
ನಟ ಕಾರ್ತಿಕ್ ಆರ್ಯನ್ (Kartik Aaryan) ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಅವರು ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದಿದೆ. ಈ ಒಂದು ದಶಕದಲ್ಲಿ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿರುವುದು ‘ಭೂಲ್ ಭುಲಯ್ಯ 2’ (Bhool Bhulaiyaa 2) ಸಿನಿಮಾದಿಂದ. ಹೌದು, ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡುತ್ತಿದೆ. ಬಿಡುಗಡೆಯಾಗಿ 16 ದಿನ ಕಳೆದಿದ್ದರೂ ಕೂಡ ಈ ಸಿನಿಮಾದ ಆರ್ಭಟ ಕಮ್ಮಿ ಆಗಿಲ್ಲ. 16ನೇ ದಿನವೂ 4.55 ಕೋಟಿ ರೂಪಾಯಿ ಕಲೆಕ್ಷನ್ (Box Office Collection) ಮಾಡಿದೆ. ಆ ಮೂಲಕ ‘ಭೂಲ್ ಭುಲಯ್ಯ 2’ ಚಿತ್ರದ ಒಟ್ಟಾರೆ ಗಳಿಕೆ 149.11 ಕೋಟಿ ರೂಪಾಯಿ ಆಗಿದೆ. ಇಂದು (ಜೂನ್ 5) ಭಾನುವಾರ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಅದರ ಪರಿಣಾಮವಾಗಿ ಈ ಸಿನಿಮಾ 150 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದು ಕಾರ್ತಿಕ್ ಆರ್ಯನ್ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.
ಬಾಲಿವುಡ್ನ ಕೆಲವರು ಕಾರ್ತಿಕ್ ಆರ್ಯನ್ ವಿರುದ್ಧ ಸಂಚು ರೂಪಿಸಿದ್ದಾರೆ ಎಂಬ ಮಾತಿದೆ. ಕಾರ್ತಿಕ್ ಆರ್ಯನ್ಗೆ ಸಿಗಬೇಕಿದ್ದ ಹಲವು ಆಫರ್ಗಳು ಹಿಂದಿ ಚಿತ್ರರಂಗದ ಕೆಲವು ಪ್ರಭಾವಿ ವ್ಯಕ್ತಿಗಳಿಂದಾಗಿ ತಪ್ಪಿ ಹೋಗಿವೆ. ಮೂವೀ ಮಾಫಿಯಾದವರ ಗುಂಪುಗಾರಿಕೆಯ ಕಾರಣದಿಂದ ಅವರನ್ನು ಸೈಡ್ ಲೈನ್ ಮಾಡಲಾಗಿದೆ. ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್ಗಳು ಕಾರ್ತಿಕ್ ಆರ್ಯನ್ಗೆ ಅವಕಾಶ ನೀಡುತ್ತಿಲ್ಲ ಎಂಬ ಮಾತಿದೆ. ಈ ಎಲ್ಲ ತಿರಸ್ಕಾರದ ನಡುವೆಯೂ ಕಾರ್ತಿಕ್ ಆರ್ಯನ್ ಅವರು ಗೆದ್ದು ತೋರಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಬದಿಯ ಹೋಟೆಲ್ನಲ್ಲಿ ಊಟ ಮಾಡಿದ ಈ ಸ್ಟಾರ್ ನಟನನ್ನು ಗುರುತಿಸುತ್ತೀರಾ? ಇಲ್ಲಿದೆ ವೈರಲ್ ವಿಡಿಯೋ
‘ಭೂಲ್ ಭುಲಯ್ಯ 2’ ಸಿನಿಮಾದ ಗೆಲುವು ತುಂಬ ವಿಶೇಷವಾಗಿದೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳು ಸೂಕ್ತ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿಲ್ಲ. ಅಂಥದ್ದರಲ್ಲಿ ಕಾರ್ತಿಕ್ ಆರ್ಯನ್ ನಟನೆಯ ಈ ಸಿನಿಮಾ 150 ಕೋಟಿ ರೂಪಾಯಿ ಕಮಾಯಿ ಮಾಡಿರುವುದು ಅಚ್ಚರಿಯೇ ಸರಿ. ಅಲ್ಲದೇ, ಈ ಚಿತ್ರಕ್ಕೆ ಅನೇಕರ ಪೈಪೋಟಿ ಇತ್ತು. ಕಂಗನಾ ನಟನೆಯ ‘ಧಾಕಡ್’ ಚಿತ್ರದ ಎದುರು ‘ಭೂಲ್ ಭುಲಯ್ಯ 2’ ರಿಲೀಸ್ ಆಯಿತು. ಆ ಪೈಪೋಟಿಯನ್ನು ಕಾರ್ತಿಕ್ ಆರ್ಯನ್ ಸಿನಿಮಾ ಎದುರಿಸಿದೆ. ಅಲ್ಲದೇ, ಈ ವಾರ (ಜೂನ್ 3) ಬಿಡುಗಡೆಯಾದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದ ಜೊತೆಗೂ ‘ಭೂಲ್ ಭುಲಯ್ಯ 2’ ಚಿತ್ರ ಕಠಿಣ ಸ್ಪರ್ಧೆ ನೀಡುತ್ತಿದೆ.
ಆದಷ್ಟು ಬೇಗ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಲಿ ಎಂದು ಕಾರ್ತಿಕ್ ಆರ್ಯನ್ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ಸಿನಿಮಾದ ಕಲೆಕ್ಷನ್ ಬಗ್ಗೆ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:18 pm, Sun, 5 June 22