ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್ನ ಬಹುಬೇಡಿಕೆಯ ಮುಂಚೂಣಿಯ ನಟಿ. 15 ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ದೀಪಿಕಾ, ವೃತ್ತಿ ಜೀವನದಲ್ಲಿ ಕೆಳಗಿಳಿದಿದ್ದೇ ಇಲ್ಲ. ಇದಕ್ಕೆ ಕಾರಣ, ಅವರು ಆಯ್ದುಕೊಳ್ಳುವ ಸ್ಕ್ರಿಪ್ಟ್ಗಳು. ಮಾಸ್ ಚಿತ್ರಗಳಾದರೂ ಅದರಲ್ಲಿ ತಮ್ಮ ಪಾತ್ರಕ್ಕೆ ಪ್ರಾಧಾನ್ಯವಿರುವ ಪಾತ್ರಗಳನ್ನು ಮಾತ್ರ ಅವರು ಆಯ್ದುಕೊಳ್ಳುತ್ತಾರೆ. ಇದರ ಜತೆಜತೆಗೆ ಹಲವು ನಾಯಕಿ ಪ್ರಧಾನ ಚಿತ್ರಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ. ಇದೇ ಕಾರಣಕ್ಕೆ ಚಿತ್ರದಿಂದ ಚಿತ್ರಕ್ಕೆ ಅವರು ಮತ್ತಷ್ಟು ಗಟ್ಟಿಯಾಗುತ್ತಿದ್ದಾರೆ ಮತ್ತು ಅವರ ಅಭಿಮಾನಿ ಬಳಗವೂ ಬೆಳೆಯುತ್ತಿದೆ. ಇದೀಗ ದೀಪಿಕಾ ‘ಗೆಹರಾಯಿಯಾ’ (Gehraiyaan) ಚಿತ್ರದ ರಿಲೀಸ್ನ ಸಿದ್ಧತೆಯಲ್ಲಿದ್ದಾರೆ. ಶಕುನ್ ಬಾತ್ರಾ ನಿರ್ದೇಶನದ ಈ ಚಿತ್ರ ಅಮೆಜಾನ್ ಪ್ರೈಮ್ನಲ್ಲಿ ನೇರವಾಗಿ ಫೆಬ್ರವರಿ 11ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ದೀಪಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆಯ ನಂತರ ನಟಿಯರು ಇಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇದೇ ಕಾರಣಕ್ಕೆ ದೀಪಿಕಾ ಚರ್ಚೆಯ ವಿಷಯವೂ ಆಗಿದ್ದರು.
ಆದರೆ ನಟಿ ಇಂತಹ ವಿಚಾರಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಕಾರಣ, ದೀಪಿಕಾ ವೃತ್ತಿ ಜೀವನಕ್ಕೆ ಮುಖ್ಯವಾಗಿ ಬೆಂಬಲ ನೀಡುತ್ತಿರುವುದು ರಣವೀರ್ ಸಿಂಗ್. ದೀಪಿಕಾರ ಪಾತ್ರದ ಆಯ್ಕೆಗಳ ಕುರಿತು ಈರ್ವರಿಗೂ ಸ್ಪಷ್ಟತೆ ಇದೆ. ಇದೀಗ ದೀಪಿಕಾ ಪಾತ್ರಗಳ ಆಯ್ಕೆಯನ್ನು ಹೇಗೆ ಮಾಡುತ್ತಾರೆ ಎಂಬುದರ ಕುರಿತು ವಿಚಾರಗಳು ಬಹಿರಂಗವಾಗಿದೆ.
ದೀಪಿಕಾ ಕತೆಯನ್ನು ಕೇಳಿದ ತಕ್ಷಣ ಒಪ್ಪುವ ಜಾಯಮಾನದವರಲ್ಲವಂತೆ. ಕತೆ ಕೇಳಿದಾಗ ಅವರಿಗೆ ಚಿತ್ರ ಒಪ್ಪಿಕೊಳ್ಳಬೇಕೋ, ಬೇಡವೋ ಎಂಬುದು ಮನಸ್ಸಿಗೆ ಬಂದಿರುತ್ತದಂತೆ. ಅದಾಗ್ಯೂ ತಕ್ಷಣ ನಿರ್ಧಾರ ತಿಳಿಸುವುದಿಲ್ಲ. ಒಂದೆರಡು ದಿನ ಕಾದು, ಆ ನಿರ್ಧಾರ ಗಟ್ಟಿಯಾದ ನಂತರವೇ ಪಾತ್ರವನ್ನು ಒಪ್ಪಿಕೊಳ್ಳುವ ಕುರಿತು ತಿಳಿಸುತ್ತೇನೆ ಎಂದಿದ್ದಾರೆ ದೀಪಿಕಾ.
