ಪರಶುರಾಮನ ಕುರಿತು ಬಾಲಿವುಡ್​ನಲ್ಲಿ ಸಿನಿಮಾ, ನಾಯಕ ಯಾರು?

|

Updated on: Jan 28, 2025 | 5:47 PM

Parashurama: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ‘ಕಾಂತಾರ’ ಪ್ರೀಕ್ವೆಲ್ ಸಿನಿಮಾ ಪರಶುರಾಮನ ಕತೆ ಒಳಗೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೆ ಇದೀಗ ಬಾಲಿವುಡ್ ಮಂದಿ ಸಹ ಪೌರಾಣಿಕ ಪಾತ್ರವಾದ ಪರಶುರಾಮನ ಕುರಿತಾದ ಸಿನಿಮಾ ಮಾಡಲು ಮುಂದಾಗಿದ್ದಾರೆ. ಬಾಲಿವುಡ್​ನ ಖ್ಯಾತ ನಟ ಪರಶುರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪರಶುರಾಮನ ಕುರಿತು ಬಾಲಿವುಡ್​ನಲ್ಲಿ ಸಿನಿಮಾ, ನಾಯಕ ಯಾರು?
Parashurama Movie
Follow us on

‘ಕಾಂತಾರ’ ಸಿನಿಮಾದ ಪ್ರೀಕ್ವೆಲ್​ ಚಿತ್ರೀಕರಣ ಚಾಲ್ತಿಯಲ್ಲಿದೆ. ಈ ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಈ ಸಿನಿಮಾ ವಿಷ್ಣುವಿನ ಆರನೇ ಅವತಾರ ಪರಶುರಾಮನ ಕತೆಯನ್ನು ಒಳಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕರ್ನಾಟಕದ ಕರಾವಳಿ ಭಾಗವನ್ನು ಪರಶುರಾಮನ ಸೃಷ್ಟಿ ಎಂದೇ ಕರೆಯಲಾಗುತ್ತದೆ. ಇದೇ ಕಾರಣಕ್ಕೆ ‘ಕಾಂತಾರ’ ಸಿನಿಮಾ ಪ್ರೀಕ್ವೆಲ್​ನಲ್ಲಿ ಪರಶುರಾಮನ ಕತೆಯನ್ನು ಸಹ ಹೇಳಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಇದೀಗ ಇದೇ ಪರಶುರಾಮನ ಕುರಿತು ಬಾಲಿವುಡ್​ನಲ್ಲೂ ಸಿನಿಮಾ ನಿರ್ಮಾಣವಾಗುತ್ತಿದೆ. ಖ್ಯಾತ ಮತ್ತು ಪ್ರತಿಭಾವಂತ ನಟರೊಬ್ಬರು ಪರಶುರಾಮನ ಪಾತ್ರದಲ್ಲಿ ನಟಿಸಲಿದ್ದಾರೆ.

ಬಯೋಪಿಕ್ ಮಾದರಿಯ ಸಿನಿಮಾಗಳಲ್ಲಿ ನಟಿಸುವಲ್ಲಿ ನಿಸ್ಸೀಮ ಎನಿಸಿಕೊಂಡಿರುವ ವಿಕ್ಕಿ ಕೌಶಲ್ ಅವರು ಪರಶುರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ‘ಸ್ಯಾಮ್ ಬಹದ್ಧೂರ್’ ಸಿನಿಮಾದಲ್ಲಿ ಆರ್ಮಿ ಜನರಲ್ ಮಾಣಿಕ್​ಷಾ, ‘ಸರ್ದಾರ್ ಉದ್ಧಮ್’ ಸಿನಿಮಾದಲ್ಲಿ ಉದ್ಧಮ್ ಸಿಂಗ್, ಈಗ ಬಿಡುಗಡೆ ಆಗಲಿರುವ ‘ಛಾವಾ’ ಸಿನಿಮಾದಲ್ಲಿ ಛತ್ರಪತಿ ಸಾಂಬಾಜಿ ಮಹಾರಾಜ್, ‘ಸಂಜು’ ಸಿನಿಮಾದಲ್ಲಿ ಸಂಜಯ್ ದತ್ ಗೆಳೆಯನ ಪಾತ್ರ ಹೀಗೆ ಹಲವು ಬಯೋಪಿಕ್ ಪಾತ್ರಗಳಲ್ಲಿ ನಟಿಸಿ ತಮ್ಮ ಪ್ರತಿಭೆಯನ್ನು ಹಲವು ಬಾರಿ ಋಜುವಾತುಪಡಿಸಿದ್ದಾರೆ.

ಇದನ್ನೂ ಓದಿ:ಸನ್ಯಾಸಿನಿಯಾದ ಖ್ಯಾತ ಬಾಲಿವುಡ್ ನಟಿ ಮಮತಾ, ಇಲ್ಲಿದೆ ವಿಡಿಯೋ

ಇದೀಗ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದು, ಸಿನಿಮಾದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಪೋಸ್ಟರ್ ನೋಡಿಯೇ ವಿಕ್ಕಿ ಕೌಶಲ್ ಈ ಸಿನಿಮಾಕ್ಕೆ ಸೂಕ್ತ ಆಯ್ಕೆ ಎಂಬುದು ತಿಳಿಯುತ್ತಿದೆ. ಉದ್ದನೆಯ ಗಡ್ಡ ಬಿಟ್ಟು, ಉರಿವ ಕಣ್ಣುಗಳಿಂದ ಸಿಟ್ಟಿನಿಂದ ನೋಡುತ್ತಿರುವ ವಿಕ್ಕಿ ಕೌಶಲ್ ಚಿತ್ರ ಸಖತ್ ಆಗಿದೆ. ಸಿನಿಮಾಕ್ಕೆ ‘ಮಹಾವತಾರ’ ಎಂದು ಹೆಸರಿಡಲಾಗಿದೆ. ನಿರೇನ್ ಭಟ್ಟ ಅವರು ‘ಮಹಾವತಾರ’ ಸಿನಿಮಾಕ್ಕೆ ಚಿತ್ರಕತೆ ರಚಿಸುತ್ತಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.

ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾದ ಕತೆ ಛತ್ರಪತಿ ಶಿವಾಜಿಯ ಪುತ್ರ ಛತ್ರಪತಿ ಸಾಂಬಾಜಿ ಕುರಿತದ್ದಾಗಿದೆ. ಸಿನಿಮಾದ ಬಗ್ಗೆ ಕೆಲ ವಿವಾದಗಳು ಭುಗಿಲೆದ್ದಿವೆ. ಈ ಸಿನಿಮಾದ ಬಿಡುಗಡೆ ಬಳಿಕ ವಿಕ್ಕಿ ಕೌಶಲ್ ‘ಮಹಾವತಾರ’ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