ಒಂದು ಪೈರಸಿ ಲಿಂಕ್​​ನಿಂದ ಬಾಲಿವುಡ್​​ಗೆ ಆಯ್ತು ಸಾವಿರಾರು ಕೋಟಿ ಲಾಭ

Indian movie: ಚಿತ್ರರಂಗದವರ ಮೊದಲ ಶತ್ರು ಎಂದರೆ ಪೈರಸಿ, ಅದರಿಂದ ಸಾವಿರಾರು ಕೋಟಿ ನಷ್ಟವಾಗುತ್ತಿದೆ ಎಂದು ದೂರುತ್ತಲೇ ಇರುತ್ತಾರೆ ಚಿತ್ರರಂಗದವರು. ಆದರೆ ಅದೇ ಒಂದು ಪೈರಸಿ ಲಿಂಕಿನಿಂದಾಗಿ ಭಾರತೀಯ ಚಿತ್ರರಂಗಕ್ಕೆ ವಿಶೇಷವಾಗಿ ಬಾಲಿವುಡ್​​ಗೆ ಈ ವರೆಗೆ ಸುಮಾರು 5000 ಕೋಟಿ ಲಾಭ ಆಗಿದೆ. ಲಕ್ಷಾಂತರ ಕೋಟಿ ಲಾಭದ ಅವಕಾಶ ತೆರೆದುಕೊಂಡಿದೆ ಎಂಬುದು ಗೊತ್ತೆ? ಅದು ಹೇಗೆ ಸಾಧ್ಯ? ವಿವರ ಇಲ್ಲಿದೆ ನೋಡಿ...

ಒಂದು ಪೈರಸಿ ಲಿಂಕ್​​ನಿಂದ ಬಾಲಿವುಡ್​​ಗೆ ಆಯ್ತು ಸಾವಿರಾರು ಕೋಟಿ ಲಾಭ
Indian Movie In China

Updated on: Mar 31, 2026 | 3:53 PM

ಚಿತ್ರರಂಗದವರ ಮೊದಲ ಶತ್ರು ಎಂದರೆ ಪೈರಸಿ (Piracy), ಅದರಿಂದ ಸಾವಿರಾರು ಕೋಟಿ ನಷ್ಟವಾಗುತ್ತಿದೆ ಎಂದು ದೂರುತ್ತಲೇ ಇರುತ್ತಾರೆ ಚಿತ್ರರಂಗದವರು. ಆದರೆ ಅದೇ ಒಂದು ಪೈರಸಿ ಲಿಂಕಿನಿಂದಾಗಿ ಭಾರತೀಯ ಚಿತ್ರರಂಗಕ್ಕೆ ವಿಶೇಷವಾಗಿ ಬಾಲಿವುಡ್​​ಗೆ ಈ ವರೆಗೆ ಸುಮಾರು 5000 ಕೋಟಿ ಲಾಭ ಆಗಿದೆ. ಲಕ್ಷಾಂತರ ಕೋಟಿ ಲಾಭದ ಅವಕಾಶ ತೆರೆದುಕೊಂಡಿದೆ ಎಂಬುದು ಗೊತ್ತೆ? ಅದು ಹೇಗೆ ಸಾಧ್ಯ? ವಿವರ ಇಲ್ಲಿದೆ ನೋಡಿ…

ಚೀನಾ, ವಿಶ್ವದ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಗಳಲ್ಲಿ ಒಂದು. ಚೀನಾ ಒಂದರಲ್ಲೇ 90 ಸಾವಿರಕ್ಕೂ ಹೆಚ್ಚು ಸ್ಕ್ರೀನ್​​ಗಳು ಇವೆ. ಭಾರತಕ್ಕಿಂತಲೂ ಬಹಳ ಹೆಚ್ಚು ಮಂದಿ ಇಲ್ಲಿ ಸಿನಿಮಾ ನೋಡುತ್ತಾರೆ. ಆದರೆ ಭಾರತದ ಸಿನಿಮಾಗಳು ಚೀನಾದಲ್ಲಿ ಬಿಡುಗಡೆ ಆಗುತ್ತಿದ್ದಿದ್ದೇ ಬಹಳ ಕಡಿಮೆ. 1951ರಲ್ಲಿ ರಾಜ್ ಕಪೂರ್ ಅವರ ‘ಆವಾರ’ ಸಿನಿಮಾ ಇಲ್ಲಿ ‘ಸಾಂಸ್ಕೃತಿಕ ವಿನಿಮಯ’ ಯೋಜನೆಯಡಿ ಪ್ರದರ್ಶನಗೊಂಡು ದೊಡ್ಡ ಹಿಟ್ ಆಗಿತ್ತು. ಇದೇ ಸಿನಿಮಾ ರಷ್ಯಾ, ಜಪಾನ್​​ಗಳಲ್ಲಿಯೂ ಭಾರಿ ದೊಡ್ಡ ಹಿಟ್ ಆಗಿತ್ತು. ಆದರೆ ಈ ಆ ಬಳಿಕ ಚೀನಾದಲ್ಲಿ ಭಾರತೀಯ ಸಿನಿಮಾಗಳು ಹೆಚ್ಚು ಸದ್ದು ಮಾಡಿರಲಿಲ್ಲ. ಆದರೆ 2009-10ರಲ್ಲಿ ಚಿತ್ರಣವೇ ಬದಲಾಯ್ತು. ಅದೂ ಒಂದು ಪೈರಸಿ ಲಿಂಕ್​​ನಿಂದ.

