
ಖ್ಯಾತ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರು ಅಮೆರಿಕದ ಪೌರತ್ವ (US Citizenship) ಪಡೆದಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ವರದಿಗಳ ಬಗ್ಗೆ ಇದುವರೆಗೆ ಮೌನವಾಗಿದ್ದ ದಿಲ್ಜಿತ್ (Diljit Dosanjh) ಅವರು, ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ನಡೆಸಿದ ಲೈವ್ ಸಂವಾದದಲ್ಲಿ ಈ ಬಗ್ಗೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸುವ ಮೂಲಕ ನೇರ ಉತ್ತರ ನೀಡುವುದರಿಂದ ಜಾಣ್ಮೆಯಿಂದ ತಪ್ಪಿಸಿಕೊಂಡಿದ್ದಾರೆ.
ಇತ್ತೀಚೆಗೆ ದಿಲ್ಜಿತ್ ನಟನೆಯ ‘ಸತ್ಲುಜ್’ ಚಿತ್ರವು ಜೀ5 ಒಟಿಟಿಯಿಂದ ಹಠಾತ್ ಡಿಲೀಟ್ ಆದ ಬೆನ್ನಲ್ಲೇ, ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಅಭಿಮಾನಿಯೊಬ್ಬರು, ‘ನೀವು ಅಮೆರಿಕದ ಗ್ರೀನ್ ಕಾರ್ಡ್‌ಗೆ ಅಪ್ಲೈ ಮಾಡುವುದು ಒಳಿತು’ ಎಂದು ಸಲಹೆ ನೀಡಿದ್ದರು. ಇದಕ್ಕೆ ನಗುತ್ತಲೇ ಉತ್ತರಿಸಿದ ದಿಲ್ಜಿತ್, ‘ನಾನು ಒಂದು ಕಾರ್ಡ್ ತಗೊಂಡು ಅದಕ್ಕೆ ಗ್ರೀನ್ ಕಲರ್ ಬಳಿದುಕೊಳ್ಳುತ್ತೇನೆ ಅಷ್ಟೆ! ನಾನಿಲ್ಲಿ ಏನೂ ಮಾತನಾಡುವುದಿಲ್ಲ. ನಾನು ಏನಾದರೂ ಹೇಳಿದರೆ, ಜನ ಉಳಿದೆಲ್ಲವನ್ನೂ ಬಿಟ್ಟು ಇದನ್ನೇ ದೊಡ್ಡ ಬ್ರೇಕಿಂಗ್ ನ್ಯೂಸ್ ಮಾಡಿಬಿಡುತ್ತಾರೆ. ಜಗತ್ತಿನ ನಾಟಕಗಳು ಎಂದಿಗೂ ಮುಗಿಯುವುದಿಲ್ಲ. ಆದರೆ ನನ್ನ ಪ್ರಕಾರ ಯಾರು ಬೇಕಾದರೂ ಯಾವುದೇ ವೀಸಾ ಇಲ್ಲದೆ ಯಾವುದೇ ದೇಶಕ್ಕೆ ಪ್ರಯಾಣಿಸುವಂತಾಗಬೇಕು. ಇಡೀ ಜಗತ್ತೇ ಒಂದಾಗಬೇಕು’ ಎಂದು ಹೇಳಿದ್ದಾರೆ.
ಮತ್ತೊಂದು ಲೈವ್‌ನಲ್ಲಿ ಅಭಿಮಾನಿಯೊಬ್ಬರು ತಮಾಷೆಯಾಗಿ, ‘ನೀವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿ ನಮಗೆಲ್ಲರಿಗೂ ಅಮೆರಿಕದ ಪೌರತ್ವ ಕೊಡಿಸಲು ಸಹಾಯ ಮಾಡಿ’ ಎಂದು ವಿನಂತಿಸಿದರು. ಇದನ್ನು ಕೇಳಿ ಜೋರಾಗಿ ನಕ್ಕ ದಿಲ್ಜಿತ್, ‘ನೀವೆಲ್ಲ ನನ್ನ ಬಗ್ಗೆ ಏನಂದುಕೊಂಡಿದ್ದೀರಿ? ನಾನು ಕೇವಲ ಒಬ್ಬ ಕಲಾವಿದ ಅಷ್ಟೇ. ಪೌರತ್ವದ ಸಮಸ್ಯೆಗಳನ್ನು ಬಗೆಹರಿಸಲು ನಾನು ಅವರಿಗೆ ಹೇಗೆ ಹೇಳಲಿ? ಅವರ ಮಗಳು ನನ್ನನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಾರೆ ನಿಜ. ಆದರೆ ನಾನು ಅವರೊಂದಿಗೆ ಎಂದೂ ಮಾತನಾಡಿಲ್ಲ. ನಾನು ಯಾರ ಬಳಿಯೂ ಸಹಾಯ ಕೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ, ದಿಲ್ಜಿತ್ ದೋಸಾಂಜ್ ಅವರು 2022ರಲ್ಲೇ ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ ಎನ್ನಲಾಗಿದೆ. ಅವರ ಪತ್ನಿ ಸಂದೀಪ್ ಕೌರ್ ಈಗಾಗಲೇ ಯುಎಸ್ ಪ್ರಜೆಯಾಗಿದ್ದು, ದಿಲ್ಜಿತ್ ಕ್ಯಾಲಿಫೋರ್ನಿಯಾದ ಐಷಾರಾಮಿ ಪ್ರದೇಶವೊಂದರಲ್ಲಿ ಐದು ಬೆಡ್‌ರೂಮ್‌ಗಳ ಬಂಗಲೆಯನ್ನು ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಭಾರತದಲ್ಲಿ ‘ಸತ್ಲುಜ್’ ಸಿನಿಮಾ ನಿಷೇಧ; ಡೌನ್‌ಲೋಡ್ ಕಾಪಿ ಹಂಚಿಕೊಳ್ಳಿ ಎಂದ ನಟ ದಿಲ್ಜಿತ್ ದೋಸಾಂಜ್
ಹಿಂದೆ ‘ಪಂಜಾಬ್ 95’ ಎಂದು ಹೆಸರಿಡಲಾಗಿದ್ದ ‘ಸತ್ಲುಜ್’ ಸಿನಿಮಾ, ಪಂಜಾಬ್‌ನ ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತ ಚಿತ್ರವಾಗಿದೆ. 1984ರಿಂದ 1994ರ ನಡುವೆ ಪಂಜಾಬ್‌ನಲ್ಲಿ ನಡೆದ ಸುಮಾರು 25 ಸಾವಿರ ಅಪರಿಚಿತ ಶವಗಳ ರಹಸ್ಯ ಸಂಸ್ಕಾರದ ತನಿಖೆಯನ್ನು ಖಾಲ್ರಾ ನಡೆಸಿದ್ದರು. ಈ ಚಿತ್ರದಲ್ಲಿ ದಿಲ್ಜಿತ್ ಅವರು ಜಸ್ವಂತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಈ ಸಿನಿಮಾವನ್ನು ಒಟಿಟಿಯಲ್ಲಿ ನಿಷೇಧಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.