
ಖ್ಯಾತ ನಟ ಅಜಯ್ ದೇವಗನ್ (Ajay Devgn) ಅವರು ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿರದ ಅವರಿಗೆ ಈಗ ‘ದೃಶ್ಯಂ 2’ (Drishyam 2) ಸಿನಿಮಾದಿಂದ ಗೆಲುವು ಸಿಕ್ಕಿದೆ. ಬಿಡುಗಡೆಯಾದ ಮೂರೇ ದಿನಕ್ಕೆ ಈ ಸಿನಿಮಾ ಬರೋಬ್ಬರಿ 64.14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಇದು ಮಲಯಾಳಂನ ‘ದೃಶ್ಯಂ 2’ ಚಿತ್ರದ ಹಿಂದಿ ರಿಮೇಕ್. ಉತ್ತರ ಭಾರತದ ಮಂದಿ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಆ ಮೂಲಕ ಮೊದಲ ವೀಕೆಂಡ್ನಲ್ಲಿಯೇ ನಿರ್ಮಾಪಕರ ಜೇಬು ತುಂಬಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ (Drishyam 2 Box Office Collection) ಇದೇ ರೀತಿ ಮುಂದುವರಿದರೆ ಇನ್ನು ಮೂರು ಅಥವಾ ನಾಲ್ಕು ದಿನದಲ್ಲಿ 100 ಕೋಟಿ ರೂಪಾಯಿ ಗಳಿಕೆ ಆಗಲಿದೆ.
ನ.18ರಂದು ‘ದೃಶ್ಯಂ 2’ ಬಿಡುಗಡೆ ಆಯಿತು. ಅಜಯ್ ದೇವಗನ್ ಜೊತೆ ಶ್ರೀಯಾ ಶರಣ್, ಟಬು, ಅಕ್ಷಯ್ ಖನ್ನಾ, ಇಶಿತಾ ದತ್ತ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ದಿನ ಈ ಸಿನಿಮಾದ ಕಲೆಕ್ಷನ್ ಆಗಿದ್ದು 15.38 ಕೋಟಿ ರೂಪಾಯಿ. ಎರಡನೇ ದಿನ ವೀಕೆಂಡ್ ಆದ್ದರಿಂದ ಕಲೆಕ್ಷನ್ ಹೆಚ್ಚಿತು. ಅಂದರೆ, ಶನಿವಾರ (ನ.19) ಬರೋಬ್ಬರಿ 21.59 ಕೋಟಿ ರೂಪಾಯಿ ಆದಾಯ ಬಂತು. ಭಾನುವಾರವಂತೂ (ನ.20) ಚಿತ್ರದ ಗಳಿಕೆ ಗಣನೀಯವಾಗಿ ಏರಿಕೆ ಆಗಿದೆ. ಮೂರನೇ ದಿನ 27.17 ಕೋಟಿ ರೂಪಾಯಿ ಸಂಗ್ರಹ ಆಗುವ ಮೂಲಕ ಈವರೆಗಿನ ಒಟ್ಟು ಕಲೆಕ್ಷನ್ 64.14 ಕೋಟಿ ರೂಪಾಯಿ ಆಗಿದೆ.
‘ದೃಶ್ಯಂ 2’ ಚಿತ್ರಕ್ಕೆ ಅಭಿಷೇಕ್ ಪಾಠಕ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆತ್ಮರಕ್ಷಣೆಗಾಗಿ ನಡೆದ ಒಂದು ಕೊಲೆಯನ್ನು ಕಥಾನಾಯಕ ಮುಚ್ಚಿ ಹಾಕುತ್ತಾನೆ. ತನ್ನ ಕುಟುಂಬದವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಚಾಲಾಕಿತನದಿಂದ ಬಚಾವ್ ಮಾಡುತ್ತಾನೆ. ಇದು ‘ದೃಶ್ಯಂ’ ಮೊದಲ ಪಾರ್ಟ್ ಕಥೆ. ಎರಡನೇ ಪಾರ್ಟ್ನಲ್ಲಿ ಆ ಕೇಸ್ ಮತ್ತೆ ಓಪನ್ ಆಗುತ್ತದೆ. ಹಲವು ಟ್ವಿಸ್ಟ್ಗಳ ಮೂಲಕ ಕಥೆ ಸಾಗುತ್ತದೆ. ಈ ಬಾರಿ ಹೀರೋ ತನ್ನ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಎಂಬುದನ್ನು ನೋಡಲು ಜನರು ಥಿಯೇಟರ್ನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸೌತ್ ಸಿನಿಮಾಗಳ ಅಬ್ಬರದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಿಂದಿ ಸಿನಿಮಾಗಳು ಸೊರಗಿದ್ದವು. ಈಗ ‘ದೃಶ್ಯಂ 2’ ಚಿತ್ರ ಸೂಪರ್ ಹಿಟ್ ಆಗಿರುವುದರಿಂದ ಬಿ-ಟೌನ್ನಲ್ಲಿ ಹೊಸ ಭರವಸೆ ಮೂಡಿದಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.