2009 ರಲ್ಲಿ ಆಮಿರ್ ಖಾನ್ ನಟನೆಯ ‘3 ಇಡಿಯಟ್ಸ್’ ಸಿನಿಮಾ ಬಿಡುಗಡೆ ಆಯ್ತು. ಭಾರತದಲ್ಲಿ ಇದು ದೊಡ್ಡ ಹಿಟ್, ಚೈನಾದಲ್ಲಿ ಸಿನಿಮಾ ಬಿಡುಗಡೆ ಆಗಲಿಲ್ಲ. ಆದರೆ ಅಲ್ಲಿನ ಕಾಲೇಜೊಂದರಲ್ಲಿ ಈ ಸಿನಿಮಾವನ್ನು ಪೈರಸಿ ಲಿಂಕ್ ಮೂಲಕ ಡೌನ್​​ಲೋಡ್ ಮಾಡಿಕೊಂಡು ಕೆಲವು ಭಾರತೀಯ ವಿದ್ಯಾರ್ಥಿ ನೋಡಿದರು. ಅದು ಹಾಗೆಯೇ ಹಬ್ಬಿತು. ಯಾವ ಮಟ್ಟಿಗಾಯ್ತೆಂದರೆ ‘3 ಇಡಿಯಟ್ಸ್’ ಸಿನಿಮಾ ಚೀನಾನಲ್ಲಿ ಬಿಡುಗಡೆ ಆಗದಿದ್ದರೂ ಸಹ ಈಗಲೂ ಚೀನಾದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ‘3 ಇಡಿಯಟ್ಸ್’ 12ನೇ ಸ್ಥಾನದಲ್ಲಿ ಇದೆ. ಭಾರತದ ರೀತಿಯಲ್ಲೇ ಮಕ್ಕಳನ್ನು ಶಿಕ್ಷಣಕ್ಕಾಗಿ ಅತಿಯಾಗಿ ಒತ್ತಾಯ ಮಾಡುವ, ಬಲವಂತದ ಶಿಸ್ತು ಹೇರುವ ದೇಶ ಚೀನಾ, ಇದರ ವಿರುದ್ಧ ಮಾತನಾಡುವ ‘3 ಇಡಿಯಟ್ಸ್’ ಸಿನಿಮಾ ಸಹಜವಾಗಿಯೇ ಅಲ್ಲಿನ ಜನರಿಗೆ ಬಹಳ ಇಷ್ಟವಾಯ್ತು.

ಇದನ್ನೂ ಓದಿ:ಚೀನಾದ ಡೆಹುವಾದಲ್ಲಿ ಭೀಕರ ಅಗ್ನಿ ಅವಘಡ

ಆಮಿರ್ ಖಾನ್ ಅವರು ಚೀನಾದ ದೊಡ್ಡ ಸ್ಟಾರ್ ಆಗಿಬಿಟ್ಟರು. ಚೀನಾ ಜನ ಆಮಿರ್ ಅವರನ್ನು ‘ಅಂಕಲ್ ಆಮಿರ್’ ಎಂದೇ ಕರೆಯುತ್ತಾರೆ. ಚೀನಾದಲ್ಲಿ ಸೃಷ್ಟಿಯಾಗಿರುವ ತಮ್ಮ ಜನಪ್ರಿಯತೆಯಿಂದಾಗಿ ಆಮಿರ್ ತಮ್ಮ ಮುಂದಿನ ಸಿನಿಮಾ ‘ಪಿಕೆ’ಯನ್ನು ಅಲ್ಲಿ ರಿಲೀಸ್ ಮಾಡಿದರು. ಆ ಸಿನಿಮಾ ಸುಮಾರು 100 ಕೋಟಿ ಮಾಡಿತು. ಆದರೆ ಅದಾದ ಬಳಿಕ ‘ದಂಗಲ್’ ಸಿನಿಮಾ ಬಿಡುಗಡೆ ಮಾಡಿದರು. ಅದು ಬ್ಲಾಕ್ ಬಸ್ಟರ್ ಆಯ್ತು. ಭಾರತದಲ್ಲಿ ಮತ್ತು ಇಡೀ ವಿಶ್ವದಲ್ಲಿ ಸಿನಿಮಾ ಗಳಿಕೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಹಣವನ್ನು ‘ದಂಗಲ್’ ಸಿನಿಮಾ ಕೇವಲ ಚೀನಾನಲ್ಲಿ ಮಾತ್ರವೇ ಗಳಿಕೆ ಮಾಡಿದೆ. ಇದೇ ಕಾರಣಕ್ಕೆ 2016 ರಿಂದ ಈಗಿನ ವರೆಗೆ ‘ದಂಗಲ್’ ಭಾರತದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ‘ಬಾಹುಬಲಿ’, ‘ಧುರಂಧರ್’ ಸಹ ಅದನ್ನು ಬ್ರೇಕ್ ಮಾಡಲು ಆಗಿಲ್ಲ.

