
ದಿಲ್ಜೀತ್ ದುಸ್ಸಾಂಜ್ (Diljit dosanjh) ತಮ್ಮ ಲೈವ್ ಕಾನ್ಸರ್ಟ್ಗಳಿಂದ ದೇಶ-ವಿದೇಶದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಅವರ ‘ಇಲ್ಲುಮಿನಾಟಿ’ ಟೂರ್ ದೇಶದಲ್ಲಿ ಮಾತ್ರವೇ ಅಲ್ಲದೆ ಹೊರದೇಶಗಳಲ್ಲಿಯೂ ಭಾರಿ ಜನರನ್ನು ಸೆಳೆದಿದೆ. ಪ್ರಸ್ತುತ ಭಾರತದಲ್ಲಿ ಅತಿ ದೊಡ್ಡ ಲೈವ್ ಕಾನ್ಸರ್ಟ್ ಪ್ರದರ್ಶಕ ಎಂದರೆ ಅದು ದಿಲ್ಜೀತ್ ದುಸ್ಸಾಂಜ್. ಗಾಯನ ಮಾತ್ರವಲ್ಲದೆ ಸಿನಿಮಾಗಳಲ್ಲಿ ಬಹಳ ಜನಪ್ರಿಯ. ‘ಅಮರ್ ಸಿಂಗ್ ಚಮ್ಕೀಲಾ’ ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇದೀಗ ಜನಪ್ರಿಯ ಸಿನಿಮಾ ಸರಣಿಯಿಂದ ದಿಲ್ಜೀತ್ ಹೊರನಡೆದಿದ್ದಾರೆ.
ಸಲ್ಮಾನ್ ಖಾನ್, ಅನಿಲ್ ಕಪೂರ್ ಮತ್ತು ಫರ್ದೀನ್ ಖಾನ್ ಅವರುಗಳು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ‘ನೋ ಎಂಟ್ರಿ’ ಕಾಮಿಡಿ ಥ್ರಿಲ್ಲರ್ ಸಿನಿಮಾ ಸಖತ್ ಹಿಟ್ ಆಗಿತ್ತು, ಇದೀಗ ಈ ಸಿನಿಮಾದ ಎರಡನೇ ಭಾಗ ‘ನೋ ಎಂಟ್ರಿ 2’ ನಿರ್ಮಿಸಲು ಯೋಜನೆ ಸಿದ್ಧವಾಗಿದೆ. ಸಿನಿಮಾಕ್ಕೆ ವರುಣ್ ಧವನ್, ದಿಲ್ಜೀತ್ ದುಸ್ಸಾಂಜ್ ಮತ್ತು ಅರ್ಜುನ್ ಕಪೂರ್ ಅವರನ್ನು ಮುಖ್ಯ ಪಾತ್ರ ನಿರ್ವಹಿಸಲು ನಿರ್ದೇಶಕ ಅನೀಸ್ ಬಜೀಂ ಆಯ್ಕೆ ಮಾಡಿದ್ದರು ಆದರೆ ಈಗ ದಿಲ್ಜೀತ್ ದುಸ್ಸಾಂಜ್ ಸಿನಿಮಾದಿಂದ ಹೊರಗೆ ನಡೆದಿದ್ದಾರೆ.
ದಿಲ್ಜೀತ್ ದುಸ್ಸಾಂಜ್, ಸಿನಿಮಾ ತಂಡದ ಬಗ್ಗೆ ಸಂಭಾವನೆ ಬಗ್ಗೆ ಅಸಮಾಧಾನಗೊಂಡಿದ್ದು, ಇದೇ ಕಾರಣಕ್ಕೆ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲಿಯೂ ದಿಲ್ಜೀತ್ ಹೊರನಡೆಯಲು ನಿರ್ಮಾಪಕ ಬೋನಿ ಕಪೂರ್ ಅವರೇ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಬೋನಿ ಕಪೂರ್, ‘ಡೇಟ್ಸ್ ಸಮಸ್ಯೆ ಎದುರಾಗಿದೆ ಆದರೆ ದಿಲ್ಜೀತ್ಗೆ ಚಿತ್ರತಂಡದ ಬಗ್ಗೆ ಬೇಸರ ಇದೆ ಎಂಬುದು ಸುಳ್ಳು’ ಎಂದಿದ್ದರು. ಆದರೆ ಈಗ ಅನೀಸ್ ಬಜೀಂ ಮಾತನಾಡಿರುವುದು ನೋಡಿದರೆ ದಿಲ್ಜೀತ್ ಅಸಮಾಧಾನಗೊಂಡೇ ಸಿನಿಮಾದಿಂದ ಹೊರಹೋಗಿದ್ದಾರೆ ಎನ್ನುವುದು ಖಾತ್ರಿ ಆಗುತ್ತಿದೆ.
ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಗಾಯಕ ದಿಲ್ಜೀತ್ ದೊಸಾಂಜ್
ದಿಲ್ಜೀತ್ ಹೊರನಡೆದಿರುವ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೀಸ್, ‘ಇದೇನು ನನಗೆ ಹೊಸದಲ್ಲ. ಈ ಹಿಂದೆಯೂ ಸಹ ನಾನು ಈ ರೀತಿಯ ಸಂದರ್ಭಗಳನ್ನು ಎದುರಿಸಿದ್ದೇನೆ. ನಾನು ಆಯ್ಕೆ ಮಾಡಿದ ನಟರ ಬದಲಿಗೆ ಬೇರೆ ನಟರೊಟ್ಟಿಗೆ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ. ನನಗೆ ಸಿನಿಮಾ ಮಾಡುವುದು ಖುಷಿಯ ವಿಚಾರ, ಆ ಕೆಲಸವನ್ನು ನಾನು ಮಾಡಿಕೊಂಡು ಹೋಗುತ್ತೀನಿ’ ಎಂದಿದ್ದಾರೆ.
ದಿಲ್ಜೀತ್ ಬಗ್ಗೆ ಮಾತನಾಡಿರುವ ಅನೀಸ್, ‘ದಿಲ್ಜೀತ್ ಅನ್ನು ಕೊನೆಯ ಬಾರಿ ಭೇಟಿ ಆದಾಗ ನಮ್ಮ ಸಭೆ ನಡೆದಿದ್ದು ಕೇವಲ 10 ನಿಮಿಷ ಮಾತ್ರ. ನನ್ನ ಜೀವನದಲ್ಲಿ ಆ ವ್ಯಕ್ತಿಯೊಟ್ಟಿಗೆ 20 ನಿಮಿಷ ಮಾತ್ರ ನಾನು ಭೇಟಿ ಆಗಿದ್ದೀನಿ. ಅವರಿಗೆ ಡೇಟ್ಸ್ ಸಮಸ್ಯೆ ಇದೆ ಎಂದು ಕೇಳ್ಪಟ್ಟಿದ್ದೇನೆ. ಆತ ಒಳ್ಳೆಯ ವ್ಯಕ್ತಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 am, Tue, 3 June 25