2022ರಲ್ಲಿ ಬಾಲಿವುಡ್ ಪಾಲಿಗೆ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಆಶಾಕಿರಣ ಆಗಿತ್ತು. ಬೇರೆಲ್ಲ ಸ್ಟಾರ್ ನಟರ ಚಿತ್ರಗಳು ನೆಲ ಕಚ್ಚುತ್ತಿರುವಾಗ ರಣಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಮೋಡಿ ಮಾಡಿತು. ಭಾರತದ ಮಾರುಕಟ್ಟೆಯಲ್ಲಿ ಈ ಚಿತ್ರ ಬರೋಬ್ಬರಿ 257 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಅದರಿಂದ ನಿರ್ದೇಶಕ ಅಯಾನ್ ಮುಖರ್ಜಿ (Ayan Mukerji) ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ರಣಬೀರ್ ಕಪೂರ್ (Ranbir Kapoor) ಮುಖದಲ್ಲಿ ನಗು ಮೂಡಿತು. ‘ಬ್ರಹ್ಮಾಸ್ತ್ರ’ ರಿಲೀಸ್ ಆಗುವುದಕ್ಕೂ ಮುನ್ನವೇ ಅದರ ಪಾರ್ಟ್ 2 ಮತ್ತು ಪಾರ್ಟ್ 3 ಘೋಷಿಸಲಾಗಿತ್ತು. ಈಗ ಆ ಸಿನಿಮಾಗಳ ರಿಲೀಸ್ ದಿನಾಂಕದ ಬಗ್ಗೆ ನಿರ್ದೇಶಕ ಅಯಾನ್ ಮುಖರ್ಜಿ ಅವರು ಅಪ್ಡೇಟ್ ನೀಡಿದ್ದಾರೆ.
ಆರಂಭದಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಟ್ರೋಲ್ ಕಾಟ ಎದುರಾಗಿತ್ತು. ಕಳಪೆ ಗ್ರಾಫಿಕ್ಸ್ ಇದೆ ಎಂಬ ಕಾರಣಕ್ಕೆ ಟ್ರೇಲರ್ ನೋಡಿದವರು ಕಟು ಟೀಕೆ ಮಾಡಿದ್ದರು. ಆದರೆ ಬಾಕ್ಸ್ ಆಫೀಸ್ ಗಳಿಕೆ ಮೇಲೆ ಟ್ರೋಲ್ನಿಂದ ಕೆಟ್ಟ ಪರಿಣಾಮ ಆಗಲಿಲ್ಲ. ಪ್ರೇಕ್ಷಕರ ವಲಯದಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಕೂಡ ಈ ಸಿನಿಮಾ 7 ವಾರಗಳ ಕಾಲ ಪ್ರದರ್ಶನ ಕಂಡು 257 ಕೋಟಿ ರೂಪಾಯಿ ಗಳಿಸಿತು. ಪ್ರೇಕ್ಷಕರಿಂದ ಸಿಕ್ಕ ಬೆಂಬಲ ಕಂಡು ಅಯಾನ್ ಮುಖರ್ಜಿ ಅವರ ಹುಮ್ಮಸ್ಸು ಹೆಚ್ಚಿತು. ಈಗ ಅವರು‘ಬ್ರಹ್ಮಾಸ್ತ್ರ: ಪಾರ್ಟ್ 2’ ಹಾಗೂ ‘ಬ್ರಹ್ಮಾಸ್ತ್ರ: ಪಾರ್ಟ್ 3’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: Ranbir Kapoor: ಮಗಳ ಮೇಲಿನ ಪ್ರೀತಿಗೆ ಸಿನಿಮಾ ಕೆಲಸಗಳಿಂದ ದೂರ ಇರಲು ನಿರ್ಧರಿಸಿದ ರಣಬೀರ್ ಕಪೂರ್
ಸೋಶಿಯಲ್ ಮೀಡಿಯಾದಲ್ಲಿ ಅಯಾನ್ ಮುಖರ್ಜಿ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ‘ಬ್ರಹ್ಮಾಸ್ತ್ರ: ಪಾರ್ಟ್ 2’ ಸಿನಿಮಾ 2026ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಬ್ರಹ್ಮಾಸ್ತ್ರ: ಪಾರ್ಟ್ 3’ ಚಿತ್ರ 2027ರ ಡಿಸೆಂಬರ್ಗೆ ತೆರೆಕಾಣಲಿದೆ. ಅಂದರೆ ಪ್ರೇಕ್ಷಕರು ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಲು 3-4 ವರ್ಷ ಕಾಯಬೇಕು.
ಸಿನಿಮಾಗಳ ಆಯ್ಕೆಯಲ್ಲಿ ರಣಬೀರ್ ಕಪೂರ್ ಅವರು ಚ್ಯೂಸಿ ಆಗಿದ್ದಾರೆ. ತಮಗೆ ಸೂಕ್ತ ಎನಿಸುವ ಸಿನಿಮಾಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಅವರ ಗಮನವೆಲ್ಲ ‘ಅನಿಮಲ್’ ಚಿತ್ರದ ಮೇಲಿದೆ. ಆ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗಲಿದೆ. ‘ಅನಿಮಲ್’ ತೆರೆಕಂಡ ಬಳಿಕ ರಣಬೀರ್ ಕಪೂರ್ ಅವರು ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಮಗಳ ಜೊತೆ ಕಾಲ ಕಳೆಯಬೇಕು ಎಂಬುದು ಅವರ ಉದ್ದೇಶ. ನಂತರ ಅವರು ‘ಬ್ರಹ್ಮಾಸ್ತ್ರ: ಪಾರ್ಟ್ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.