‘ದಂಗಲ್’ ಹಿಟ್ ಆಗಲು ಸಹ ಕಾರಣ ಇತ್ತು. ಚೀನಾದ ಸಿಂಗಲ್ ಚೈಲ್ಡ್ ಪಾಲಿಸಿಯಿಂದಾಗಿ ಅಲ್ಲಿ ಹೆಣ್ಣು ಮಕ್ಕಳ ಪೋಷಕರಾದವರನ್ನು ಸಮಾಜ ತುಚ್ಛವಾಗಿ ನೋಡುತ್ತಿತ್ತು, ಆದರೆ ‘ದಂಗಲ್’ನಲ್ಲಿ ಆಮಿರ್, ಹೆಣ್ಣು ಮಕ್ಕಳನ್ನೇ ಗಂಡು ಮಕ್ಕಳಂತೆ ಬೆಳೆಸಿದ ಸಿನಿಮಾ ಸಹಜವಾಗಿಯೇ ಚೀನಾದ ಪೋಷಕರಿಗೆ ಭಾರಿ ಇಷ್ಟವಾಯ್ತು. ಸಿನಿಮಾ ಭಾರಿ ದೊಡ್ಡ ಗಳಿಕೆ ಮಾಡಿದೆ. ಆಮಿರ್, ಚೀನಾದಲ್ಲಿ ಇನ್ನೂ ದೊಡ್ಡ ಸ್ಟಾರ್ ಆಗಿಬಿಟ್ಟರು. ಬಳಿಕ ಆಮಿರ್ ಅವರ ‘ಸೀಕ್ರೆಟ್ ಸೂಪರ್​​ಸ್ಟಾರ್’ ಭಾರತದಲ್ಲಿ ಫ್ಲಾಪ್ ಆಯ್ತು, ಆದರೆ ಚೀನಾದಲ್ಲಿ ದೊಡ್ಡ ಹಿಟ್.

ಕೇವಲ ಆಮಿರ್ ಸಿನಿಮಾ ಮಾತ್ರವಲ್ಲ, ಎಲ್ಲ ಒಳ್ಳೆಯ ಭಾರತೀಯ ಸಿನಿಮಾಗಳನ್ನು ಚೀನಾ ಜನ ನೋಡಲು ಆರಂಭಿಸಿದರು. ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸಿನಿಮಾ ಚೀನಾ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ ಅನ್ನೇ ಮಾಡಿತು. 500 ಕೋಟಿಗೂ ಹೆಚ್ಚು ಮೊತ್ತವನ್ನು ಆ ಸಿನಿಮಾ ಚೀನಾನಲ್ಲಿ ಗಳಿಕೆ ಮಾಡಿತು. ಭಾರತದಲ್ಲಿ ಫ್ಲಾಪ್ ಆದ ‘ಹಿಂದಿ ಮೀಡಿಯಂ’ ಸಿನಿಮಾ ಸಹ ಚೀನಾದಲ್ಲಿ ದೊಡ್ಡ ಹಿಟ್, ಏಕೆಂದರೆ ಅದು ಇಂಗ್ಲೀಷ್ ಭಾಷೆಯ ಕಲಿಕೆ, ಪೋಷಕರು ಮತ್ತು ಮಕ್ಕಳ ನಡುವಿನ ಕತೆ ಹೊಂದಿತ್ತು.

ಸಲ್ಮಾನ್ ಖಾನ್ ನಟನೆಯ ‘ಭಜರಂಗಿ ಭಾಯಿಜಾನ್’, ‘ಅಂದಾಧುನ್’, ‘ಟಾಯ್ಲೆಟ್: ಏಕ್ ಪ್ರೇಮ್​​ಕಥಾ’ ಇನ್ನೂ ಹಲವು ಸಿನಿಮಾಗಳು ಚೀನಾನಲ್ಲಿ ಭಾರಿ ದೊಡ್ಡ ಹಿಟ್ ಆದವು. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಪೈರಸಿ ಲಿಂಕ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us