ರಣವೀರ್ ಬೆಂಬಲದಿಂದಲೇ ಬೋಲ್ಡ್ ಪಾತ್ರಗಳನ್ನು ಆಯ್ದುಕೊಳ್ಳಲು ಸಾಧ್ಯವಾಯಿತು: ದೀಪಿಕಾ
ತಮ್ಮ ಪಾತ್ರಗಳ ಆಯ್ಕೆಯ ವೇಳೆ ದೀಪಿಕಾ ಪತಿ ರಣವೀರ್ ಸಿಂಗ್ ಕುರಿತೂ ಮಾತನಾಡಿದ್ದಾರೆ. ಪತಿಯನ್ನು ಚೀರ್ಲೀಡರ್ ಎಂದು ಕರೆದಿರುವ ದೀಪಿಕಾ, ‘‘ರಣವೀರ್ ನನಗೆ ದೊಡ್ಡ ಬೆಂಬಲವಾಗಿ ನಿಲ್ಲುತ್ತಾರೆ. ಅವರಿಂದಲೇ ನನಗೆ ಬೋಲ್ಡ್ ಪಾತ್ರಗಳನ್ನು ಆಯ್ದುಕೊಳ್ಳಲು ಸಾಧ್ಯವಾಯಿತು’’ ಎಂದು ಹೇಳಿಕೊಂಡಿದ್ದಾರೆ. ರಣವೀರ್ ಬೆಂಬಲವಾಗಿ ನಿಲ್ಲುವುದಲ್ಲದೇ ಅದನ್ನು ಚೆನ್ನಾಗಿ ಮನದಟ್ಟಾಗುವಂತೆ ಹೇಳುತ್ತಾರೆ. ಆದರೆ ನಾನು ಅದರಲ್ಲಿ ಸ್ವಲ್ಪ ಹಿಂದೆ. ನಮ್ಮಲ್ಲಿರೋ ಭಾವನೆಗಳನ್ನು ಪದಗಳಲ್ಲಿ, ನುಡಿಯಲ್ಲಿ ಹಿಡಿದಿಡಲು ನಮಗೆ ತುಸು ಕಷ್ಟ’ ಎಂದಿದ್ದಾರೆ ದೀಪಿಕಾ.
ದೀಪಿಕಾ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ನಲ್ಲಿ ಶಾರುಖ್ ಖಾನ್ ನಟನೆಯ ‘ಪಠಾಣ್’ನಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ‘ಫೈಟರ್’ನಲ್ಲಿ ಹೃತಿಕ್ ರೋಶನ್ ಜತೆ, ‘ಪ್ರಾಜೆಕ್ಟ್ ಕೆ’ಯಲ್ಲಿ ಪ್ರಭಾಸ್ ಜತೆ ದೀಪಿಕಾ ಬಣ್ಣ ಹಚ್ಚಲಿದ್ದಾರೆ. ಪ್ರಸ್ತುತ ‘ಗೆಹರಾಯಿಯಾ’ದಲ್ಲಿ ದೀಪಿಕಾ ಜತೆ ಅನನ್ಯಾ ಪಾಂಡೆ, ಸಿದ್ಧಾಂತ್ ಚತುರ್ವೇದಿ, ಧೈರ್ಯ ಕಾರ್ವಾ ಮೊದಲಾದವರು ನಟಿಸಿದ್ದಾರೆ. ಫೆಬ್ರವರಿ 11ರಂದು ನೇರವಾಗಿ ಒಟಿಟಿಯಲ್ಲಿ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ:
ಅಮೂಲ್ಯ ಪ್ರೆಗ್ನೆನ್ಸಿ ಫೋಟೋಶೂಟ್ ವೈರಲ್: ನೆಚ್ಚಿನ ನಟಿಗೆ ಅಭಿಮಾನಿಗಳ ಶುಭ ಹಾರೈಕೆ
Lata Mangeshkar: ಖ್ಯಾತ ನಟಿ ಶರ್ಮಿಳಾ ಟಾಗೋರ್ ಕಾಲೆಳೆದಿದ್ದ ಲತಾ; ಎಲ್ಲವೂ ಕ್ರಿಕೆಟ್ ಮೇಲಿನ ಪ್ರೀತಿಗಾಗಿ