2023ನೇ ಸಾಲಿನ ಫಿಲ್ಮ್ಫೇರ್ ಅವಾರ್ಡ್ಸ್ (FilmFare Awards) ಕಾರ್ಯಕ್ರಮ ಏಪ್ರಿಲ್ 27ರಂದು ಅದ್ದೂರಿಯಾಗಿ ನೆರವೇರಿದೆ. ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿ ಸೆಲೆಬ್ರಿಟಿಗಳು ಎಲ್ಲರ ಗಮನ ಸೆಳೆದರು. ಅನೇಕರು ಅವಾರ್ಡ್ ಗೆದ್ದು ಸಂಭ್ರಮಿಸಿದರು. ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಹಲವು ಪ್ರಶಸ್ತಿಗಳನ್ನು ಗೆದ್ದು ಬೀಗಿದೆ. ಆಲಿಯಾ ಭಟ್ (Alia Bhatt) ಅವರು ಅತ್ಯುತ್ತಮ ನಟಿ ಅವಾರ್ಡ್ ಗೆಲ್ಲುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದಿದೆ. ಇದಕ್ಕೆ ತಮ್ಮ ಕೆಲಸದ ಮೂಲಕ ಆಲಿಯಾ ಉತ್ತರ ನೀಡಿದ್ದಾರೆ.
ಫೆಬ್ರವರಿ 25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 100+ ಕೋಟಿ ರೂಪಾಯಿ ಬಾಚಿಕೊಂಡಿತು. ಆಲಿಯಾ ಭಟ್ ನಟನೆ ಹಾಗೂ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಎಲ್ಲರ ಗಮನ ಸೆಳೆಯಿತು. ಈ ಚಿತ್ರಕ್ಕೆ ಫಿಲ್ಮ್ಫೇರ್ ಅವಾರ್ಡ್ನಲ್ಲೂ ಮನ್ನಣೆ ಸಿಕ್ಕಿದೆ. ಈ ಚಿತ್ರಕ್ಕೆ ಬರೋಬ್ಬರಿ ಹತ್ತು ಪ್ರಶಸ್ತಿಗಳು ಸಿಕ್ಕಿವೆ.
ಇದನ್ನೂ ಓದಿ: Filmfare 2023: 68ನೇ ಫಿಲ್ಮ್ಫೇರ್ ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ
ಪ್ರಮುಖ ಎನಿಸಿಕೊಂಡಿರುವ ಅತ್ಯುತ್ತಮ ಸಿನಿಮಾ ಪ್ರಶಸ್ತಿ ‘ಗಂಗೂಬಾಯಿ ಕಾಠಿಯಾವಾಡಿ’ಗೆ ಸಿಕ್ಕಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ನಟನೆಗೆ ಅತ್ಯುತ್ತಮ ನಟಿ ಅವಾರ್ಡ್ ದೊರೆತಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂಜಯ್ ಲೀಲಾ ಬನ್ಸಾಲಿ ಪಾಲಾಗಿದೆ. ಇನ್ನು ಈ ಚಿತ್ರದ ಡೈಲಾಗ್ಗಳು ಖಡಕ್ ಆಗಿತ್ತು. ಹೀಗಾಗಿ, ಈ ಚಿತ್ರಕ್ಕೆ ಸಂಭಾಷಣೆ ಬರೆದ ಪ್ರಕಾಶ್ ಕಪಾಡಿಯಾ ಹಾಗೂ ಉತ್ಕರ್ಷಿಣಿ ವಸಿಷ್ಠಗೆ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ಸಿಕ್ಕಿದೆ.
ಇದನ್ನೂ ಓದಿ: ‘ಫಿಲ್ಮ್ಫೇರ್’ ಪ್ರಶಸ್ತಿ ತಿರಸ್ಕರಿಸಿದ ವಿವೇಕ್ ಅಗ್ನಿಹೋತ್ರಿ; ಈ ನಿರ್ಧಾರದ ಹಿಂದಿದೆ ಪ್ರಮುಖ ಕಾರಣ
‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜನೆ ಮಾಡಿದ ಸಂಚಿತ್ ಬಲ್ಹಾರಾ, ಅಂಕಿತ್ ಬಲ್ಹಾರಾಗೆ ‘ಅತ್ಯುತ್ತಮ ಹಿನ್ನೆಲೆ ಸಂಗೀತ’ ಪ್ರಶಸ್ರಿ ಸಿಕ್ಕಿದೆ. ಇಷ್ಟೇ ಅಲ್ಲದೆ ಬೆಸ್ಟ್ ಪ್ರೊಡಕ್ಷನ್ ಡಿಸೈನ್(ಸುಬ್ರತಾ, ಅಮಿತ್), ಅತ್ಯುತ್ತಮ ವಸ್ತ್ರವಿನ್ಯಾಸ (ಶೀಥಲ್ ಇಕ್ಬಾಲ್ ಶರ್ಮಾ), ಅತ್ಯುತ್ತಮ ಕೊರಿಯೋಗ್ರಫಿ (ಕೃತಿ ಮಹೇಶ್), ಅತ್ಯುತ್ತಮ ಸಿನಿಮಾಟೊಗ್ರಫಿ (ಸುದೀಪ್ ಚಟರ್ಜಿ), ಅಪ್ಕಮಿಂಗ್ ಮ್ಯೂಸಿಕ್ ಟ್ಯಾಲೆಂಟ್ (ಗಾಯಕಿ ಶ್ರೀಮಂಕರ್) ಅವಾರ್ಡ್ ಕೂಡ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