
ಬಿಗ್ ಬಾಸ್ ಕನ್ನಡ ಮನೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ನೀಡುವ ‘ಕಿಚ್ಚನ ಚಪ್ಪಾಳೆ’ಗೆ ಬೆಲೆ ಮತ್ತು ಗೌರವವಿದೆ. ಸ್ಪರ್ಧಿಗಳು ವಾರವಿಡೀ ತೋರುವ ಅತ್ಯುತ್ತಮ ಆಟ, ಶ್ರಮ ಮತ್ತು ಪ್ರಾಮಾಣಿಕತೆಗೆ ಮನ್ನಣೆ ನೀಡುವ ಸಲುವಾಗಿ ಸುದೀಪ್ ಈ ಗೌರವವನ್ನು ನೀಡುತ್ತಾರೆ. ಅರ್ಹತೆ ಇಲ್ಲದ ಯಾವುದೇ ಪ್ರದರ್ಶನಕ್ಕೆ ಅವರು ಎಂದಿಗೂ ಚಪ್ಪಾಳೆ ತಟ್ಟುವುದಿಲ್ಲ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ಪ್ರತಿಯೊಬ್ಬ ಸ್ಪರ್ಧಿಗೂ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಒಂದು ಹೆಮ್ಮೆಯ ವಿಷಯವಾಗಿರುತ್ತದೆ. ಆದರೆ, ಈ ಚಪ್ಪಾಳೆಗೆ ಗಾನವಿ ಅವಮಾನ ಮಾಡಿದ್ದಾರೆ.
ಈ ಮೊದಲು ನಡೆದಿದ್ದ ಅತ್ಯಂತ ಸವಾಲಿನ ಡೈಮಂಡ್ ಕದಿಯುವ ಟಾಸ್ಕ್‌ನಲ್ಲಿ ಸ್ಪರ್ಧಿ ತಾಂಡವ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ತಮ್ಮ ಜಾಣ್ಮೆ, ತಂತ್ರ ಹಾಗೂ ಶ್ರಮದ ಮೂಲಕ ಆಟವನ್ನು ಕಂಟ್ರೋಲ್ ಮಾಡಿ ವೀಕ್ಷಕರ ಮನ ಗೆದ್ದಿದ್ದರು. ಈ ಕಾರಣಕ್ಕಾಗಿಯೇ ಕಿಚ್ಚ ಸುದೀಪ್ ಅವರು ವಾರಾಂತ್ಯದ ಪಂಚಾಯ್ತಿಯಲ್ಲಿ ತಾಂಡವ್ ಅವರ ಆಟವನ್ನು ಬಹುವಾಗಿ ಮೆಚ್ಚಿಕೊಂಡು, ಕಿಚ್ಚನ ಚಪ್ಪಾಳೆ ನೀಡಿ ಗೌರವಿಸಿದ್ದರು. ಈ ಗೌರವ ತಾಂಡವ್ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚು ಮಾಡಿತ್ತು.
ಆದರೆ, ನವೆಂಬರ್ 10ರ ಎಪಿಸೋಡ್‌ನಲ್ಲಿ ನಾಮಿನೇಷನ್ ವಿಚಾರವಾಗಿ ಗಾನವಿ ಮತ್ತು ತಾಂಡವ್ ನಡುವೆ ದೊಡ್ಡ ಮಟ್ಟದ ಕಿರಿಕ್ ಉಂಟಾಗಿದೆ. ಇಬ್ಬರೂ ಪರಸ್ಪರ ವಾಗ್ದಾಳಿ ನಡೆಸಿಕೊಳ್ಳುವಾಗ ತಾಂಡವ್ ತಮಗೆ ಸಿಕ್ಕ ಕಿಚ್ಚನ ಚಪ್ಪಾಳೆಯನ್ನು ಉದಾಹರಣೆಯಾಗಿ ನೀಡಿ ತಮ್ಮ ಆಟವನ್ನು ಸಮರ್ಥಿಸಿಕೊಂಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಗಾನವಿ, ‘ಅದು ನಿನ್ನ ಆಟಕ್ಕೆ ಸಿಕ್ಕಿದ್ದಲ್ಲ, ಫ್ಲ್ಯೂಕ್‌ನಲ್ಲಿ ಸಿಕ್ಕ ಚಪ್ಪಾಳೆ’ ಎಂದು ಲಘುವಾಗಿ ಹೇಳಿಕೆ ನೀಡುವ ಮೂಲಕ ತಾಂಡವ್ ಅವರಿಗೆ ಸಿಕ್ಕ ಗೌರವವನ್ನು ತಳ್ಳಿಹಾಕಿದ್ದಾರೆ.
ಗಾನವಿ ನೀಡಿರುವ ಈ ಹೇಳಿಕೆ ಈಗ ಬಿಗ್ ಬಾಸ್ ವೀಕ್ಷಕರು ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸುದೀಪ್ ಅವರು ಯಾರಿಗೆಂದರಲ್ಲಿ ಎಂದಿಗೂ ಫ್ಲ್ಯೂಕ್‌ನಲ್ಲಿ ಚಪ್ಪಾಳೆ ಕೊಡುವುದಿಲ್ಲ, ಪ್ರತಿಯೊಂದು ಮೆಚ್ಚುಗೆಯ ಹಿಂದೆಯೂ ನ್ಯಾಯಸಮ್ಮತವಾದ ಕಾರಣವಿರುತ್ತದೆ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ. ಗಾನವಿ ಅವರ ಈ ಮಾತು ನೇರವಾಗಿ ನಿರೂಪಕ ಸುದೀಪ್ ಅವರ ನಿರ್ಧಾರವನ್ನೇ ಪ್ರಶ್ನಿಸಿದಂತಿದ್ದು, ಇದು ಅವರಿಗೆ ಮಾಡಿದ ಸ್ಪಷ್ಟ ಅವಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.
ಇದನ್ನೂ ಓದಿ: ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ ಸುದೀಪ್; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಈ ಮೊದಲು ಕೂಡ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರು ಮಾತನಾಡುತ್ತಿದ್ದಾಗ ಗಾನವಿ ಮಧ್ಯದಲ್ಲಿ ಮಾತನಾಡಿ ಅವರಿಗೆ ಗೌರವ ನೀಡದೆ ನಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಸುದೀಪ್ ಅವರಿಂದ ಗಾನವಿ ವೇದಿಕೆಯಲ್ಲೇ ಕಠಿಣವಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಕಿಚ್ಚನ ಚಪ್ಪಾಳೆಯನ್ನೇ ‘ಫ್ಲ್ಯೂಕ್’ ಎಂದು ಕರೆದು ಸುದೀಪ್ ಅವರ ತೀರ್ಪನ್ನೇ ಹಗುರವಾಗಿ ಕಂಡಿರುವ ಗಾನವಿಗೆ ಮುಂಬರುವ ವಾರಾಂತ್ಯದ ಪಂಚಾಯಿತಿಯಲ್ಲಿ ಮತ್ತೊಮ್ಮೆ ಬಿಸಿ ಮುಟ್ಟುವುದು ಖಚಿತ ಎಂದು ವೀಕ್ಷಕರು ಚರ್ಚಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.