
ಬಾಲಿವುಡ್ನ ಸ್ಟಾರ್ ಯುವ ನಟಿ ಜಾನ್ಹವಿ ಕಪೂರ್ (Janhvi Kapoor). ಇತ್ತೀಚೆಗೆ ದಕ್ಷಿಣದಲ್ಲೂ ಸಹ ಜೂ ಎನ್ಟಿಆರ್, ರಾಮ್ ಚರಣ್ ಅಂಥಹಾ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ಮುಂಚೂಣಿಯಲ್ಲಿರುವ ಯುವನಟಿ ಎನಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊಕಾ-ಕೊಲಾ ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡುಗಳ ರಾಯಭಾರಿ ಆಗಿದ್ದಾರೆ. ಭಾರತದ ಬ್ಯುಸಿ ಸ್ಟಾರ್ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಪಾರದರ್ಶಕತೆಗೆ ಒತ್ತು ಕೊಡುವ ನಟಿಯೂ ಸಹ ಆಗಿದ್ದು, ಇದೀಗ ಅವರ ಕುಡಿತದ ಚಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಜಾನ್ಹವಿ ಕಪೂರ್, ತಾವು ಕುಡಿತದ ದಾಸಿಯಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಮೊದಲೆಲ್ಲ ಯಾವಾಗಲಾದರೂ ಒಮ್ಮೆ, ಯಾವುದಾದರೂ ಪಾರ್ಟಿಗಳಲ್ಲಿ, ಸೋಷಿಯಲ್ ಗಾದರಿಂಗ್ಗಳಲ್ಲಿ ಮಾತ್ರ ಕುಡಿಯುತ್ತಿದ್ದೆ. ಆದರೆ ನಿಧಾನಕ್ಕೆ ಕುಡಿತ ಎನ್ನುವುದು ನನ್ನ ಮೇಲೆ ಕಂಟ್ರೋಲ್ ಸಾಧಿಸಿತು. ಬರ-ಬರುತ್ತಾ ಮದ್ಯದ ದಾಸಿಯಾಗಿದ್ದೆ. ಒಂದು ಹಂತದಲ್ಲಿ ಪ್ರತಿದಿನವೂ ನಾನು ಹ್ಯಾಂಗೋವರ್ನಿಂದೇ ಏಳುತ್ತಿದ್ದೆ’ ಎಂದಿದ್ದಾರೆ ನಟಿ.
‘ಕುಡಿತ ನನ್ನ ಜೀವನದ ವಿಲನ್ ಆಗಿಬಿಟ್ಟಿತ್ತು. ನನಗೆ ರಿಯಾಲಿಟಿ ಅರ್ಥವಾಗುವಷ್ಟರಲ್ಲಿ ಕುಡಿತದ ಚಟದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲು ಆರಂಭಿಸಿದ್ದೆ. ಆದರೆ ನಿಧಾನಕ್ಕೆ ನಾನು ಅದರಿಂದ ಹೊರಗೆ ಬಂದೆ. ಈಗ ಮದ್ಯದ ಸಣ್ಣ ವಾಸನೆಯನ್ನೂ ಸಹಿಸಲಾರದಂತೆ ಆಗಿದ್ದೀನಿ. ಚಟ ಎಂಬುದು ಬಹಳ ಅಪಾಯಕಾರಿಯಾದುದು. ಚಟದಿಂದ ಬಳಲುತ್ತಿರುವವರನ್ನು ಪಶುಗಳಂತೆ ನೋಡದೆ, ಅವರನ್ನು ಪ್ರೀತಿಯಿಂದ ನಿಭಾಯಿಸಿ, ಅವರಿಗೆ ಸಹಾಯ ಮಾಡಿ’ ಎಂದು ಜಾನ್ಹವಿ ಹೇಳಿದ್ದಾರೆ.
ಇದನ್ನೂ ಓದಿ;ಜಾನ್ಹವಿ ಕಪೂರ್ ಮನೆಯಲ್ಲಿ ಹೀಗಿದೆ ಕ್ರಿಸ್ಮಸ್ ಸಂಭ್ರಮ: ವಿಡಿಯೋ
‘ಮದ್ಯದ ವ್ಯಸನವು ವ್ಯಕ್ತಿಯ ನಡವಳಿಕೆ ಮತ್ತು ಸಂಬಂಧಗಳ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತದೆ. ನಮಗೇ ಪರಿಚಯ ಇಲ್ಲದ ನಮ್ಮ ಮತ್ತೊಂದು ರೂಪವನ್ನು ಅದು ತೋರಿಸುತ್ತದೆ. ನನ್ನ ಸ್ನೇಹಿತರು, ಕುಟುಂಬದವರು ಭಿನ್ನ ರೀತಿಯಿಂದ ನನ್ನನ್ನು ನೋಡುವಂತೆ ಮಾಡಿತು. ಅದು ನನ್ನ ಜೀವನಕ್ಕೆ ಮಾಡಿದ ಡ್ಯಾಮೇಜ್ ಅನ್ನು ನಾನು ಗುರುತಿಸಿದೆ, ಕೊನೆಗೆ ಅದರಿಂದ ನಾನು ಮುಕ್ತಳಾದೆ’ ಎಂದು ಜಾನ್ಹವಿ ಕಪೂರ್ ಹೇಳಿದ್ದಾರೆ.
ಜಾನ್ಹವಿ ಕಪೂರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಜೂ ಎನ್ಟಿಆರ್ ಜೊತೆಗೆ ‘ದೇವರ 2’ ಸಿನಿಮಾನಲ್ಲಿ ಜಾನ್ಹವಿ ನಟಿಸಲಿದ್ದಾರೆ. ವರುಣ್ ಧವನ್ ಜೊತೆಗೆ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹಿಂದಿಯಲ್ಲಿ ಇನ್ನೂ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 pm, Sun, 19 April 26