇದಕ್ಕೆ ಕಾರಣವಾಗಿತ್ತು. ಕೊನೆಗೂ ಬಾಲಿವುಡ್ಗೆ ಚೇತರಿಕೆ ಕೊಡುವ ಸಿನಿಮಾ ಎಂಟ್ರಿ ಕೊಟ್ಟಿದೆ. ಕಾರ್ತಿಕ್ ಆರ್ಯನ್ (Kartik Aaryan) ಹಾಗೂ ಕಿಯಾರಾ ಅಡ್ವಾಣಿ ನಟನೆಯ ‘ಭೂಲ್ ಭುಲಯ್ಯ 2’ (Bhool Bhulaiyaa 2) ಸಿನಿಮಾ ಕಮಾಲ್ ಮಾಡಿದೆ. ಮೊದಲ ದಿನ ಈ ಚಿತ್ರ 14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ.
2007ರಲ್ಲಿ ‘ಭೂಲ್ ಭುಲಯ್ಯ’ ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಯಿತು. ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಈ ಚಿತ್ರವನ್ನು ಟೀ-ಸೀರಿಸ್ ನಿರ್ಮಾಣ ಮಾಡಿತ್ತು. ಈಗ ‘ಭೂಲ್ ಭುಲಯ್ಯ 2’ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬಂದಿದೆ ಟೀ-ಸೀರಿಸ್. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬ್ರೇಕಪ್ ಗಾಸಿಪ್ಗೆ ಕಿವಿಗೊಡದೇ ‘ಭೂಲ್ ಭುಲಯ್ಯ 2’ ಪ್ರಮೋಷನ್ನಲ್ಲಿ ಬ್ಯುಸಿ ಆದ ಕಿಯಾರಾ ಅಡ್ವಾಣಿ
ಮೇ 20ರಂದು ‘ಭೂಲ್ ಭುಲಯ್ಯ 2’ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನವೇ ವಿಮರ್ಶಕರು ಹಾಗೂ ಸಿನಿಪ್ರಿಯರಿಂದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಕಾಮಿಡಿ ಹಾಗೂ ಹಾರರ್ ಮಿಶ್ರಣ ಸಿನಿಮಾದ ಹೈಲೈಟ್. ಈ ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡರು. ಹೀಗಾಗಿ, ಈ ಸಿನಿಮಾ ಮೊದಲ ದಿನ 14.11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಬಾಲಿವುಡ್ ಚಿತ್ರ ಈ ವರ್ಷ ಮೊದಲ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಇದೇ ಮೊದಲು ಅನ್ನೋದು ವಿಶೇಷ. ಈ ಮೊದಲು ರಿಲೀಸ್ ಆದ ‘ಬಚ್ಚನ್ ಪಾಂಡೆ’ (13.25 ಕೋಟಿ ರೂಪಾಯಿ) ಹಾಗೂ ‘ಗಂಗೂಬಾಯಿ ಕಾಠಿಯಾವಾಡಿ’ (10.25) ಚಿತ್ರವನ್ನು ‘ಭೂಲ್ ಭುಲಯ್ಯ 2’ ಹಿಂದಿಕ್ಕಿದೆ.
ವೀಕೆಂಡ್ ಆಗಿರುವುದರಿಂದ ಇಂದು (ಮೇ 21) ಹಾಗೂ ನಾಳೆ (ಮೇ 22) ‘ಭೂಲ್ ಭುಲಯ್ಯ 2’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರ 100 ಕೋಟಿ ಕ್ಲಬ್ ಅನಾಯಾಸವಾಗಿ ಸೇರಲಿದೆ ಎಂಬುದು ತಜ್ಞರ ಲೆಕ್ಕಾಚಾರ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.