65 ಕೋಟಿ ಹಗರಣ: ಕನ್ನಡದಲ್ಲೂ ನಟಿಸಿದ್ದ ಬಾಲಿವುಡ್ ನಟ ಬಂಧನ

ಕನ್ನಡದಲ್ಲಿ ನಟಿ ರಮ್ಯಾ ಎದುರು ‘ಜೂಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದ ಖ್ಯಾತ ಬಾಲಿವುಡ್ ನಟ ಡಿನೊ ಮೊರಿಯಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 65 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ನಟನ ಮನೆ ಮೇಲೆ ದಾಳಿ ನಡೆಸಿ ಸತತ ವಿಚಾರಣೆ ಮಾಡಿದ್ದು, ಎಂಟು ಗಂಟೆಗಳ ಸತತ ತನಿಖೆ, ವಿಚಾರಣೆಯ ಬಳಿಕ ನಟನನ್ನು ಬಂಧಿಸಿದ್ದಾರೆ.

65 ಕೋಟಿ ಹಗರಣ: ಕನ್ನಡದಲ್ಲೂ ನಟಿಸಿದ್ದ ಬಾಲಿವುಡ್ ನಟ ಬಂಧನ
Dino Morea

Updated on: Oct 02, 2026 | 6:50 PM

ಮುಖ್ಯಾಂಶಗಳು

  • ಕನ್ನಡದಲ್ಲೂ ನಟಿಸಿರುವ ಬಾಲಿವುಡ್ ನಟನ ಬಂಧನ
  • ರಮ್ಯಾ ಜೊತೆ ನಟಿಸಿದ್ದ ನಟ ಡಿನೊ ಮೊರಿಯಾ
  • 65 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನ ಆಗಿದೆ

ಕನ್ನಡ ಸಿನಿಮಾನಲ್ಲೂ ನಟನೆ ಮಾಡಿರುವ ಬಾಲಿವುಡ್​​ನ ಜನಪ್ರಿಯ ನಟ ಡಿನೊ ಮೊರಿಯಾ ಬಂಧನಕ್ಕೊಳಗಾಗಿದ್ದಾರೆ. 65.54 ಕೋಟಿ ರೂಪಾಯಿ ಹಗರಣದ ತನಿಖೆಯ ಸಂಬಂಧ ನಟನನ್ನು ಅವರ ಸ್ವಗೃಹದಿಂದಲೇ ಮುಂಬೈ ಪೊಲೀಸ್​​ನ ಆರ್ಥಿಕ ಅಪರಾಧ ಇಲಾಖೆ ಅಧಿಕಾರಿಗಳಹ ವಶಕ್ಕೆ ಪಡೆದಿದ್ದಾರೆ. ಮುಂಬೈನ ಮಿಥಿ ನದಿಯ (Mithi River) ಹೂಳು ತೆಗೆಯುವ ಮತ್ತು ನವೀಕರಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಗಳ ಅವ್ಯವಹಾರ ಹಾಗೂ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.

ಮುಂಬೈನ ಬಾಂದ್ರಾದಲ್ಲಿರುವ ನಟ ಡಿನೊ ಮೊರಿಯಾ ನಿವಾಸದಲ್ಲಿ ಮುಂಬೈ ಪೊಲೀಸರು ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ಬಳಿಕ ನಟನನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಬಿಎಂಸಿ (BMC) ಕಚೇರಿಗೆ ಸುಮಾರು 65.54 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಮಿಥಿ ನದಿ ಹೂಳು ತೆಗೆಯುವ ಗುತ್ತಿಗೆಗೆ ಸಂಬಂಧಿಸಿದಂತೆ ನಡೆದ ಆರ್ಥಿಕ ಅನಿಯಮಿತತೆಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಹಗರಣದಲ್ಲಿ ಗುತ್ತಿಗೆದಾರರು, ಮಧ್ಯವರ್ತಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ಕೈವಾಡವಿರುವ ಬಗ್ಗೆ ತನಿಖಾಧಿಕಾರಿಗಳು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಡಿನೊ ಮೊರಿಯಾ ಅವರನ್ನು ಈ ಹಿಂದೆ ಮೇ 2025ರಲ್ಲೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿತ್ತು. ತನಿಖೆಯ ವೇಳೆ ಪೊಲೀಸರಿಗೆ ದೊರೆತ ಫೋನ್ ದಾಖಲೆಗಳು ಮತ್ತು ನಟನ ಸಹೋದರ ಸ್ಯಾಂಟಿನೋ ಮೊರಿಯಾ ಅವರ ‘ಯುಬಿಒ ರೈಡ್ಜ್’ (UBO Ridez) ಕಂಪನಿಯ ಆರ್ಥಿಕ ವ್ಯವಹಾರಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ಹಗರಣದಲ್ಲಿ ಈಗಾಗಲೇ 2025ರಲ್ಲಿ ಬಂಧನಕ್ಕೊಳಗಾಗಿರುವ ಕೇತನ್ ಕದಮ್ ಎಂಬಾತನ ಮೇಲೆಯೂ ತನಿಖೆಯ ಗಮನಹರಿಸಲಾಗಿದೆ. ನದಿ ಸ್ವಚ್ಛತಾ ಕಾರ್ಯದ ಗುತ್ತಿಗೆಗಳ ಹಂಚಿಕೆ ಮತ್ತು ಅದಕ್ಕೆ ಸಂಬಂಧಿಸಿದ ಹಣಕಾಸಿನ ಪಾವತಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮುಂಬೈ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:Bail Movie Review: ದುಷ್ಟರ ಸಂಹಾರಕ್ಕೆ ಪರ್ಯಾಯ ಮಾರ್ಗ ತೋರಿಸಿದ ‘ಬೇಲ್’ ಸಿನಿಮಾ

ಡಿನೊ ಮೊರಿಯಾ ಬಾಲಿವುಡ್​​ನ ಬಲು ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರು. ಕನ್ನಡದಲ್ಲಿ ನಟಿ ರಮ್ಯಾ ಜೊತೆಗೆ 2006 ರಲ್ಲಿ ಬಿಡುಗಡೆ ಆಗಿದ್ದ ‘ಜೂಲಿ’ ಸಿನಿಮಾನಲ್ಲಿ ನಟಿಸಿದ್ದರು. ಅದರ ಹೊರತಾಗಿ ಹಿಂದಿಯ ಸೂಪರ್ ಹಿಟ್ ಸಿನಿಮಾ ‘ರಾಜ್’, ‘ಜಿಸ್ಮ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಹಿಂದಿ ಸಿನಿಮಾಗಳು ಮಾತ್ರವೇ ಅಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಸಹ ದಿನೊ ಮೊರಿಯೋ ನಟನೆ ಮಾಡಿದ್ದಾರೆ. 2025 ರಲ್ಲಿ ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್ ನಟನೆಯ ‘ಹೌಸ್​​​ಫುಲ್ 5’ ದಿನೊ ನಟಿಸಿದ್ದ ಕೊನೆಯ ಸಿನಿಮಾ. ಇದೀಗ ಅವರು ಮಿಥ್ಯ ನದಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us